ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 JANUARY 2024
SHIMOGA : ಸವಳಂಗ ರಸ್ತೆಯ ಉಷಾ ನರ್ಸಿಂಗ್ ಸಮೀಪ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಅಷ್ಟರಲ್ಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಸುತ್ತಮುತ್ತಲ ಬಡಾವಣೆ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ರೈಲುಗಳು ಬಂದಾಗಲೆಲ್ಲೆ ಸವಳಂಗ ರಸ್ತೆಯಲ್ಲಿ ರೈಲ್ವೆ ಗೇಟ್ ಬಂದ್ ಮಾಡಲಾಗುತ್ತಿತ್ತು. ಇದರಿಂದ ನವುಲೆ ಕಡೆಯ ರಸ್ತೆ ಮತ್ತು ಉಷಾ ನರ್ಸಿಂಗ್ ಹೋಂ ಕಡೆಗೆ ವಾಹನ ದಟ್ಟಣೆ ಹೆಚ್ಚಳವಾಗುತ್ತಿತ್ತು. ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಜನರು ಒತ್ತಾಯಿಸಿದ್ದರು. ಈಗ ಮೇಲ್ಸೇತುವೆ ಸಿದ್ದವಾಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ವಾಹನ ಸಂಚಾರ ಆರಂಭ
ಸುಮಾರು ಎರಡು ವರ್ಷದಿಂದ ಮೇಲ್ಸೇತುವೆ ಕಾಮಗಾರಿ ನಡೆಯುತಿತ್ತು. ಜ.26ರಂದು ಸಂಸದ ಬಿ.ವೈ.ರಾಘವೇಂದ್ರ ಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು. ವಿಷಯ ತಿಳಿಯುತ್ತಿದ್ದಂತೆ ಬಹುತೇಕ ವಾಹನಗಳು ಸೇತುವೆ ಮೇಲೆ ಸಂಚಾರ ಆರಂಭಿಸಿವೆ. ಶಿಕಾರಿಪುರ, ಸವಳಂಗ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ಸುಗಳು, ಶಾಲೆ, ಕಾಲೇಜು ಬಸ್ಸುಗಳು, ಲಾರಿಗಳು ಸೇತುವೆ ಮುಖಾಂತರ ಸವಳಂಗ ರಸ್ತೆಯಲ್ಲಿ ಸಂಚರಿಸುತ್ತಿವೆ.
ಇನ್ನೂ ಕಾಮಗಾರಿ ಬಾಕಿ ಇದೆ
ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದರೂ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸೇತುವೆಯ ಎರಡು ಬದಿಯಲ್ಲೂ ಡಾಂಬರೀಕರಣ ಮುಗಿದಿಲ್ಲ. ಜೆಲ್ಲಿ ಕಲ್ಲುಗಳನ್ನು ಹಾಸಲಾಗಿದೆ. ದ್ವಿಚಕ್ರ ವಾಹನ ಸವಾರರ ಪಾಲಿಗೆ ಈ ಜೆಲ್ಲಿ ಕಲ್ಲುಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ, ಫುಟ್‌ಪಾತ್‌ಗಳಲ್ಲಿ ಸ್ಲಾಬ್‌ಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ಇನ್ನೂ ಬಾಕಿ ಇದೆ. ಇವುಗಳ ಕಾರ್ಯ ಇನ್ನೂ ನಡೆಯುತ್ತಿದೆ.
ಸುತ್ತಮುತ್ತಲ ವಾಸಿಗಳ ನಿಟ್ಟುಸಿರು
ಮೇಲ್ಸೇತುವೆ ಕಾಮಗಾರಿ ಹಿನ್ನೆಲೆ ನವುಲೆ ಕಡೆಯಿಂದ ಬರುವ ವಾಹನಗಳು ಮತ್ತು ಉಷ ನರ್ಸಿಂಗ್ ಹೋಂ ಕಡೆಯಿಂದ ತೆರಳುವ ವಾಹನಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿತ್ತು. ದ್ವಿಚಕ್ರ ವಾಹನಗಳು, ಕಾರುಗಳು ರವೀಂದ್ರ ನಗರದ ವಿವಿಧ ಅಡ್ಡರಸ್ತೆಗಳ ಮೂಲಕ ರೈಲ್ವೆ ಗೇಟ್ ದಾಟುತ್ತಿದ್ದವು. ಭಾರಿ ವಾಹನಗಳು ಬೊಮ್ಮನಕಟ್ಟೆ ಮುಖ್ಯರಸ್ತೆ, ಅಶ್ವಥನಗರದ ಮೂಲಕ ಸವಳಂಗ ರಸ್ತೆ ತಲುಪುತ್ತಿದ್ದವು. ಇದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಧೂಳು ಹೆಚ್ಚಿತ್ತು. ಹೊಸ ಸೇತುವೆ ಮೇಲೆ ವಾಹನ ಸಂಚಾರ ಆರಂಭವಾಗುತ್ತಿದ್ದಂತೆ ಈ ಭಾಗದಲ್ಲಿ ವಾಹನ ಸಂಚಾರ ತಗ್ಗಿದ್ದು, ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಧೂಳು, ಭಾರಿ ಶಬ್ದದಿಂದ ಮುಕ್ತಿ ಪಡೆದ ಸಮಾಧಾನ ಪಡುತ್ತಿದ್ದಾರೆ.
ಇದನ್ನೂ ಓದಿ – ಸಂಗಮೇಶ್ವರ, ಬೇಳೂರಿಗೆ ನಿಗಮದ ಅಧ್ಯಕ್ಷ ಸ್ಥಾನ, ಯಾವ ನಿಗಮ? ಅವುಗಳ ಜವಾಬ್ದಾರಿ ಏನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422