ಭದ್ರಾವತಿ: ತೋಟಕ್ಕೆ ಓಡಾಡುವ ದಾರಿಯ ವಿಚಾರವಾಗಿ ಜಗಳ ತೆಗೆದು ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ನಾಲ್ವರು ಆರೋಪಿಗಳಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ (court) ಮತ್ತು ದಂಡ ವಿಧಿಸಲಾಗಿದೆ.
ಇದನ್ನೂ ಓದಿ : ಮಹಿಳಾ ಡಾಕ್ಟರ್ಗೆ ಅವಾಚ್ಯವಾಗಿ ನಿಂದನೆ, ಅಸಭ್ಯ ವರ್ತನೆ, ವ್ಯಕ್ತಿ ವಿರುದ್ಧ ದೂರು
ಪ್ರಕರಣ ಹಿನ್ನೆಲೆ
ಭದ್ರಾವತಿ ತಾಲೂಕು ಇಟ್ಟಿಗೆಹಳ್ಳಿಯ ಬಸವರಾಜ್ (47), ಶೃತಿ (29), ಮಂಜಪ್ಪ (56) ಹಾಗೂ ಮಧು (32) ಎಂಬುವವರು ಚಂದ್ರಪ್ಪ (50) ಎಂಬುವವರಿಗೆ ಅವರ ತೋಟಕ್ಕೆ ಹೋಗುವ ದಾರಿಯ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು. 2021ರ ಫೆಬ್ರವರಿ 12ರಂದು ಎಲ್ಲರು ಸೇರಿ ಚಂದ್ರಪ್ಪ ಅವರ ಮನೆ ಅಂಗಳದಲ್ಲಿ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಅಲ್ಲದೆ ಹಲ್ಲೆ ಮಾಡಿ ಸಾವಿಗೆ ಪ್ರೇರಣೆ ನೀಡಿದ್ದರು. ಅವಮಾನದಿಂದ ನೊಂದ ಚಂದ್ರಪ್ಪ ಅವರು ಮರುದಿನವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೂರು ನೀಡಿದ್ದ ಪತ್ನಿ
ಘಟನೆ ಸಂಬಂಧ ಚಂದ್ರಪ್ಪ ಅವರ ಪತ್ನಿ ದೂರು ನೀಡಿದ್ದರು. ಹೊಳೆಹೊನ್ನೂರು ಠಾಣೆಯ ಅಂದಿನ ಪಿಎಸ್ಐ ಜಿ.ಮೋಹನ್ ಅವರು ಪ್ರಕರಣದ ತನಿಖೆ ನಡೆಸಿದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ : ಹೆಣ್ಮಗು ಜನನದ ಖುಷಿಗೆ ಪಟಾಕಿ ಸಿಡಿಸಿದ ವಿಚಾರಕ್ಕೆ ಗಲಾಟೆ, ಮೊಳೆಯಿಂದ ಚುಚ್ಚಿ ವ್ಯಕ್ತಿಗೆ ಹಲ್ಲೆ
ಶಿಕ್ಷೆ ಪ್ರಕಟ, ಮೃತನ ಪತ್ನಿಗೆ ಪರಿಹಾರ
ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ವಿಚಾರಣೆ ನಡೆಸಿದರು. ಆರೋಪ ಸಾಬೀತಾದ ಹಿನ್ನೆಲೆ ನಾಲ್ವರು ಅಪರಾಧಿಗಳಿಗೆ ತಲಾ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ ₹1 ಲಕ್ಷವನ್ನು ಮೃತ ಚಂದ್ರಪ್ಪ ಅವರ ಪತ್ನಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ








