SHIVAMOGGA LIVE | 30 JULY 2023
SHIMOGA : ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿರುವ ಎಫ್.ಎಂ ಕೇಂದ್ರವನ್ನು (FM Transmitter) ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರದ ಪ್ರಸಾರ ಭಾರತಿ ಅನುಮತಿ ನೀಡಿದೆ. ಇದಕ್ಕಾಗಿ 10 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ ಸಂಸದ ರಾಘವೇಂದ್ರ, ಭದ್ರಾವತಿ ಆಕಾಶವಾಣಿ ಕೇಂದ್ರ ಪ್ರಸ್ತುತ 1 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ಮೀಟರ್ ಹೊಂದಿದೆ. ಇದನ್ನು 10 ಕಿ.ವ್ಯಾ.ಗೆ ಮೇಲ್ದೆರ್ಜೆಗೇರಿಸಲಾಗುತ್ತಿದೆ. ಇದಕ್ಕಾಗಿ 10 ಕೋಟಿ ರೂ. ಮಂಜೂರಾಗಿದ್ದು, ಡಿಸೆಂಬರ್ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಭದ್ರಾವತಿ ಎಫ್.ಎಂ ಕೇಂದ್ರದ ಕಾರ್ಯಕ್ರಮಗಳು ಮಧ್ಯ ಕರ್ನಾಟಕ ಭಾಗ ಮತ್ತು ಮಂಗಳೂರು ತನಕ ತಲುಪಲಿದೆ ಎಂದರು.
ಭದ್ರಾವತಿ ಕೇಂದ್ರದ ಗೋಪುರವು 100 ಮೀಟರ್ ಎತ್ತರವಿದೆ. ಶಿವಮೊಗ್ಗದಲ್ಲಿರುವ ದೂರದರ್ಶನದ ಗೋಪುರ 150 ಮೀಟರ್ ಎತ್ತರವಿದೆ. ಹಾಗಾಗಿ ದೂರದರ್ಶನ ಗೋಪುರದ ಮೇಲೆ ಎಫ್.ಎಂ ಟ್ರಾನ್ಮೀಟರ್ (FM Transmitter) ಅಳವಡಿಸಲಾಗುತ್ತದೆ. ಆದರೆ ಆಕಾಶವಾಣಿ ಕೇಂದ್ರ ಭದ್ರಾವತಿಯಲ್ಲಿಯೆ ಇರಲಿದೆ. ಅಲ್ಲಿಯೆ ಕಾರ್ಯಕ್ರಮಗಳ ರೆಕಾರ್ಡಿಂಗ್ ನಡೆಯಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಇದನ್ನೂ ಓದಿ – GOOD NEWS | ಬೆಂಗಳೂರು – ಶಿವಮೊಗ್ಗ ವಿಮಾನದ ಟಿಕೆಟ್ ರೇಟ್ ಇಳಿಕೆ, ಈವರೆಗೂ ಎಷ್ಟಾಗಿದೆ ಬುಕಿಂಗ್?
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಎಸ್.ದತ್ತಾತ್ರಿ, ಮಾಲತೇಶ್, ಸಂತೋಷ್ ಬಳ್ಳೆಕೆರೆ ಮತ್ತಿತರರು ಇದ್ದರು.
