ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಜನವರಿ 2022
ಹಳ್ಳಿ ಹಳ್ಳಿಗೆ ವಿದ್ಯುತ್ ಪೂರೈಕೆ ಮಾಡುವ ನಿರಂತರ ಜ್ಯೋತಿ ಯೋಜನೆಯಲ್ಲಿ ಕೋಟಿ ಕೋಟಿ ರೂ. ಅವ್ಯವಹಾರ ನಡೆದಿದೆ. ಇದನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು, ಜಿಲ್ಲೆಯಲ್ಲಿ 693 ಗ್ರಾಮಗಳಿವೆ. 24 ಗಂಟೆ ವಿದ್ಯುತ್ ಪೂರೈಕೆ ಮಾಡಲು ನಿರಂತರ ಜ್ಯೋತಿ ಯೋಜನೆಗೆ 240 ಕೋಟಿ ಕೊಡಲಾಗಿದೆ. 110 ಕೋಟಿಯನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆ. ಇದರಲ್ಲಿ ಅವ್ಯವಹಾರವಾಗಿದೆ ಅಂತಾ ಮೊದಲೆ ತಿಳಿಸಿದ್ದೆವು ಎಂದರು.
ಸರಿ ಮಾಡಿಕೊಳ್ಳಿ ಅಂತಾ ಸಚಿವರೆ ಹೇಳಿದರು
ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ಕೆರೆದು ಐದು ಕೋಟಿ ರೂ. ಹೆಚ್ಚು ಪಾವತಿಯಾಗಿದೆ. ಅದನ್ನು ಸರಿ ಮಾಡಿಕೊಳ್ಳಬೇಕು ಎಂದು ಎಂಟು ತಿಂಗಳ ಹಿಂದೆ ಸಭೆಯಲ್ಲಿ ಹೇಳಿದ್ದರು. ಮತ್ತೊಂದು ಸಭೆ ಮಾಡಿ 12.29 ಕೋಟಿ ರೂ. ಅವ್ಯವಹಾರ ನಡೆದಿದೆ ಸರಿ ಮಾಡಿಕೊಳ್ಳಿ ಎಂದು ಜಿಲ್ಲಾ ಸಚಿವರು ಹೇಳುವ ಮೂಲಕ ಅವ್ಯವಹಾರ ಆಗಿದೆ ಅನ್ನುವುದನ್ನು ಸಾಬೀತಾದಂತಾಗಿದೆ ಎಂದರು.
ನಿರಂತರ ಜ್ಯೋತಿ ಯೋಜನೆಯಲ್ಲಿ 89 ಸಾವಿರ ವಿದ್ಯುತ್ ಕಂಬಗಳನ್ನು ಸರಿಯಾಗಿ ಅಳವಡಿಸಿಲ್ಲ ಎಂದು ಇಂಧನ ಸಚಿವರು ಶಿವಮೊಗ್ಗ ಭೇಟಿ ವೇಳೆ ಹೇಳಿದ್ದಾರೆ. ವಾಸ್ತವದಲ್ಲಿ ಈ ಯೋಜನೆ ಸುಮಾರು 40 ರಿಂದ 50 ಕೋಟಿ ರೂ.ನಷ್ಟು ಅವ್ಯವಹಾರ ನಡೆದಿದೆ ಅನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಂಬಗಳನ್ನು ಸರಿಯಾಗಿ ಹಾಕಿಲ್ಲ, ವಯರ್‌ಗಳನ್ನು ಸಮರ್ಪಕವಾಗಿ ಅಳವಡಿಸಿಲ್ಲ. ದೊಡ್ಡ ಅವ್ಯವಹಾರವಾಗಿದೆ ಎಂದು ಆರೋಪಿಸಿದರು.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
ಇಷ್ಟು ದೊಡ್ಡ ಅವ್ಯವಹಾರದಲ್ಲಿ ಜೆಇ, ಎಇ ಅಮಾನತು ಮಾಡಲಾಗಿದೆ. ಆದರೆ ಇಷ್ಟು ದೊಡ್ಡ ಹಗರಣವನ್ನು ಇವರಿಬ್ಬರೆ ಮಾಡಲಾಗುತ್ತದೆಯೆ. ಸುಮಾರು 40 ಅಧಿಕಾರಿಗಳು ಈ ಯೋಜನೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವ ಪ್ರಯತ್ನವಾಯಿತಾ? ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಗೃಹ ಸಚಿವರನ್ನು ಒತ್ತಾಯಿಸುತ್ತೇನೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆ
ಇದರಲ್ಲಿ ಮಾಡಲ್ ಸಬ್ ಡಿವಿಷನ್‌ಗೆ 30 ಕೋಟಿ ರೂ., IPDSಗೆ 75 ಕೋಟಿ ರೂ. ನೀಡಲಾಗಿದೆ. ಯು.ಜಿ ಕೇಬಲ್ ಅಳವಡಿಕೆ ಯೋಜನೆ ಇದು. ಇದರಲ್ಲೂ ದೊಡ್ಡ ಪ್ರಮಾಣದ ಅವ್ಯವಹಾರವಾಗಿದೆ. ಇನ್ನಷ್ಟು ದಾಖಲೆ ಸಂಗ್ರಹ ಮಾಡಲಾಗುತ್ತಿದೆ ಎಂದರು.
‘ಜಿಲ್ಲಾ ಮಂತ್ರಿಗಳ ವೈಫಲ್ಯ’
ದೇವಕಾತಿಕೊಪ್ಪದಲ್ಲಿ ವಿದ್ಯುತ್ ಪೂರೈಕೆಗೆ ಸಬ್‌ಸ್ಟೇಷನ್ ಸ್ಥಾಪನೆ ಮಾಡುವ ಯೋಜನೆ ಇತ್ತು. 10 ಕೋಟಿ ರೂ. ವೆಚ್ಚದಲ್ಲಿ ಮಾಡಬಹುದಾದ ಯೋಜನೆಗೆ 15 ಕೋಟಿ ರೂ. ವೆಚ್ಚ ಮಾಡಲಾಗಿದೆ. ದೇವಕಾತಿಕೊಪ್ಪದಲ್ಲಿ ಸಬ್ ಸ್ಟೇಷನ್ ಮಾಡುವ ಬದಲು ಆಲ್ಕೊಳದಿಂದ ಯು.ಜಿ.ಕೇಬಲ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈಗ ಜಿಲ್ಲಾಧಿಕಾರಿ ಅವರು ಸಭೆಯಲ್ಲಿ ಮಾತನಾಡಿ, ಅಗತ್ಯ ಬಿದ್ದರೆ ಸಬ್‌ಸ್ಟೇಷನ್ ಸ್ಥಾಪನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈಗ 15 ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇದು ಜಿಲ್ಲಾ ಸಚಿವರ ವೈಫಲ್ಯಕ್ಕೆ ಸಾಕ್ಷಿ ಎಂದು ಪ್ರಸನ್ನ ಕುಮಾರ್ ಆರೋಪಿಸಿದರು.