ಶಿವಮೊಗ್ಗ ಲೈವ್.ಕಾಂ | SHIMOGA | 13 ಅಕ್ಟೋಬರ್ 2019
ಪ್ರಯಾಣಿಕರೆ ಹುಷಾರ್. ಈ ರಸ್ತೆಯಲ್ಲಿ ಎಚ್ಚರದಿಂದ ವಾಹನ ಚಲಾಯಿಸಿ. ಯಾಕಂದರೆ ಇಲ್ಲಿ ಜವರಾಯ ಹೊಂಚು ಹಾಕಿ ಕೂತಿದ್ದಾನೆ.

ಭಾರಿ ಮಳೆ ಬಳಿಕ ಶಿವಮೊಗ್ಗದ ರಸ್ತೆಗಳೆಲ್ಲ ಗುಂಡಿಮಯವಾಗಿದೆ. ಶಿವಮೊಗ್ಗ – ಹೊಳೆಹೊನ್ನೂರು ನಡುವಿನ ಹೈವೆ ರಸ್ತೆಯು ಇದಕ್ಕೆ ಹೊರತಾಗಿಲ್ಲ.
ಹೊಳೆಹೊನ್ನೂರು ರಸ್ತೆಯಲ್ಲಿ ಹೊಳೆಬೆನವಳ್ಳಿ ತಾಂಡದ ಬಳಿ ಹೆಚ್.ಪಿ.ಸಿ ಕ್ರಾಸ್’ನಲ್ಲಿರು ಸೇತುವೆ ಮಧ್ಯದಲ್ಲೇ ಭಾರಿ ಗುಂಡಿ ಬಿದ್ದಿದೆ.
ಈ ಗುಂಡಿಯಿಂದಾಗಿ ಈಗಾಗಲೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇನ್ನಷ್ಟು ಅಪಾಯ ಸಂಭವಿಸುವ ಮೊದಲೆ ಇಲ್ಲಿಯ ಯುವಕರು ವಾಹನ ಚಾಲಕರಿಗೆ ಎಚ್ಚರಿಕೆ ನೀಡಲು, ಗುಂಡಿಯಲ್ಲಿ ತೆಂಗಿನ ಗರಿ ನೆಟ್ಟಿದ್ದಾರೆ.

ಇನ್ನು ಗುಂಡಿಯ ಮುಂದೆಯೆ ರಸ್ತೆಗೆ ಅಡ್ಡಲಾಗಿ ಚಾನಲ್ ಹರಿಯುತ್ತಿದೆ. ಚಾನಲ್ ಹರಿಯುತ್ತಿರುವ ಅಷ್ಟು ಭಾಗದಲ್ಲಿ ರಸ್ತೆ ಕುಸಿದಿದೆ. ಅದರಲ್ಲು ರಸ್ತೆಯ ಒಂದು ಭಾಗದಲ್ಲಿ ಸಂಪೂರ್ಣ ಕುಸಿದು, ದೊಡ್ಡ ಕಂದಕವಾಗಿದೆ. ಅಪ್ಪಿತಪ್ಪಿ ವಾಹನಗಳು ರಸ್ತೆಯಿಂದ ಸ್ವಲ್ಪ ಕೆಳಗಿಳಿದರೆ ಕಥೆ ಮುಗಿದಂತೆ.


ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಆಗಿರುವುದರಿಂದ ಖಾಸಗಿ ಬಸ್ಸುಗಳು ಪ್ರತಿದಿನ ನೂರಾರು ಟ್ರಿಪ್ ಹೊಡೆಯುತ್ತವೆ. ಶಾಲಾ ಬಸ್ಸುಗಳು ಕೂಡ ಪ್ರತಿದಿನ ಸಂಚರಿಸುತ್ತವೆ. ಇತರೆ ವಾಹನಗಳು ದೊಡ್ಡ ಸಂಖ್ಯೆಯಲ್ಲಿ ಓಡಾಡುತ್ತವೆ. ಸ್ವಲ್ಪ ಯಾಮಾರಿದರೆ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವುದು ನಿಶ್ಚಿತ ಅನ್ನುತ್ತಾರೆ ಸ್ಥಳೀಯರು.


ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]