ಶಿವಮೊಗ್ಗ ಲೈವ್.ಕಾಂ | ಸೊರಬ
ಕೌಟುಂಬಿಕ ಕಲಹದಿಂದ ಮನನೊಂದಿದ್ದ ಮಹಿಳೆಯೊಬ್ಬರು ಮಗಳೊಂದಿಗೆ ವರದಾನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಯುವಕರ ಸಮಯ ಪ್ರಜ್ಞೆಯಿಂದ ಇಬ್ಬರು ಪರಾಗಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಗಂಡ-ಹೆಂಡತಿ ಮಧ್ಯೆ ಜಗಳವಾಗಿ ಮಹಿಳೆಯು, ತನ್ನ ಮಗಳ ಜೊತೆಗೆ ಚಂದ್ರಗುತ್ತಿ ಸಮೀಪದ ವರದಾನದಿಯ ಬಳಿ ತೆರಳಿದ್ದರು. ಮಗಳನ್ನು ನದಿಗೆ ತಳ್ಳುತ್ತಿದ್ದಾಗ ಮಗಳು ರಕ್ಷಣೆಗಾಗಿ ಕೂಗಿಕೊಂಡಿದ್ದಾಳೆ. ಸಮೀಪದಲ್ಲೇ ಮೀನು ಹಿಡಿಯುತ್ತಿದ್ದ ಯುವಕರಾದ ಸಾಹಿಲ್, ಸೋನು ಮತ್ತು ಯಾಸಿನ್ ಚಿಕ್ಕಮಾಕೊಪ್ಪ ಅವರು ಅಲ್ಲಿಗೆ ದೌಡಾಯಿಸಿದ್ದರು.

ತಕ್ಷಣವೇ ನದಿಗೆ ಹಾರಿ ತಾಯಿ ಮತ್ತು ಮಗಳನ್ನು ರಕ್ಷಿಸಿದ್ದಾರೆ. ಯುವಕರ ಸಮಯ ಪ್ರಜ್ಞೆ, ಮಾನವೀಯತೆಗೆ ಜಿಲ್ಲಾ ಪೊಲೀಸ್ ಹಾಗೂ ಸೊರಬ ಪೊಲೀಸ್ ಠಾಣೆ ವತಿಯಿಂದ ಯುವಕರನ್ನು ಗೌರವಿಸಲಾಯಿತು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.