SHIVAMOGGA LIVE NEWS, 10 ಡಿಸೆಂಬರ್ 2024
ತೀರ್ಥಹಳ್ಳಿ : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ಇನ್ನಿಲ್ಲ. ಅವರ ನಿಧನಕ್ಕೆ ಇಡೀ ರಾಜ್ಯ ಕಂಬನಿ ಮಿಡಿಯುತ್ತಿದೆ. ಇತ್ತ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಗ್ರಾಮದಿಂದಲೇ ಎಸ್.ಎಂ.ಕೃಷ್ಣ ಅವರ ವೈಯಕ್ತಿಕ ಜೀವನ ಹೊಸ ತಿರುವು ಪಡೆದಿದ್ದು. ಇದೇ ಕಾರಣಕ್ಕೆ ತೀರ್ಥಹಳ್ಳಿ ಮತ್ತು ಕುಡುಮಲ್ಲಗೆ ಅಂದರೆ ಎಸ್.ಎಂ.ಕೃಷ್ಣ ಅವರಿಗೆ ಅಚ್ಚುಮೆಚ್ಚು.
ಕುಡುಮಲ್ಲಿಗೆಯ ಅಳಿಯ ಕೃಷ್ಣ
ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮದವರು. ಇಲ್ಲಿನ ಪ್ರಮುಖ ಅಡಿಕೆ ಬೆಳೆಗಾರ ಚಿನ್ನಪ್ಪಗೌಡ ಮತ್ತು ಕಮಲಾಕ್ಷಮ್ಮ ದಂಪತಿಯ ಪುತ್ರಿ. ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಕುಡುಮಲ್ಲಿಗೆ ಇದೆ. ರಸ್ತೆ ಬದಿಯಲ್ಲೇ ಪ್ರೇಮಾ ಅವರ ಮನೆ ಇದೆ. 1966ರಲ್ಲಿ ಪ್ರೇಮಾ ಅವರು ಎಸ್.ಎಂ.ಕೃಷ್ಣ ಅವರೊಂದಿಗೆ ವಿವಾಹವಾಗಿದ್ದರು. ಆ ಹೊತ್ತಿಗಾಗಲೆ ಎಸ್.ಎಂ.ಕೃಷ್ಣ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಶಾಸಕರಾಗಿದ್ದರು.
ಸಂಬಂಧ ಬೆಸೆದಿದ್ದು ಮಾಜಿ ಸಿಎಂ
ಎಸ್.ಎಂ.ಕೃಷ್ಣ ಮತ್ತು ಪ್ರೇಮಾ ಅವರ ಕುಟುಂಬಗಳನ್ನು ಒಂದುಗೂಡಿಸಿದ್ದು ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಎಂದು ಎಸ್.ಎಂ.ಕೃಷ್ಣ ಅವರೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಕಡಿದಾಳು ಮಂಜಪ್ಪ ಅವರು ಎಸ್.ಎಂ.ಕೃಷ್ಣ ಅವರಿಗೂ ಸಂಬಂಧಿ. ಇತ್ತ ಮಂಜಪ್ಪ ಅವರ ಪತ್ನಿ ಲಕ್ಷ್ಮೀದೇವಿ ಅವರ ಸಹೋದರ, ಪ್ರೇಮಾ ಅವರ ಸಹೋದರಿಯನ್ನು ವಿವಾಹವಾಗಿದ್ದರು. ಹಾಗಾಗಿ ಪ್ರೇಮಾ ಅವರಿಗು ಕಡಿದಾಳು ಮಂಜಪ್ಪ ಸಂಬಂಧಿಯಾಗಿದ್ದರು. ಎಸ್.ಎಂ.ಕೃಷ್ಣ ಅವರಿಗೆ ಹೆಣ್ಣು ಹುಡುಕುತ್ತಿರುವ ವಿಚಾರ ತಿಳಿದು ಮಂಜಪ್ಪ ಅವರೆ ಪ್ರೇಮಾ ಅವರ ವಿಷಯ ತಿಳಿಸಿದ್ದರು.
ಹೆಣ್ಣು ನೋಡಲು ಕುಡುಮಲ್ಲಿಗೆಗೆ
ಹೆಣ್ಣು ನೋಡುವ ಶಾಸ್ತ್ರ ಕುಡುಮಲ್ಲಿಗೆಯಲ್ಲಿ ನೆರವೇರಿತು. ಎಸ್.ಎಂ.ಕೃಷ್ಣ (SM Krishna) ಅವರು ಕುಟುಂಬದೊಂದಿಗೆ ಬೆಂಗಳೂರಿನಿಂದ ಕುಡುಮಲ್ಲಿಗೆಗೆ ಬಂದಿದ್ದರು. ಈ ಸಂದರ್ಭ ಪ್ರೇಮಾ ಅವರ ಜೊತೆ ವೈಯಕ್ತಿಕವಾಗಿ ಮಾತನಾಡಬೇಕು ಎಂದು ಎಸ್.ಎಂ.ಕೃಷ್ಣ ಇಚ್ಛೆ ವ್ಯಕ್ತಪಡಿಸಿದ್ದರು. ಮೊದಲ ಮಾತುಕತೆಯಲ್ಲೇ ‘ಜೀವನದಲ್ಲಿ ಏನೆಲ್ಲ ಪರಿವರ್ತನೆಯಾಗಲಿದೆ ಗೊತ್ತಿಲ್ಲ’ ಎಂದು ಆತಂಕದ ಮಾತುಗಳನ್ನಾಡಿದ್ದರಂತೆ.
‘ರಾಜಕೀಯದಲ್ಲಿ ಇದ್ದೇನೆ. ಹಾಗಾಗಿ ಜೀವನ ಸುಗಮವಾಗಿ ಇರುವುದಿಲ್ಲ. ಏನೆಲ್ಲ ಪರಿವರ್ತನೆ ಆಗಲಿದೆ ಗೊತ್ತಾಗುವುದಿಲ್ಲ. ವಿರೋಧ ಪಕ್ಷದಲ್ಲಿ ಇರುವುದರಿಂದ ಜೈಲಿಗೂ ಹೋಗಬಹುದುʼ ಎಂದು ಎಸ್.ಎಂ.ಕೃಷ್ಣ ತಿಳಿಸಿದ್ದರಂತೆ. ಪ್ರೇಮಾ ಅವರು ಇದಕ್ಕೆಲ್ಲ ನಾನು ಸಿದ್ಧ ಎಂದು ತಿಳಿಸಿದ್ದರು ಎಂದು ಸಂದರ್ಶನವೊಂದರಲ್ಲಿ ಎಸ್.ಎಂ.ಕೃಷ್ಣ ಅವರೆ ಹೇಳಿಕೊಂಡಿದ್ದಾರೆ. 1966ರಲ್ಲಿ ಎಸ್.ಎಂ.ಕೃಷ್ಣ ಮತ್ತು ಪ್ರೇಮಾ ಅವರ ವಿವಾಹ ನೆರವೇರಿತು.
ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೆಂಕಿ, ಅಣಕು ಪ್ರದರ್ಶನ, ಹೇಗಿತ್ತು?
ರಾಜಕೀಯದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದಾಗಲು ಎಸ್.ಎಂ.ಕೃಷ್ಣ ಅವರು ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಕೆಲವು ವರ್ಷದ ಹಿಂದೆಯು ಅವರು ತೀರ್ಥಹಳ್ಳಿಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.