ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 31 ಜನವರಿ 2022
ಸ್ಮಾರ್ಟ್ ಸಿಟಿ ಕಾಮಗಾರಿಯ ಅವಾಂತರಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಜನರು ಪ್ರತಿದಿನ ಹಿಡಿಶಾಪ ಹಾಕುವಂತಾಗಿದೆ. ಈಗ ಸ್ಮಾರ್ಟ್ ಸಿಟಿ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಅಂಧನೊಬ್ಬ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ನೋವಿನಿಂದ ಸಂಕಟ ಪಡುತ್ತಿದ್ದಾರೆ.
ಇಮಾಮ್ ಸಾಬ್ ಇನಾಂದಾರ್ (38) ಎಂಬ ಅಂಧರೊಬ್ಬರು ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗಾಯ್ತು ಘಟನೆ?
ಇಮಾಮ್ ಸಾಬ್ ಇನಾಂದಾರ್ ಅವರು ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನವರು. ಹುಟ್ಟಿನಿಂದ ಅಂಧತ್ವ ಇದೆ. ಕಳೆದ ಐದು ವರ್ಷದಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ 2ನೇ ಡಿವಿಜನ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವೀರಭದ್ರೇಶ್ವರ ಟಾಕೀಸ್ ಬಳಿ ಇರುವ ಮುಸ್ಲಿಂ ಹಾಸ್ಟೆಲ್’ನಲ್ಲಿ ವಾಸವಾಗಿದ್ದಾರೆ. ಐದು ವರ್ಷದಿಂದ ಕುವೆಂಪು ರಂಗಮಂದಿರ ಮುಂಭಾಗದ ರಸ್ತೆಯ ಮೂಲಕ ನ್ಯಾಯಾಲಯಕ್ಕೆ ತೆರಳುತ್ತಿದ್ದರು.
ಗುರುವಾರ ಮಧ್ಯಾಹ್ನ ಊಟಕ್ಕೆಂದು ಇಮಾಮ್ ಸಾಬ್ ಇನಾಂದಾರ್ ಅವರು ಶಿವಮೊಗ್ಗ ನ್ಯಾಯಾಲಯದಿಂದ ಹಾಸ್ಟೆಲ್’ಗೆ ತೆರಳುತ್ತಿದ್ದರು. ಪ್ರತಿದಿನದ ಹಾಗೆ ರಾಷ್ಟ್ರೀಯ ಕಾನೂನು ಕಾಲೇಜು ಮುಂಭಾಗದ ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಆದರೆ ಆ ರಸ್ತೆಯಲ್ಲಿ ಹೊಸತೊಂದು ಗುಂಡಿ ತೆಗೆದಿರುವುದು ಇಮಾಮ್ ಸಾಬ್ ಇನಾಂದಾರ್ ಅವರ ಗಮನಕ್ಕೆ ಬಂದಿರಲಿಲ್ಲ.
‘ನಾನು ಪ್ರತಿದಿನ ಓಡಾಡುವ ರಸ್ತೆ ಅದು. ಹೊಸದಾಗಿ ಗುಂಡಿ ತೆಗೆದಿದ್ದಾರೆ. ನಾನು ಸ್ಟಿಕ್ ಇಟ್ಟು, ಎಡಗಾಲು ಮುಂದಿಟ್ಟೆ. ನೇರವಾಗಿ ಗುಂಡಿಯೊಳಗೆ ಬಿದ್ದೆ. ತೊಡೆ ಭಾಗದಲ್ಲಿ ಭಾರಿ ನೋವಾಯಿತು’
ಸ್ಮಾರ್ಟ್ ಸಿಟಿ | ತಪ್ಪಿತು ಭಾರಿ ಅನಾಹುತ
ಇಮಾಮ್ ಸಾಬ್ ಇನಾಂದಾರ್ ಅವರು ಬಿದ್ದ ಗುಂಡಿಯೊಳಗೆ ಕಬ್ಬಿಣದ ರಾಡ್’ಗಳನ್ನು ಹಾಕಿರಲಿಲ್ಲ. ಒಂದು ವೇಳೆ ರಾಡ್’ಗಳನ್ನು ಹಾಕಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಸದ್ಯ ಇಮಾಮ್ ಸಾಬ್ ಇನಾಂದಾರ್ ಅವರ ಬಲಗಾಲಿಗೆ ಫ್ರಾಕ್ಚರ್ ಆಗಿದೆ. ಒಂದೂವರೆ ತಿಂಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆ.
ಸ್ಮಾರ್ಟ್ ಸಿಟಿ ಗುತ್ತಿಗೆದಾರರ ಗಾಢ ನಿರ್ಲಕ್ಷ್ಯ
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಅವೈಜ್ಞಾನಿಕ ಎಂಬ ಆರೋಪವಿದೆ. ಈ ಮಧ್ಯೆ ಕಾಮಗಾರಿ ಸಂದರ್ಭ ಜನರ ಸುರಕ್ಷತೆ ಬಗ್ಗೆ ಕಿಂಚಿತ್ತು ಗಮನ ಹರಿಸುತ್ತಿಲ್ಲ ಎಂಬ ಆಕ್ರೋಶವಿದೆ. ಕಾಮಗಾರಿಗಾಗಿ ಗುಂಡಿ ತೆಗೆದು ಹಾಗೆ ಬಿಡಲಾಗುತ್ತದೆ. ಗುಂಡಿಯ ಸುತ್ತಲು ಬ್ಯಾರಿಕೇಡ್ ಅಳವಡಿಸಬೇಕು. ಅದರೆ ಆ ಬಗ್ಗೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದನ್ನು ಪರಿಶೀಲಿಸಬೇಕಾದ ಅಧಿಕಾರಿಗಳು ಕ್ಯಾರೆ ಅನ್ನದೆ ಕಚೇರಿಗೆ ಸೀಮತವಾಗಿದ್ದಾರೆ. ಇದೆ ಕಾರಣಕ್ಕೆ ಇಮಾಮ್ ಸಾಬ್ ಇನಾಂದಾರ್ ಬಿದ್ದು ಗಾಯಗೊಂಡಿದ್ದಾರೆ.
ಗುತ್ತಿಗೆದಾರನ ವಿರುದ್ಧ ಕೇಸ್
ಸ್ಮಾರ್ಟ್ ಸಿಟಿ ಗುತ್ತಿಗೆದಾರರು ಸುರಕ್ಷತಾ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಇಮಾಮ್ ಸಾಬ್ ಇನಾಂದಾರ್ ಅವರು ದೂರು ದಾಖಲಿಸಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗದ ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದ ಬೈಕ್, ಅದೃಷ್ಟವಶಾತ್ ಉಳಿಯಿತು ಸವಾರನ ಪ್ರಾಣ, ಹೇಗಾಯ್ತು ಘಟನೆ?
‘ನನಗೆ ಆದಂಗೆ ಇನ್ನೊಬ್ಬರಿಗೆ ಆಗಬಾರದು. ಯಾರಿಗೂ ನೋವಾಗಬಾರದು ಅನ್ನುವ ಕಾರಣಕ್ಕೆ ದೂರು ಕೊಟ್ಟಿದ್ದೇನೆ. ಈತನಕ ಸ್ಮಾರ್ಟ್ ಸಿಟಿಯ ಅಧಿಕಾರಿಗಳ್ಯಾರು ಬಂದು ತಮ್ಮ ಆರೋಗ್ಯ ವಿಚಾರಿಸಿಲ್ಲ.’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗಾಯಾಳು ಇಮಾಮ್ ಸಾಬ್ ಇನಾಂದಾರ್.
ಜನ, ಜಾನುವಾರುಗಳಿಗೆ ನಿತ್ಯ ಸಂಕಷ್ಟ
ಕಾಮಗಾರಿ ಶುರುವಾದಾಗಿನಿಂದ ಜನರು ಧೂಳು ಮತ್ತು ಗುಂಡಿಗಳ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಗುಂಡಿ ತೆಗೆದು ಎಚ್ಚರಿಕೆ ಫಲಕಗಳನ್ನು ಅಳವಡಿಸದೆ ಜನ, ಜಾನುವಾರುಗಳು ಬಿದ್ದು, ನುಲುಗಿದ ಹಲವು ಉದಾಹರಣೆ ಇದೆ. ನಿಧಾನಗತಿ ಕಾಮಗಾರಿಯಿಂದಾಗಿ ಶಿವಮೊಗ್ಗ ನಗರ ಧೂಳುಮಯವಾಗಿದೆ. ಇದರಿಂದ ಶ್ವಾಸಕೋಶ ಸಮಸ್ಯೆಗಳು ಉಂಟಾಗಿವೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರು ಜನರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳದೆ ಸ್ಮಾರ್ಟ್ ಸಿಟಿ ನಿರ್ಮಿಸಲು ಹೊರಟಿದ್ದಾರೆ.
ಇದನ್ನೂ ಓದಿ | ‘ಶಿವಮೊಗ್ಗಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿ ವರವಲ್ಲ ಶಾಪ, 2023ಕ್ಕೆ ಮುಗಿಬೇಕಿರೋದು 2030 ಆದರೂ ಮುಗಿಯಲ್ಲ’
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422