ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 14 JUNE 2023
TUMARI : ಮುಂಗಾರು ವಿಳಂಬದಿಂದಾಗಿ ಶರಾವತಿ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಜೂ.14ರಿಂದ ಲಾಂಚ್‌ನಲ್ಲಿ (Sigandur Launch) ಜನ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ. ಮುಂದಿನ ಆದೇಶದವರೆಗೆ ವಾಹನಗಳನ್ನು ಲಾಂಚ್‌ಗೆ ಹತ್ತಿಸುವುದನ್ನು ನಿಷೇಧಿಸಲಾಗಿದೆ.
ವಾಹನ ಹತ್ತಿಸದಿರಲು ಕಾರಣವೇನು?
ಅಂಬಾರಗೋಡ್ಲು – ಕಳಸವಳ್ಳಿ ಭಾಗದಲ್ಲಿ ಲಾಂಚ್‌ಗಳ ನಿಲುಗಡೆ, ಜನ ಮತ್ತು ವಾಹನಗಳನ್ನು ಹತ್ತಿಸಲು ಕಾಂಕ್ರಿಟ್ ರ‍್ಯಾಂಪ್‌ಗಳನ್ನು ನಿರ್ಮಿಸಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಈ ರ‍್ಯಾಂಪ್‌ಗಳ ತುದಿ ಲಾಂಚ್‌ಗೆ ಸಿಗದಂತಾಗಿದೆ. ಈಗ ವಾಹನಗಳನ್ನು ಹತ್ತಿಸಲು ಮುಂದಾದರೆ ಭಾರ ಹೆಚ್ಚಾಗಿ ದಡದ ಕೆಸರಿನಲ್ಲಿ ಲಾಂಚ್ ಸಿಕ್ಕಿಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆ ವಾಹನಗಳನ್ನು ಹತ್ತಿಸಲು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಸಂಕಷ್ಟಕ್ಕೆ ಸಿಲುಕಿದ ಸ್ಥಳೀಯರು
ತುಮರಿ ಭಾಗದಿಂದ ಸಾಗರಕ್ಕೆ ತಲುಪುವ ಸಮೀಪದ ಮಾರ್ಗ ಇದಾಗಿತ್ತು. ಸ್ಥಳೀಯರು ಲಾಂಚ್‌ನಲ್ಲಿ (Sigandur Launch) ವಾಹನಗಳನ್ನು ಕೊಂಡೊಯ್ದು ಸಾಗರಕ್ಕೆ ತಲುಪುತ್ತಿದ್ದರು. ತುರ್ತು ಸಂದರ್ಭ ಆಂಬುಲೆನ್ಸ್‌ಗಳು ಕೂಡ ಲಾಂಚ್‌ನಲ್ಲಿ ಹೋಗುತ್ತಿದ್ದವು. ಆದರೆ ಲಾಂಚ್‌ನಲ್ಲಿ ವಾಹನಗಳನ್ನು ಹತ್ತಿಸಲು ನಿರ್ಬಂಧಿಸಿರುವುದು ಸ್ಥಳೀಯರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಸಾಗರ ಪಟ್ಟಣ ತಲುಪಲು ಸ್ಥಳೀಯರು ಸುತ್ತಿ ಬಳಸಿ ಹೋಗಬೇಕಿದೆ. ಇದರಿಂದ ಸಮಯ ಮತ್ತು ಹಣ ಹೆಚ್ಚು ಖರ್ಚಾಗಲಿದೆ.
ಪ್ರವಾಸಿಗರಿಗೆ ಪೀಕಲಾಟ, ವಾಹನ ದಟ್ಟಣೆ ನಿಶ್ಚಿತ
ಸಿಗಂದೂರಿಗೆ ಪ್ರತಿದಿನ ದೊಡ್ಡ ಸಂಖ್ಯೆಯ ಭಕ್ತರು ಬರುತ್ತಾರೆ. ವೀಕೆಂಡ್ ವೇಳೆ ಜನ, ವಾಹನ ದಟ್ಟಣೆ ಹೆಚ್ಚು. ಈಗ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರು ಅಂಬಾರಗೋಡ್ಲುವಿನಲ್ಲಿ ವಾಹನ ನಿಲ್ಲಿಸಬೇಕು. ಲಾಂಚ್ ಮೂಲಕ ಶರಾವತಿ ನದಿ ದಾಟಿ, ಕಳಸವಳ್ಳಿಯಲ್ಲಿ ಟ್ರ್ಯಾಕ್ಸ್, ಬಸ್ ಅಥವಾ ಇತರೆ ಸಾರ್ವಜನಿಕ ಸಾರಿಗೆ ಮೂಲಕ ಸಿಗಂದೂರು ತಲುಪಬೇಕು. ಇದರಿಂದಾಗಿ ಅಂಬಾರಗೋಡ್ಲುವಿನಲ್ಲಿ ವಾಹನ ದಟ್ಟಣೆ ಹೆಚ್ಚಲಿದೆ. ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಆತಂಕವಿದೆ.
ಸಿಗಂದೂರು ತಲುಪಲು ಪರ್ಯಾಯ ಮಾರ್ಗ
ಲಾಂಚ್ ಸೇವೆ ಬಳಸದೆ ಸಿಗಂದೂರು ದೇವಸ್ಥಾನ ತಲುಪಲು ಪರ್ಯಾಯ ಮಾರ್ಗವಿದೆ. ಇದು ಪ್ರವಾಸಿಗರಿಗೆ ಅನುಕೂಲವಾಗಬಹುದು. ಹೊಸನಗರ – ನಗರ – ಸಂಪೆಕಟ್ಟೆ – ನಿಟ್ಟೂರು ಮಾರ್ಗವಾಗಿ ಸಿಗಂದೂರು ತಲುಪಬಹುದಾಗಿದೆ. ಈ ಮಾರ್ಗ ಪ್ರವಾಸಿಗರಿಗೆ ಖುಷಿ ಕೊಡಲಿದೆ. ಆದರೆ ಸ್ಥಳೀಯರು ಪರ್ಯಾಯ ಮಾರ್ಗ ಬಳಸಿ ಸಾಗರ ತಲುಪುವ ಹೊತ್ತಿಗೆ ಇಡೀ ದಿನ ಕಳೆಯಲಿದೆ.
ಜೂನ್ ತಿಂಗಳ ಆರಂಭದಿಂದ ಮುಂಗಾರು ಬಿರುಸಾಗಬೇಕಿತ್ತು. ಆದರೆ ಅರ್ಧ ತಿಂಗಳು ಕಳೆದರೂ ಮಳೆಯ ಮುನ್ಸೂಚನೆ ಇಲ್ಲ. ಜೋರು ಮಳೆಯಾಗಿ ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಏರಿಕೆಯಾದರೆ ಲಾಂಚ್ ಸೇವೆ ಪುನಃ ಹಿಂದಿನ ಸ್ಥಿತಿಗೆ ಬರಲಿದೆ. ಅಲ್ಲಿಯವರೆಗೆ ಸ್ಥಳೀಯರು ಮತ್ತು ಪ್ರವಾಸಿಗರು ನಿತ್ಯ ಸಂಕಷ್ಟ ಅನುಭವಿಸಬೇಕಾಗುತ್ತದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422