ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಡಿಸೆಂಬರ್ 2021
ಸಂಚಾರ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡಿದವರಿಗೆ ಈಗ ಮನೆಗೆ ನೋಟಿಸ್ ಬಂದು ಬೀಳುತ್ತಿದೆ. ಆದರೆ ನೋಟಿಸ್‌ಗೂ ಕ್ಯಾರೆ ಎನ್ನದೆ ದಂಡ ಕಟ್ಟದೇ ಅಲೆಯುತ್ತಿದ್ದ ವಾಹನ ಸವಾರರು ಇನ್ಮುಂದೆ ಆರಾಮಾಗಿ ಇರಲು ಸಾಧ್ಯವಿಲ್ಲ. ಶಿವಮೊಗ್ಗ ಪೊಲೀಸರು ಈಗ ಮನೆ ಬಾಗಿಲಿಗೇ ಬಂದು ದಂಡ ವಸೂಲಿ ಮಾಡುತ್ತಿದ್ದಾರೆ.
ಶಿವಮೊಗ್ಗದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 1.57 ಲಕ್ಷ ಮಂದಿಗೆ ಆಟೋಮೇಷನ್ ಸೆಂಟರ್‌ನಿಂದ ನೋಟಿಸ್ ಹೋಗಿದೆ. ಇದರಲ್ಲಿ ದಂಡ ಪಾವತಿಸಿದವರು 60,052 ಮಂದಿ ಮಾತ್ರ. ಉಳಿದ 97,418 ಮಂದಿ ನೋಟಿಸ್‌ಗೆ ತಲೆ ಕೆಡಿಸಿಕೊಂಡಿಲ್ಲ. ಈಗ ಇಂತವರ ಮನೆ ಬಾಗಿಲಿಗೇ ಪೊಲೀಸರು ಬಂದು ನಿಲ್ಲುತ್ತಿದ್ದಾರೆ.
ಶೇ.60ರಷ್ಟು ಜನರಿಂದ ದಂಡ ಬಾಕಿ
ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಸ್ಥಳದಲ್ಲೇ ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ಹಣವಿಲ್ಲದವರಿಗೆ ಆಮೇಲೆ ಕಟ್ಟಲು ಅವಕಾಶ ನೀಡಲಾಗುತ್ತದೆ. ಇದನ್ನೆ ವಾಹನ ಸವಾರರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಶೇ.60ರಷ್ಟು ವಾಹನ ಮಾಲೀಕರು ದಂಡ ಬಾಕಿ ಉಳಿಸಿಕೊಂಡಿದ್ದು, ಇದುವರೆಗೆ ಪಾವತಿಸಿಲ್ಲ. 2018ರಿಂದ 2021ರ ನವೆಂಬರ್ 15ರ ವರೆಗೆ ಒಟ್ಟು 97,418 ನೋಟಿಸ್‌ಗಳಲ್ಲಿ 2,95,17,100 ರೂ. ದಂಡ ಪಾವತಿ ಬಾಕಿ ಇದೆ.
ಆರ್‌ಸಿ ಬದಲಾಗಿಲ್ಲ, ಮನೆ ಬದಲು
ನೊಟೀಸ್ ತಲುಪದೆ ಇರುವುದರಿಂದ ದಂಡ ಪಾವತಿ ವಿಳಂಬವಾಗಿರುವ ಸಾಧ್ಯತೆ ಇದೆ. ಕೆಲವರು ವಾಹನ ಮಾರಿದ್ದರೂ ಆರ್‌ಸಿ ಬದಲಾವಣೆಯಾಗಿರುವುದಿಲ್ಲ. ಕೆಲವರು ಮನೆ ಬದಲಾವಣೆ ಮಾಡಿಕೊಂಡಿರುತ್ತಾರೆ. ಹೀಗೆ ಅನೇಕ ಕಾರಣಗಳಿಂದ ವಾಹನ ಮಾಲೀಕರಿಗೆ ನೋಟಿಸ್ ತಲುಪುತ್ತಿಲ್ಲ. ಈಗ ಮನೆ ಹುಡುಕಿಕೊಂಡು ಹೋಗಿ ದಂಡ ಕಟ್ಟಿಸಿಕೊಳ್ಳಲು ಆರಂಭವಾಗಿದೆ. ಈಗಾಗಲೇ ಹಲವರಿಂದ ಪೊಲೀಸರು ದಂಡ ಪಾವತಿಸಿಕೊಂಡಿದ್ದಾರೆ.
2018ರಿಂದ ಉಲ್ಲಂಘನೆ ಪ್ರಮಾಣ ಇಳಿಕೆ
2018ರ ಮಾರ್ಚ್ ತಿಂಗಳಿಂದ ಮೊಬೈಲ್‌ನಲ್ಲಿ ಉಲ್ಲಂಘನೆ ದಾಖಲಿಸುವ ಪದ್ಧತಿ ಶಿವಮೊಗ್ಗದಲ್ಲಿ ಜಾರಿಗೆ ಬಂತು. ಅಲ್ಲಿಂದ ಪ್ರತಿ ವರ್ಷ ನೋಟಿಸ್ ಪ್ರಮಾಣ ಇಳಿಕೆಯಾಗುತ್ತಿದೆ. 2018ರಲ್ಲಿ 70,363 ನೋಟಿಸ್‌ಗಳನ್ನು ನೀಡಲಾಗಿತ್ತು. ಅದೇ ಕ್ರಮವಾಗಿ 2019ರಲ್ಲಿ 40,174, 2020ರಲ್ಲಿ 32,475 ಹಾಗೂ 2021ರ ನವೆಂಬರ್ 15ರ ವರೆಗೆ 14,458 ನೋಟಿಸ್‌ಗಳನ್ನು ವಾಹನ ಮಾಲೀಕರಿಗೆ ನೀಡಲಾಗಿದೆ.
ನಿತ್ಯ ಕನಿಷ್ಠ 15 ಕೇಸ್
ವಾಹನ ಸವಾರರು ಪೊಲೀಸರ ಕಣ್ತಪ್ಪಿಸಿ ಓಡಾಡಿದರೂ ನೋಟಿಸ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶಿವಮೊಗ್ಗ ನಗರದ ಎಲ್ಲ ಪ್ರಮುಖ ಸರ್ಕಲ್‌ಗಳಲ್ಲಿ ಸಿಸಿ ಕ್ಯಾಮೆರಾ ಬಂದು ಅನೇಕ ವರ್ಷಗಳೇ ಆಗಿವೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಇನ್ನಷ್ಟು ಕ್ಯಾಮೆರಾಗಳು ಪ್ರಮುಖ ಹೈವೇ, ಸರ್ಕಲ್‌ಗಳಿಗೆ ಬರಲಿವೆ. ಹಾಗಾಗಿ ನಿಯಮ ಉಲ್ಲಂಘಿಸುವವರು ಎಚ್ಚರಿಕೆ ವಹಿಸಲೇಬೇಕಿದೆ. ಇದಲ್ಲದೇ ಟ್ರಾಫಿಕ್ ಪೊಲೀಸರು ಮೊಬೈಲ್‌ನಲ್ಲಿ ಫೋಟೋ ತೆಗೆದು ನೋಟಿಸ್ ಕಳುಹಿಸುತ್ತಿದ್ದಾರೆ. ಒಬ್ಬ ಎಸ್‌ಐ, ಎಎಸ್‌ಐ ಪ್ರತಿದಿನ ಕನಿಷ್ಠ 15 ಕೇಸ್ ಹಾಕುವುದು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ಉಲ್ಲಂಘಿಸುವವರ ಮೇಲೆ ದಂಡ ಬೀಳುತ್ತಿದೆ.
ಇನ್ನು, ಸಾರ್ವಜನಿಕರಲ್ಲಿ ಕ್ರಮೇಣ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡುತ್ತಿರುವುದರಿಂದ ಉಲ್ಲಂಘನೆಯ ಪ್ರಮಾಣದಲ್ಲೂ ಇಳಿಕೆಯಾಗಿದೆ. ಈ ಮುಂಚೆ ಸಿಗ್ನಲ್‌ಗಳಲ್ಲಿ ಪೊಲೀಸರಿದ್ದರಷ್ಟೇ ಸಂಚಾರ ನಿಯಮಗಳನ್ನು ಚಾಚೂತಪ್ಪದೇ ಪಾಲಿಸುತ್ತಿದ್ದವರೂ ಈಗ ಪೊಲೀಸರು ಎಲ್ಲಿಂದ ತಮ್ಮ ಮೇಲೆ ಕಣ್ಣಿಟ್ಟಿದ್ದಾರೆ ಎಂಬುವುದೇ ತಿಳಿಯದ ಕಾರಣದಿಂದ ನಿಯಮ ಪಾಲಿಸುತ್ತಿದ್ದಾರೆ. ಆದರೆ ಹಳೆ ದಂಡ ಬಾಕಿ ಇದ್ದರೆ, ಪೊಲೀಸರು ಮನೆ ಬಳಿಗೆ ಬರಲಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422