ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 MARCH 2024
SHIMOGA : ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಪುತ್ರ ಕಾಂತೇಶ್‌ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶಗೊಂಡಿದ್ದಾರೆ. ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಶಿವಮೊಗ್ಗ ಬಿಜೆಪಿಯಲ್ಲಿ ಮತ್ತೆ ಯಡಿಯೂರಪ್ಪ ವರ್ಸಸ್ ಈಶ್ವರಪ್ಪ ಬಣಗಳ ಮುಸುಕಿನ ಗುದ್ದಾಟ ಮುನ್ನಲೆಗೆ ಬಂದಿದೆ. ಈ ಬಾರಿಯ ಜಿದ್ದಾಜಿದ್ದಿ ನಿರ್ಣಾಯಕ ಎಂದು ವಿಶ್ಲೇಷಿಸಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೈ ತಪ್ಪಿದ ಟಿಕೆಟ್‌ನಿಂದ ಆಕ್ರೋಶ
ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಅವರು ಹಾವೇರಿ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದೇ ಕಾರಣಕ್ಕೆ ಹಾವೇರಿಯಲ್ಲಿ ಸಭೆ, ಸಮಾರಂಭಗಳನ್ನು ಆಯೋಜಿಸಿ ಸಂಘಟನೆಯಲ್ಲಿಯು ತೊಡಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಹಾವೇರಿ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ಅವರ ಹೆಸರನ್ನೆ ಪ್ರಕಟಿಸಲಾಗಿದೆ. ಇದು ಸಹಜವಾಗಿಯೆ ಈಶ್ವರಪ್ಪ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆ ಹೊತ್ತಲು ಹೀಗೆ ಆಗಿತ್ತು
ಕಳೆದ ವಿಧಾನಸಭೆ ಚುನಾವಣೆಗೆ ಈಶ್ವರಪ್ಪ ಸಂಪೂರ್ಣ ಸಜ್ಜಾಗಿದ್ದರು. ಸಭೆ, ಸಮಾರಂಭಗಳನ್ನು ಆಯೋಜಿಸಿ ತಮ್ಮ ಪರವಾಗಿ ಅಭಿಪ್ರಾಯ ರೂಪಿಸಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಬೇಕಾಯಿತು. ಆಗ ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ನಾಮಪತ್ರ ಸಲ್ಲಿಕೆಗೆ ಇನ್ನೊಂದು ದಿನ ಬಾಕಿ ಇರುವಾಗ ಕಾಂತೇಶ್ ಬದಲು ಪಾಲಿಕೆ ಸದಸ್ಯರಾಗಿದ್ದ ಎಸ್.ಎನ್.ಚನ್ನಬಸಪ್ಪ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ಈಗ ಪುನಃ ಕೊನೆ ಕ್ಷಣದಲ್ಲಿ ಈಶ್ವರಪ್ಪ ಕುಟುಂಬಕ್ಕೆ ಮರ್ಮಾಘಾತ ಉಂಟಾಗಿದೆ.
ಪೋಸ್ಟರ್ ಹರಿಬಿಟ್ಟ ಬೆಂಬಲಿಗರು
‘ಕಾಂತೇಶ್‌ಗೆ ಟಿಕೆಟ್ ಕೈ ತಪ್ಪಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ’ ಎಂದು ಈಶ್ವರಪ್ಪ ಬಹಿರಂಗ ಆರೋಪ ಮಾಡಿದ್ದಾರೆ. ಇದರ ಬೆನ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನ ಹರಿಬಿಡಲಾಗಿದೆ. ‘ಪಕ್ಷ ಕಟ್ಟುವಾಗ ಎಲ್ಲರೂ ಬೇಕು. ಅಧಿಕಾರ ಬಂದರೆ ತನಗೆ, ತನ್ನ ಕುಟುಂಬಕ್ಕೆ ಮಾತ್ರ ಬೇಕುʼ ಎಂದು ಪೋಸ್ಟರ್ ಹರಿಬಿಡಲಾಗಿದೆ. ಈ ಪೋಸ್ಟರ್‌ನಲ್ಲಿ ಆಗಿನ ಧರಣಿಯೊಂದರ ಫೋಟೊ ಪ್ರಕಟಿಸಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ, ಆನಂತ್ ಕುಮಾರ್, ಸುರೇಶ್ ಕುಮಾರ್ ಆ ಫೋಟೊದಲ್ಲಿದ್ದಾರೆ.
ದೇಶ ಭಕ್ತರ ಹೆಸರಿನಲ್ಲಿ ಸಭೆ
ಪುತ್ರನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಅವರ ಬೆಂಬಲಿಗರು ತಿಳಿಸಿದ್ದರು. ಆದರೆ ‘ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ’ ಎಂದು ಈಶ್ವರಪ್ಪ ತಿಳಿಸಿದ್ದಾರೆ. ಈ ಮಧ್ಯೆ ರಾಷ್ಟ್ರಭಕ್ತರ ಬಳಗದ ಹೆಸರಿನಲ್ಲಿ ಮಾ.15ರ ಸಂಜೆ 5 ಗಂಟೆಗೆ ಶಿವಮೊಗ್ಗದ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ಸಭೆ ಕರೆಯಲಾಗಿದೆ. ಈ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಮತ್ತೆ ಗೊಂದಲಕ್ಕೆ ಸಿಲುಕಿದ ಕಾರ್ಯಕರ್ತರು
ಈಶ್ವರಪ್ಪ ಮುನಿಸಿನ ಬೆನ್ನಿಗೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಯಡಿಯೂರಪ್ಪ ಅವರನ್ನು ಬೆಂಬಲಿಸಬೇಕೋ, ಈಶ್ವರಪ್ಪ ಕೈ ಬಲಪಡಿಬೇಕೊ ಅನ್ನುವ ಗೊಂದಲಕ್ಕೀಡಾಗಿದ್ದಾರೆ. ಈ ಹಿಂದೆಯು ಇಂತಹುದೆ ಪರಿಸ್ಥಿತಿ ಎದುರಾದಾಗ ಮುಖಂಡರು, ಕಾರ್ಯಕರ್ತರು ಮೌನಕ್ಕೆ ಜಾರಿದ್ದರು.
ಬಿಜೆಪಿ ಸಭೆ ಆಗಿದ್ದರೆ ನಾನು ಹೋಗುತ್ತಿದ್ದೆ. ರಾಷ್ಟ್ರಭಕ್ತರು ಇರುವ ಜಾಗವೆ ಭಾರತೀಯ ಜನತಾ ಪಕ್ಷ. ರಾಷ್ಟ್ರಕ್ಕಾಗಿ ಬದುಕುತ್ತಿರುವ ಪಾರ್ಟಿ ಬಿಜೆಪಿ. ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮಗಿದೆ. ಈಶ್ವರಪ್ಪ ಅವರು ಬಿಜೆಪಿ ಗೆಲ್ಲಿಸಲು ಇಷ್ಟು ವರ್ಷ ಕೆಲಸ ಮಾಡಿದ್ದಾರೆ. ಹಾಗಾಗಿ ಬಿಜೆಪಿ ಗೆಲುವಿಗಾಗಿ ರಾಷ್ಟ್ರ ಭಕ್ತರು ಒಂದೆಡೆ ಸೇರಿ ಪಾರ್ಟಿ ಗೆಲ್ಲಿಸುತ್ತೇವೆ.ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಶಾಸಕ
ಸದ್ಯ ಈಶ್ವರಪ್ಪ ನಡೆ ತೀವ್ರ ಕುತೂಹಲ ಮೂಡಿಸಿದೆ. ಲೋಕಸಭೆ ಚುನಾವಣೆಗೆ ಕೆ.ಎಸ್.ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಶಿವಮೊಗ್ಗ ಕ್ಷೇತ್ರದ ಫೈಟ್ ಮತ್ತಷ್ಟು ಹೈವೋಲ್ಟೇಜ್ ಅನಿಸಿಕೊಳ್ಳಲಿದೆ.
ಇದನ್ನೂ ಓದಿ – ಬಿಜೆಪಿ ಪಟ್ಟಿ, ಈಶ್ವರಪ್ಪ ಕುಟುಂಬದವರ ಕಣ್ಣೀರು, ಫೋನ್ ಕರೆ ಬೆನ್ನಿಗೆ ದಿಢೀರ್ ಹೊರನಡೆದ ಮಾಜಿ ಮಿನಿಸ್ಟರ್