SHIVAMOGGA LIVE NEWS
NAMMURU SHIVAMOGGA | ನಮ್ಮ ಜಿಲ್ಲೆ ಈಗ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ರಾಜಕೀಯವಾಗಿ ಪ್ರಬಲವಾಗಿದೆ. ಇತಿಹಾಸದಲ್ಲು ಶಿವಮೊಗ್ಗದ ನೆಲ ರಾಜಕೀಯ ಪ್ರಾಬಲ್ಯ, ಸಾಂಸ್ಕೃತಿಕ ವೈಭವವನ್ನು ಕಂಡಿದೆ. ಇಲ್ಲಿ ಅನೇಕ ರಾಜವಂಶಗಳು ಆಡಳಿತ ನಡೆಸಿವೆ. ಇಲ್ಲಿನ ಹಲವು ಪ್ರಮುಖ ಸ್ಥಳಗಳು ರಾಜಧಾನಿಯಾಗಿ, ಪ್ರಾಂತೀಯ ಆಡಳಿತ ಕೇಂದ್ರವಾಗಿದ್ದವು.
ಯಾವ್ಯಾವ ರಾಜವಂಶಗಳು ಆಡಳಿತ ನಡೆಸಿದ್ದವು?
ಮಯೂರ, ಶಾತವಾಹನ, ಬನವಾಸಿಯ ಕದಂಬ, ತಲಕಾಡಿನ ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಸೆವುಣರು, ಕಾಲಚೂರಿಗಳು, ವಿಜಯನಗರ, ಕೆಳದಿ ನಾಯಕರು, ಹೈದರ್ ಅಲಿ, ಮೈಸೂರು ಸಂಸ್ಥಾನಗಳು ಇಲ್ಲಿ ಆಳ್ವಿಕೆ ಮತ್ತು ಆಡಳಿತ ನಡೆಸಿವೆ.
ಆಡಳಿತ ಕೇಂದ್ರವಾಗಿದ್ದ ಪ್ರದೇಶಗಳು
ರಾಜಾಡಳಿತದ ಸಂದರ್ಭ ಜಿಲ್ಲೆಯ ಅನೇಕ ಪ್ರದೇಶಗಳು ಆಡಳಿತ ಕೇಂದ್ರಗಳಾಗಿದ್ದವು. ರಾಜಧಾನಿಯೂ ಆಗಿದ್ದವು. ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದವು.
ಹುಂಚ : ಸಂತಾರ ರಾಜವಂಶದ ಸಂತಾರ ದೇವ ಅವರು 7ನೇ ಶತಮಾನದಲ್ಲಿ ಹುಂಚದಲ್ಲಿ ಜೈನ ಬಸದಿಗಳನ್ನು ಸ್ಥಾಪಿಸಿದರು. ಇದು ಜೈನರ ಪ್ರಮುಖ ಆರಾಧನಾ ಕೇಂದ್ರವಾಯಿತು. ಪದ್ಮಾವತಿ ದೇವಸ್ಥಾನ ಈಗಲು ಜೈನರ ಪ್ರಮುಖ ಆರಾಧನ ಕೇಂದ್ರವಾಗಿದೆ.
ಬೆಳಗುತ್ತಿ : ಈಗ ಹೊನ್ನಾಳಿ ತಾಲೂಕಿನಲ್ಲಿದೆ (ಮೊದಲು ಶಿವಮೊಗ್ಗ ಜಿಲ್ಲೆಯ ಭಾಗವಾಗಿತ್ತು). ಕಾಲಚೂರಿ ರಾಜವಂಶ ಅತ್ಯಂತ ಕಡಿಮೆ ಅವಧಿ ಈ ಪ್ರಾಂತ್ಯದಲ್ಲಿ ಆಳ್ವಿಕೆ ನಡೆಸಿತ್ತು. ಆಗ ಬೆಳಗುತ್ತಿಯನ್ನು ಈ ಪ್ರಾಂತ್ಯದ ಆಡಳಿತ ಕೇಂದ್ರವನ್ನಾಗಿಸಿತ್ತು.
ಆರಗ : ವಿಜಯನಗರ ಸಾಮ್ರಾಜ್ಯದ ಸಂದರ್ಭ ಈ ಪ್ರಾಂತ್ಯದ ಆಡಳಿತ ಕೇಂದ್ರವಾಗಿತ್ತು. ಕೆಳದಿ ನಾಯಕರ ಆಡಳಿತಾವಧಿಯಲ್ಲಿಯು ಆರಗ ಮುನ್ನಲೆಯಲ್ಲಿತ್ತು.
ಬಿದನೂರು : ಕೆಳದಿ ಸಂಸ್ಥಾನದ ರಾಜಧಾನಿಯಾಗಿತ್ತು. ವೀರಭದ್ರ ನಾಯಕನ ಅವಧಿಯಲ್ಲಿ ರಾಜಧಾನಿಯಾಯಿತು. ಶಿವಪ್ಪನಾಯಕನ ಅವಧಿಯಲ್ಲಿ ರಾಜಕೀಯ ಮತ್ತು ಆರ್ಥಿಕವಾಗಿ ಹೆಸರಾಯಿತು. ಹೈದರಾಲಿಯ ಆಕ್ರಮಣದ ನಂತರ ಇದನ್ನು ಹೈದರ್ ನಗರ ಎಂದು ಮರು ನಾಮಕರಣವಾಗಿತ್ತು. ಟಿಪ್ಪು ಸುಲ್ತಾನ್ ಕಾಲವಧಿಯಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳಾದವು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗ ಎಂಬ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಗೊತ್ತಿರಬೇಕಾದ 2 ಸಂಗತಿ | ನಮ್ಮೂರು ಶಿವಮೊಗ್ಗ
