ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 ಮಾರ್ಚ್ 2022
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ದೆಹಲಿ ವಿಭಾಗ ಈಗಾಗಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಕೊಲೆ ಹಿಂದ ಕಾಣದ ಕೈಗಳು
ಹರ್ಷ ಹತ್ಯೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಈ ಕೊಲೆಗೆ ಬರಿ ದ್ವೇಷ ಕಾರಣವಲ್ಲ. ಕಾಣದ ಕೈಗಳು ಇರುವ ಶಂಕೆ ವ್ಯಕ್ತವಾಗಿತ್ತು. ಇದೆ ಕಾರಣಕ್ಕೆ ಉನ್ನತ ತನಿಖೆ ನಡೆಸುವಂತೆ ಒತ್ತಡ ಹೆಚ್ಚಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (NIA) ತನಿಖೆ ನಡೆಸುವಂತೆ ಆಗ್ರಹ ಕೇಳಿ ಬಂದಿತ್ತು.
ಕೇಂದ್ರ ಗೃಹ ಸಚಿವರಿಗೆ ಪತ್ರ
ಫೆ.20ರಂದು ಶಿವಮೊಗ್ಗದ ಭಾರತಿ ಕಾಲೋನಿಯಲ್ಲಿ ಬಜರಂಗದಳ ಹರ್ಷನ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ 10 ಆರೋಪಿಗಳನ್ನು ಬಂಧಿಸಲಾಗಿತ್ತು. ಘಟನೆ ಬಳಿಕ ಹರ್ಷನ ಮನೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು NIA ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದ್ದರು. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಿಗೆ NIA ತನಿಖೆಗೆ ಸಜ್ಜಾಗಿದೆ.
‘NIA ಪ್ರಕರಣ ದಾಖಲಿಸಿಕೊಂಡಿದೆ’
ಈ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ‘ಹರ್ಷ ಕೊಲೆ ಬಗ್ಗೆ ಕಾನೂನು ಬಾಹಿರ ಚಟುವಟಿಕೆ ನಿರ್ಬಂಧ ಕಾಯ್ದೆ (ಯುಎಪಿಎ) ಅಡಿ ಕೇಸ್ ದಾಖಲಾಗಿತ್ತು. ಅದರ ಆಧಾರದ ಮೇಲೆ NIA ಪ್ರಕರಣ ದಾಖಲಿಸಿಕೊಂಡಿದೆ. ಸದ್ಯ NIA ತನಿಖೆ ನಡೆಸುತ್ತಿದ್ದು, ಸೆಕ್ಷನ್ ಹಾಕಿದ ಕೂಡಲೆ NIA ಕೇಸ್ ತೆಗೆದುಕೊಳ್ಳುತ್ತದೆ. ಇದರಿಂದ ನಮ್ಮ ಪೊಲೀಸರಿಗೂ ಬಲ ಬಂದಂತಾಗಿದೆ’ ಎಂದು ತಿಳಿಸಿದ್ದಾರೆ.
ಏನಿದು ರಾಷ್ಟ್ರೀಯ ತನಿಖಾ ಸಂಸ್ಥೆ?
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವವರ ಹೆಡೆಮುರಿ ಕಟ್ಟುವುದು ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಮುಖ ಗುರಿ. 2008ರ ಮುಂಬೈ ಮೇಲಿನ ಉಗ್ರರ ದಾಳಿ ಬಳಿಕ ಈ ತನಿಖಾ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಭಯೋತ್ಪಾದನೆ ಚಟುವಟಿಕೆ, ಮಾನವ ಕಳ್ಳ ಸಾಗಣೆ, ನಕಲಿ ನೋಟು ಚಲಾವಣೆ, ಸೈಬರ್ ಭಯೋತ್ಪಾದನೆ, ಸ್ಪೋಟಕ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಡೆಸುತ್ತದೆ.
ಭಾರತ ಮಾತ್ರವಲ್ಲ ವಿದೇಶದಲ್ಲಿಯು ಭಾರತೀಯರನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳನ್ನು ಕೂಡ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಕೈಗೊಳ್ಳಬಹುದಾಗಿದೆ.
ಪ್ರಕರಣ ದಾಖಲಾಗುವುದು ಹೇಗೆ?
ಅಪರಾಧ ಚಟುವಟಿಕೆಗಳನ್ನು ಆಯಾ ಠಾಣೆ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ತನಿಖೆ ನಡೆಸುತ್ತಾರೆ. ಆದರೆ ಸಂಘಟಿತ ಅಪರಾಧ, ಭಯೋತ್ಪಾದನ ಕೃತ್ಯಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಕೈಗೊಳ್ಳುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಕಾಯ್ದೆ ಇದೆ. ಆ ಕಾಯ್ದೆ ಅನುಸಾರವಾಗಿ NIA ಅಧಿಕಾರಿಗಳು ತನಿಖೆ ಕೈಗೊಳ್ಳುತ್ತಾರೆ.
ಭಯೋತ್ಪಾದನ ಚಟುವಟಿಕೆಗಳ ಕುರಿತು NIA ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಬಹುದು. ಇನ್ನು, ಯಾವುದಾದರೂ ಪ್ರಮುಖ ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ರಾಜ್ಯ ಸರ್ಕಾರ NIAಗೆ ಮನವಿ ಮಾಡಬಹುದು. ಆ ಪ್ರಕರಣದ ಕುರಿತು ಪರಾಮರ್ಶೆ ನಡೆಸುವ NIA ಅಧಿಕಾರಿಗಳು, ಪ್ರಕರಣ ದಾಖಲು ಮಾಡಿಕೊಳ್ಳಬಹುದು. ಒಂದು ವೇಳೆ NIA ಕಾಯ್ದೆ ವ್ಯಾಪ್ತಿಗೆ ಒಳಪಡದ ಪ್ರಕರಣವಾದರೆ ಅದರ ತನಿಖೆ ನಡೆಸಲು ನಿರಾಕರಿಸಬಹುದು.
ಹತ್ಯೆ ಪ್ರಕರಣದ ತನಿಖೆ ನಡೆಸಬಹುದಾ?
ಕೊಲೆ ಪ್ರಕರಣಗಳ ತನಿಖೆಯನ್ನು ಆಯಾ ಠಾಣೆ ವ್ಯಾಪ್ತಿಯ ಪೊಲೀಸರೆ ನಡೆಸುತ್ತಾರೆ. ಇದಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯಂತಹ ಪ್ರತಿಷ್ಠಿತ ತನಿಖಾ ಸಂಸ್ಥೆ ಬೇಕಾ ಎಂದು ಅನುಮಾನವಿರುತ್ತದೆ. ಆದರೆ NIA ಕೂಡ ಇಂತಹ ತನಿಖೆಗಳನ್ನು ಕೈಗೊಳ್ಳುತ್ತದೆ. ಹತ್ಯೆ ಹಿಂದೆ ರಾಷ್ಟ್ರೀಯ ಭದ್ರತೆಯ ವಿಚಾರಗಳಿದ್ದರೆ NIA ಅಧಿಕಾರಿಗಳು ತನಿಖೆ ಕೈಗೆತ್ತಿಕೊಳ್ಳುತ್ತಾರೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸಬ್ ಇನ್ಸ್’ಪೆಕ್ಟರ್ ವಿಲ್ಸನ್ ಹತ್ಯೆ ಪ್ರಕರಣ, ಪಿಎಫ್ಐ ಕಾರ್ಯಕರ್ತರಿಂದ ರಾಮಲಿಂಗಮ್ ಎಂಬುವವರ ಹತ್ಯೆ ಪ್ರಕರಣ, ಲೂದಿಯಾನದಲ್ಲಿ RSS ಮುಖಂಡ ರವೀಂದ್ರ ಹತ್ಯೆ ಪ್ರಕರಣ, ಕೊಯಮತ್ತೂರಿನ ಶಶಿಕುಮಾರ್ ಹತ್ಯೆ, ಬೆಂಗಳೂರಿನ RSS ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಸೇರಿದಂತೆ ಹಲವು ಕೊಲೆ ಪ್ರಕರಣಗಳನ್ನು NIA ತನಿಖೆ ನಡೆಸುತ್ತಿದೆ.
ಹರ್ಷ ಹತ್ಯೆ ಹಿಂದಿದೆಯಾ ದೊಡ್ಡ ಷಡ್ಯಂತ್ರ?
ರಾಷ್ಟ್ರೀಯ ತನಿಖಾ ಸಂಸ್ಥೆ ಸುಖಾಸುಮ್ಮನೆ ಪ್ರಕರಣಗಳ ತನಿಖೆ ನಡೆಸುವುದಿಲ್ಲ. ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಹಿಂದೆ ಷಡ್ಯಂತ್ರ ಅಡಗಿರುವ ಶಂಕೆ ಇದೆ. ಶಿವಮೊಗ್ಗ ಪೊಲೀಸರು ಕೂಡ ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇದೆ ಕಾರಣಕ್ಕೆ ಕಾನೂನು ಬಾಹಿರ ಚಟುವಟಿಕೆ ನಿರ್ಬಂಧ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. ಈಗ NIAಗೆ ತನಿಖೆ ವಹಿಸಿರುವುದು ಹರ್ಷ ಹತ್ಯೆ ಪ್ರಕರಣದ ಹಿಂದಿನ ಕಾಣದ ಕೈಗಳು ಯಾರದ್ದು ಎಂಬುವುದು ಹೊರ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422