ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 8 ಫೆಬ್ರವರಿ 2022
ಹಿಜಾಬ್, ಕೇಸರಿ ಶಾಲು ವಿವಾದ ಶಿವಮೊಗ್ಗದಲ್ಲಿ ತರಾಕಕ್ಕೇರಿದೆ. ನಗರದ ಎರಡು ಕಡೆ ಕಲ್ಲು ತೂರಟವಾಗಿದೆ. ಈ ಮಧ್ಯೆ ವಿದ್ಯಾರ್ಥಿಗಳ ಎರಡು ಗುಂಪುಗಳು ಮೆರವಣಿ ಆರಂಭಿಸಿದ್ದು, ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ಎರಡನೆ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಪ್ರತಿಭಟನೆಗಳಿಗೆ ಸೀಮಿತವಾಗಿದ್ದ ಹೋರಾಟ ಇವತ್ತು ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದ ಹಾಗೆ ಆಗಿದೆ.
ಎಲ್ಲೆಲ್ಲಿ ಏನೇನಾಗುತ್ತಿದೆ?
ಬಾಪೂಜಿ ನಗರ ಕಾಲೇಜು
ಶಿವಮೊಗ್ಗದ ಬಾಪೂಜಿನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವತ್ತು ವಿವಾದ ಭುಗಿಲೆದ್ದಿದೆ. ಕೇಸರಿ ಶಾಲು ಧರಿಸಿ ಬಂದಿದ್ದ ವಿದ್ಯಾರ್ಥಿಗಳು ಗುಂಪುಗೂಡಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಈ ವೇಳೆ ಮತ್ತೊಂದು ಗುಂಪು ತಮ್ಮ ಧರ್ಮದ ಘೋಷಣೆಗಳನ್ನು ಆರಂಭಿಸಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಇದೆ ವೇಳೆ ವಿದ್ಯಾರ್ಥಿಯೊಬ್ಬ ಧ್ವಜ ಸ್ತಂಭ ಹತ್ತಿ ಕೇಸರಿ ಧ್ವಜ ಹಾರಿಸಿದ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಷ್ಟರಲ್ಲಿ ಕೆಲವು ವಿದ್ಯಾರ್ಥಿಗಳು ಕಾಲೇಜು ಕಟ್ಟಡದ ಮೇಲಿನಿಂದ ಕಲ್ಲು ತೂರಿದ್ದಾರೆ. ಇದರಿಂದ ಘಟನೆ ವಿಕೋಪಕ್ಕೆ ಹೋಯಿತು. ಕೂಡಲೆ ಪೊಲೀಸರು ಗುಂಪು ಚದುರಿಸಿ, ಕಾಲೇಜು ಮೇಲಿಂದ ಕಲ್ಲು ತೂರುತ್ತಿದ್ದವರನ್ನು ಬಂಧಿಸಿದರು.
ರಾಷ್ಟ್ರೀಯ ಪಿಯು ಕಾಲೇಜು
ರಾಷ್ಟ್ರೀಯ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಹಿಜಾಬ್, ಬುರ್ಖಾ ಧರಿಸಿ ತರಗತಿಗೆ ಬರುವಂತಿಲ್ಲ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಕೇಸರಿ ಶಾಲು ಧರಿಸಿ ಬಂದಿದ್ದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು. ಇಲ್ಲಿಯೂ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇನ್ನು, ಎಟಿಎನ್’ಸಿ ಕಾಲೇಜಿಗೆ ಇವತ್ತು ರಜೆ ಘೋಷಣೆ ಮಾಡಲಾಗಿದೆ.
ಸಹ್ಯಾದ್ರಿ ಕಾಲೇಜಿನಲ್ಲಿ ತ್ರಿವರ್ಣ ಧ್ವಜ
ಇತ್ತ ಸಹ್ಯಾದ್ರಿ ಕಾಲೇಜಿನಲ್ಲಿ ಇವತ್ತು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕಾಲೇಜು ಕಾಂಪೌಂಡ್ ಒಳಗೆ ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಐಡಿ ಕಾರ್ಡ್ ಇದ್ದರಷ್ಟೆ ಕ್ಯಾಂಪಸ್ ಒಳಗೆ ಬಿಡಲಾಗಿತ್ತು. ಪ್ರತಿ ವಿದ್ಯಾರ್ಥಿಯ ಬ್ಯಾಗ್ ತಪಾಸಣೆ ಮಾಡಲಾಗುತ್ತಿತ್ತು.
ಈ ಮಧ್ಯೆ ಇವತ್ತು ವಿದ್ಯಾರ್ಥಿಗಳು ಕೇಸರಿ ಶಾಲು ಬದಲು ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆ ನಡೆಸಿದರು. ಕ್ಯಾಂಪಸ್’ನಲ್ಲಿ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಿದರು.
ನಗರದಲ್ಲಿ ಎರಡು ಗುಂಪು ಮೆರವಣಿಗೆ
ಇನ್ನು, ಕ್ಯಾಂಪಸ್’ನಲ್ಲಿ ಗುಂಪುಗಳನ್ನು ಚದುರಿಸಿದ್ದರಿಂದ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದರು. ಸೈನ್ಸ್ ಮೈದಾನ ಮುಂಭಾಗ ಎರಡು ಗುಂಪಿನ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಈ ವೇಳೆ ಪೊಲೀಸರು ಗುಂಪು ಚದುರಿಸಲು ನಡೆಸಿದ ಪ್ರಯತ್ನ ವಿಫಲಾಯಿತು. ಕೊನೆಗೆ ಎರಡು ಗುಂಪಿನ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪ್ರತಿಭಟನೆ ಆರಂಭಿಸಿದ್ದಾರೆ.
ಸದ್ಯ ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ವಾತಾವರಣವಿದೆ. ನಗರದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಖುದ್ದು ಫಿಲ್ಡಿಗಿಳಿದಿದ್ದಾರೆ.
Shimoga District Profile | About Shivamogga Live