ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 MAY 2024
ELECTION NEWS : ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಡಾ.ರಾಜ್ ಕುಮಾರ್ ಮತ್ತು ಬಂಗಾರಪ್ಪ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಆರೋಪಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲು ಸಾಲು ಆರೋಪ ಮಾಡಿದರು. ಹಲವು ಪ್ರಶ್ನೆಗಳನ್ನು ಮುಂದಿಟ್ಟರು.
ಕುಮಾರ್ ಬಂಗಾರಪ್ಪ ಹೇಳಿದ್ದೇನು?
‘ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ನನ್ನ ತಂಗಿ, ಶಿವರಾಜ್ ಕುಮಾರ್ ಭಾವ, ತಮ್ಮ ಜಿಲ್ಲಾ ಮಂತ್ರಿ. ಇವರು ಕುಟುಂಬವನ್ನೇ ಜೋಡಣೆ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಚುನಾವಣೆಗೆ ಸ್ಪರ್ಧಿಸುವವರ ಮತವೆ ಇಲ್ಲಿಲ್ಲ. ಬೆಂಗಳೂರಿಗೆ ಹೋಗಿ ಮತದಾನ ಮಾಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯು ಅವರು ಮನೆ ಖಾಲಿ ಮಾಡಲಿದ್ದಾರೆ. ಮೇ 7ರ ಸಂಜೆಯೋ, ಜೂನ್ 4 ರಂದೋ ಮನೆ ಖಾಲಿ ಮಾಡಿಕೊಂಡು ಹೋಗಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ನೂರಕ್ಕೆ ನೂರು ಸೋಲುತ್ತಾರೆ.ʼ
‘ಶಿವರಾಜ್ ಕುಮಾರ್ ಅವರು ಪ್ರಚಾರಕ್ಕೆ ಹೋದಲ್ಲೆಲ್ಲ ಹಾಡು, ಡಾನ್ಸ್ ಮಾಡುತ್ತಿದ್ದಾರೆ. ಗೀತಾ ಗೆದ್ದ ಮೇಲೆ 24 ಗಂಟೆ ಡಾನ್ಸ್ ಮಾಡುವ ವಾಗ್ದಾನ ಮಾಡಿದ್ದಾರೆ. ಅವರ ಡಾನ್ಸ್ ಯಶಸ್ವಿಯಾಗಲಿ. ಆದರೆ ಕೊನೆವರೆಗೂ ಅಭಿಮಾನಿಗಳಿಗಾಗಿ ಕಲಾ ಸೇವೆ ಮಾಡಿದ ಡಾ. ರಾಜ್ ಕುಮಾರ್ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಾ. ರಾಜ್ ಕುಮಾರ್ ಅವರಿಗೆ ರಾಜಕೀಯ ಆಸಕ್ತಿ ಇರಲಿಲ್ಲ. ರಾಜಕಾರಣಕ್ಕೆ ಬಂದಿದ್ದರೆ ಮುಖ್ಯಮಂತ್ರಿಯೇ ಆಗುತ್ತಿದ್ದರು. ಇನ್ನು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಹೆಸರು ಕೂಡ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಂಗಾರಪ್ಪ ಅವರು ಇವರಿಗಷ್ಟೆ ಸೀಮಿತರಲ್ಲ. ರಾಘವೇಂದ್ರ ಅವರು ಬಂಗಾರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.ʼ
‘ಶಿಕ್ಷಣ ಸಚಿವರಿಗೆ ಪಿಯುಸಿ ಅಧ್ಯಯನ ಯಾವ ಕಾಲೇಜಿನಲ್ಲಿ ಆರಂಭಿಸಿದರು, ಯಾವ ಕಾಲೇಜಿನಲ್ಲಿ ಪೂರೈಸಿದರು. ಪದವಿ ಪ್ರಮಾಣ ಪತ್ರ ಹೇಗೆ ಪಡೆದರು ಅನ್ನುವುದು ಸ್ಪಷ್ಟಪಡಿಸಲಿ. ಅವರಿಗೆ ಪ್ರಾಥಮಿಕ ಶಿಕ್ಷಣದ ಅಗತ್ಯವಿದೆ. ಅಭಿವೃದ್ಧಿ, ಬರ ನಿರ್ವಹಣೆ, ನೀರಾವರಿ ಯೋಜನೆ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾತನಾಡುವುದಿಲ್ಲ. ಒಂದು ವರ್ಷವಾದರೂ ಬಗರ್ಹುಕುಂ ಸಮಿತಿ ರಚಿಸಿಲ್ಲ, ಸಭೆಗಳನ್ನು ಮಾಡಿಲ್ಲ. ಈಗ ಶಿವಮೊಗ್ಗದಲ್ಲಿ ಏಜೆಂಟ್ಗಳನ್ನು ನೇಮಿಸಿಕೊಂಡಿದ್ದಾರೆ. ಇದನ್ನು ಅವರದ್ದೆ ಪಕ್ಷದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದರು. ಚುನಾವಣೆ ಕಾರಣಕ್ಕೆ ಈಗ ಅವರು ಸುಮ್ಮನಿದ್ದಾರೆ. ಚುನಾವಣೆ ಬಳಿಕ ಬೇಳೂರು ಗೋಪಾಲಕೃಷ್ಣ ಏನೆಲ್ಲ ಮಾತನಾಡುತ್ತಾರೆ ನೋಡೋಣ.’
‘ಅಕ್ಕನ ವಿರುದ್ಧ ಮಾತನಾಡಿದರೆ ಹುಷಾರ್ ಅನ್ನುತ್ತಿದ್ದಾರೆ ಮಧು. ಇದು ಚುನಾವಣೆ. ಕುರುಕ್ಷೇತ್ರ ಇದ್ದಂತೆ. ಅಣ್ಣ, ತಮ್ಮ, ಅಕ್ಕ, ತಂಗಿ ಎಂದ ಯಾರೂ ನೋಡುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ. ಟೀಕೆಗಳನ್ನು ಸ್ವೀಕರಿಸಿ, ಅದರಿಂದ ತಿದ್ದಿಕೊಳ್ಳಬೇಕು. ಕುದಿಯುವವನು ಆವಿಯಾಗುತ್ತಾನೆ. ಇವರು ಬೂದಿಯಾಗೋದು ನಿಶ್ಚಿತ. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಇವರಿಗೆ ಯಜಮಾನಿಕೆ ಇತ್ತು. ಆಗ ಜಾರ್ಜ್, ಡಿ.ಕೆ.ಶಿವಕುಮಾರ್ ಅವರಂತಹವರ ಸಂಪರ್ಕ ಬೆಳೆಯಿತು. ಇಪ್ಪತ್ತರಲ್ಲಿ ಯಜಮಾನಿಕೆ ಬರಬಾರದು ಅನ್ನೋದು ಇದಕ್ಕೆ.’
‘ಇಡೀ ಚಿತ್ರರಂಗ ನನ್ನ ಬೆನ್ನ ಹಿಂದೆ ಇದೆ ಅನ್ನುತ್ತಿದ್ದಾರೆ. ಯಾರೋ ಮೂರ್ನಾಲ್ಕು ಜನ ಮಾತ್ರ ಬಂದಿದ್ದಾರೆ. ನಟ ದರ್ಶನ್ ಅವರು ಕಳೆದ ಬಾರಿ ಸುಮಲತಾ ಪರ ಪ್ರಚಾರ ಮಾಡಿದ್ದರು. ಈಗ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಮಾತಾಡುವಾಗ ರಾಜಕೀಯ ಗೊತ್ತಿಲ್ಲ. ಹೆಂಡತಿ ನಿಂತಿದ್ದಾಳೆ ಅಂತಾರೆ. ಗೀತಾ ಮಾತಾಡುವಾಗ ವಿಐಎಸ್ಎಲ್ ಸೇಲ್ ಅದೆಲ್ಲ ನಂಗೊತ್ತಿಲ್ಲ ಅಂತಾರೆ. ಮಧು ಮಾತಾಡುವಾಗ ಬಂಗಾರಪ್ಪ ಅವರ ಯೋಜನೆ ಪ್ರಸ್ತಾಪಿಸಿದರು. ಏನಾರೂ ಪ್ರಶ್ನಿಸಿದರೆ ನಾನು ಹೇಳಿದ್ದಷ್ಟೆ ಬರೆದುಕೊಳ್ಳಿ ಅಂತಾರೆ. ದ್ವೇಷ ರಾಜಕಾರಣ, ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡಬಾರದು.ʼ
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಗಿರೀಶ್ ಪಟೇಲ್, ಜ್ಯೋತಿ ಪ್ರಕಾಶ್, ಹರಿಕೃಷ್ಣ ಇದ್ದರು.
ಇದನ್ನೂ ಓದಿ – ಮಾನಹಾನಿ ಸುದ್ದಿ ಪ್ರಕಟಣೆಗೆ ತಡೆಯಾಜ್ಞೆ ತಂದ ಈಶ್ವರಪ್ಪ ಪುತ್ರ ಕಾಂತೇಶ್, ಕುತೂಹಲ ಮೂಡಿಸಿದ ಬೆಳವಣಿಗೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422