ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ನವೆಂಬರ್ 2021
ರಾಶಿ ರಾಶಿ ಚಿನ್ನ, ಕಂತೆ ಕಂತೆ ಹಣ, ದಾಖಲೆಗಳು ಪತ್ತೆಯಾದ ಬೆನ್ನಿಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮತ್ತಷ್ಟು ಶೋಧ ಕಾರ್ಯ ನಡೆಸಲು ಮುಂದಾಗಿದ್ದಾರೆ. ಇವತ್ತೂ ಶೋಧ ಕಾರ್ಯ, ವಿಚಾರಣೆ ಮುಂದುವರೆಯಲಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಈವರೆಗೂ ಏನೆಲ್ಲ ಬೆಳವಣಿಗೆಯಾಗಿದೆ
ಬೆಳವಣಿಗೆ 1
ಬುಧವಾರ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ಶಿವಮೊಗ್ಗದ ಚಾಲುಕ್ಯ ನಗರ ಮತ್ತು ಗೋಪಾಳದ ಎರಡು ಮನೆಗಳ ಮೇಲೆ ದಾಳಿ ನಡೆಸಿತು. ಎಸಿಬಿ ಪೂರ್ವ ವಲಯದ ಎಸ್.ಪಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ 44 ಅಧಿಕಾರಿಗಳ ಐದು ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು.
ಬೆಳವಣಿಗೆ 2
ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆಗಳು, ತೋಟದ ಮೇಲೆ ಎಸಿಬಿಯ ಐದು ತಂಡಗಳು ದಾಳಿ ಮಾಡಿದ್ದವು. ಎರಡು ಮನೆಗಳಲ್ಲಿ ರಾತ್ರಿವರೆಗೂ ಶೋಧ ಕಾರ್ಯ ನಡೆಸಲಾಯಿತು.
ಬೆಳವಣಿಗೆ 3
ರುದ್ರೇಶಪ್ಪ ಮನೆಯಲ್ಲಿ ಎರಡು ಮನೆಗಳ ದಾಖಲೆ, ನಾಲ್ಕು ನಿವೇಶನದ ದಾಖಲೆ, 9 ಕೆ.ಜಿ 400 ಗ್ರಾಂ ಚಿನ್ನದ ಬಿಸ್ಕೇಟ್, ಆಭರಣ, ಮೂರು ಕೆ.ಜಿ. ತೂಕದ ಬೆಳ್ಳಿ ವಸ್ತುಗಳು, ಎರಡು ಕಾರು, ಮೂರು ದ್ವಿಚಕ್ರ ವಾಹನ, ಎಂಟು ಎಕರೆ ಕೃಷಿ ಭೂಮಿ ದಾಖಲೆ, 15.94 ಲಕ್ಷ ರೂ. ನಗದು, 20 ಲಕ್ಷ ರೂ. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಬೆಳವಣಿಗೆ 4
ಕೆಜಿಗಟ್ಟಲೆ ಚಿನ್ನ, ಕಂತೆ ಕಂತೆ ಹಣ ಪತ್ತೆಯಾದ ಹಿನ್ನೆಲೆ ಗದಗ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರಿಗೆ ಎಸಿಬಿ ಅಧಿಕಾರಿಗಳು ಬುಲಾವ್ ನೀಡಿದರು. ಹೆಚ್ಚಿನ ವಿಚಾರಣೆ ಮತ್ತು ಈಗಾಗಲೆ ವಶಕ್ಕೆ ಪಡೆದಿರುವ ಚಿನ್ನಾಭರಣ, ಹಣದ ಕುರಿತು ಮಾಹಿತಿ ಸಂಗ್ರಹಕ್ಕಾಗಿ ರುದ್ರೇಶಪ್ಪಗೆ ಬುಲಾವ್ ನೀಡಲಾಯಿತು.
ಬೆಳವಣಿಗೆ 5
ರಾತ್ರಿ ಶಿವಮೊಗ್ಗಕ್ಕೆ ಆಗಮಿಸಿದ ರುದ್ರೇಶಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಇವತ್ತು ಏನೆಲ್ಲ ಆಗಲಿದೆ?
ಇವತ್ತಿನ ಬೆಳವಣಿಗೆ 1
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಿವಮೊಗ್ಗದ ಶಾಖೆಯೊಂದರಲ್ಲಿ ರುದ್ರೇಶಪ್ಪಗೆ ಸೇರಿದ ಖಾತೆ ಮತ್ತು ಲಾಕರ್ ಇರುವುದಾಗಿ ತಿಳಿದು ಬಂದಿದೆ. ಇವುಗಳನ್ನು ರುದ್ರೇಶಪ್ಪ ಸಮುಖದಲ್ಲೇ ತೆರೆದು ಪರಿಶೀಲನೆ ನಡೆಸಲು ಎಸಿಬಿ ನಿರ್ಧರಿಸಿದೆ. ಲಾಕರ್’ನಲ್ಲಿ ಪ್ರಮುಖ ದಾಖಲೆಗಳು ಲಭ್ಯವಾಗುವ ಸಾಧ್ಯತೆ ಇದೆ.
ಇವತ್ತಿನ ಬೆಳವಣಿಗೆ 2
ನಿನ್ನೆ ಪತ್ತೆಯಾಗಿರುವ ಚಿನ್ನಾಭರಣ, ನಗದು, ಆಸ್ತಿಪಾಸ್ತಿ ದಾಖಲೆಗಳ ಕುರಿತು ಮಾಹಿತಿ ಸಂಗ್ರಹ ಮಾಡುವ ಸಾಧ್ಯತೆ ಇದೆ.
ಇವತ್ತಿನ ಬೆಳವಣಿಗೆ 3
ವಿಚಾರಣೆ ಬಳಿಕ ರುದ್ರೇಶಪ್ಪ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200