ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 13 FEBRUARY 2021
ಅಡಕೆ ಸಸಿಗಳನ್ನು ಕಡಿದ ಅರಣ್ಯ ರಕ್ಷಕನ ಮನೆ ಮುಂದೆಯೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಅತನನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಎರಡು ದಿನ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ ರೈತರು, ಅರಣ್ಯ ಇಲಾಖೆ ಅಧಿಕಾರಿಗಳ ಕಿರಕುಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಘಟನೆ? ಎಲ್ಲಿ ಪ್ರತಿಭಟನೆ?
ತೀರ್ಥಹಳ್ಳಿ ತಾಲೂಕು ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ ಗ್ರಾಮದ ರೈತ ಪ್ರಭಾಕರ್ ಎಂಬುವವರು ಅಡಕೆ ಸಸಿಗಳನ್ನು ನೆಟ್ಟಿದ್ದರು. ಆ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅರಣ್ಯ ರಕ್ಷಕ ಸಹದೇವ್ ತಕರಾರು ತೆಗೆದಿದ್ದ. ಎರಡು ಸಾವಿರ ರೂ. ಹಣವನ್ನೂ ವಸೂಲಿ ಮಾಡಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಳಿಕ ಅರಣ್ಯ ರಕ್ಷಕ ಸಹದೇವ್ ಸಸಿಗಳನ್ನೂ ಕಡಿದು ಹಾಕಿದ್ದ. ಇದು ಗ್ರಾಮಸ್ಥರನ್ನು ಕೆರಳಿಸಿತ್ತು.
ಅರಣ್ಯ ರಕ್ಷಕನ ಚಳಿ ಬಿಡಿಸಿದ ಗ್ರಾಮಸ್ಥರು
ರೈತರನ್ನು ಬೆದರಿಸಿ, ದುಡ್ಡು ವಸೂಲಿ ಮಾಡಿ, ಸಸಿಗಳನ್ನು ಕಡಿದು ಹಾಕಿದ ಸಹದೇವ್ ವಿರುದ್ಧ ಯಡವತ್ತಿ ಗ್ರಾಮಸ್ಥರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು. ಕನ್ನಂಗಿಯಲ್ಲಿರುವ ಸಹದೇವ್ ಮನೆ ಮುಂದೆಯೇ ಧರಣಿ ನಡೆಸಿದರು. ಎರಡು ದಿನ ನಿಂತರವಾಗಿ ಧರಣಿ ನಡೆಸಿದ ರೈತರು ಸಹದೇವ್‍ನನ್ನು ಸೇವೆಯಿಂದ ವಜಾಗೊಳಿಸಬೇಕು, ರೈತನಿಂದ ವಸೂಲಿ ಮಾಡಿದ್ದ ಹಣವನ್ನು ಹಿಂತಿರುಗಿಸಬೇಕು, ಸಸಿ ಕಡಿದು ಹಾಕಿದ್ದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಕ್ಷಾತೀತ ಹೋರಾಟಕ್ಕೆ ಜನ ಬೆಂಬಲ
ಯಡವತ್ತಿ ಗ್ರಾಮಸ್ಥರು ಪಕ್ಷಾತೀತವಾಗಿ ಹೋರಾಟ ನಡೆಸಿದರು. ಇದಕ್ಕೆ ಅಕ್ಕಪಕ್ಕದ ಗ್ರಾಮಸ್ಥರು ಬೆಂಬಲವಾಗಿ ನಿಂತರು. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಗುರುವಾರ ಅರಣ್ಯ ರಕ್ಷಕ ಮನೆ ಬಾಗಿಲಲ್ಲೇ ನಡುರಾತ್ರಿವರೆಗೂ ಧರಣಿ ನಡೆಸಿದರು. ಶುಕ್ರವಾರ ಕನ್ನಂಗಿಯ ರಸ್ತೆಯಲ್ಲಿ ರೈತರು ಮೆರವಣಿಗೆ ನಡೆಸಿ, ಅರಣ್ಯ ರಕ್ಷಕನ ಮನೆ ಬಳಿ ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಸಹದೇವ್ ನಾಪತ್ತೆಯಾಗಿದ್ದಾರೆ. ಮನೆಗೆ ಬೀಗ ಹಾಕಲಾಗಿದೆ.
ಅಸ್ವಸ್ಥರಾದ ಪ್ರಭಾಕರ್ ಆಸ್ಪತ್ರೆಗೆ
ಫೆಬ್ರವರಿ 11ರಂದು ಅರಣ್ಯ ರಕ್ಷಕ ಸಹದೇವ್ ಸಸಿಗಳನ್ನು ಕಡಿದು ಹಾಕಿದ್ದರಿಂದ ಒತ್ತಡಕ್ಕೊಳಗಾಗಿದ್ದ ರೈತ ಪ್ರಭಾಕರ್, ಪ್ರತಿಭಟನೆ ವೇಳೆ ಅಸ್ವಸ್ಥರಾದರು. ಕನ್ನಂಗಿಯಲ್ಲಿ ಅವರಿಗೆ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಭಾಕರ್ ಅವರು ಚೇತರಿಸಿಕೊಳ್ಳುತ್ತಿದ್ದು, ಇವತ್ತು ಬಿಡುಗಡೆ ಆಗುವ ಸಾಧ್ಯತೆ ಇದೆ.
ಕ್ರಮದ ಭರವಸೆ ನೀಡಿದ ಅರಣ್ಯಾಧಿಕಾರಿಗಳು
ತೀರ್ಥಹಳ್ಳಿ ಎಸಿಎಫ್ ಸತೀಶ್ಚಂದ್ರ, ಮಂಡಗದ್ದೆ ವಲಯ ಅರಣ್ಯಾಧಿಕಾರಿ ವಾಗೀಶ್ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರು. ಬಳಿಕ ಅರಣ್ಯ ರಕ್ಷಕನ ವಿರುದ್ಧ ಕ್ರಮದ ಭರವಸೆ ನೀಡಿದರು. ಅಲ್ಲದೆ ಮುಂದೆ ರೈತರಿಗೆ ಕಿರುಕುಳವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಮೂರ್ತಿ, ಎಪಿಎಂಸಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ್, ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ನಿಗಮದ ನಿರ್ದೇಶಕ ಆರ್.ಮದನ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೇಗುವಳ್ಳಿ ಕವಿರಾಜ್, ಹೊರಬೈಲು ರಾಮಕೃಷ್ಣ, ಯಡೂರು ಸುರೇಂದ್ರ, ಕನ್ನಂಗಿ, ಯಡವತ್ತಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]