SHIVAMOGGA LIVE NEWS | 22 SEPTEMBER 2023
SAGARA : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ (Horticulture) ವಿಜ್ಞಾನಗಳ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೃಷಿಕರ ವಿಶ್ವವಿದ್ಯಾಲಯವಾಗಿಯು ಬೆಳೆಯಬೇಕು ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ (Horticulture) ವಿಜ್ಞಾನಗಳ ವಿಶ್ವವಿದ್ಯಾಲಯದ ಇರುವಕ್ಕಿ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 11ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತಾಡಿದರು.
ರೈತರ ಇಳುವರಿ ಹೆಚ್ಚಿಸಬೇಕು
ರೈತರು ಯಾವ ಭೂಮಿಯಲ್ಲಿ ಎಂತಹ ಬೆಳೆಯನ್ನು ಬೆಳೆಯಬೇಕೆಂಬ ಪರಿಜ್ಞಾನ, ಮಾಹಿತಿ ನೀಡಲು ಪಂಚಾಯಿತಿವಾರು ಕನಿಷ್ಟ 50 ಜನರಿಗೆ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ರೈತರ ಇಳುವರಿ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸಂಶೋಧನೆ, ಪ್ರಯೋಗಗಳನ್ನು ಕೈಗೊಂಡಲ್ಲಿ ರೈತರು ಸಹ ವಿಶ್ವವಿದ್ಯಾಲಯದ ಜೊತೆಗೆ ಕೈ ಜೋಡಿಸುತ್ತಾರೆ ಎಂದರು.
ರೈತರ ಮಕ್ಕಳಿಗೆ ಶೇ.50ರಷ್ಟು ಮೀಸಲು
ಪ್ರಗತಿಪರ ರೈತ ದೊಡ್ಡಗೌಡ ಸಿ.ಪಾಟೀಲ್ ಮಾತಾಡಿ, ಬರಗಾಲದಿಂದ ರೈತರು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ವಿವಿ ಮೇಲಿದೆ. ಬೆಳೆ, ರೋಗ ನಿರ್ವಹಣೆ ಕುರಿತು ತಿಳಿಸಬೇಕು. ರೈತರ ಜೀವನ ಹಸನು ಮಾಡಲು ಪ್ರಯತ್ನಿಸಬೇಕು. ವಿವಿ ಯಲ್ಲಿ ರೈತರ ಮಕ್ಕಳಿಗೆ ಶೇ.50 ಮೀಸಲಾತಿ ಇದೆ. ಇಂಜಿನಿಯರಿಂಗ್ಗಿಂತ ಕೃಷಿ ವಿಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಬೆಳೆಯಬೇಕು ಎಂದರು.
ಆರು ಹೊಸ ಸ್ನಾತಕೋತ್ತರ ಕೇಂದ್ರ
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ್ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸದಾಗಿ 6 ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಆರಂಭಿಸಲಾಗುವುದು. ಭವಿಷ್ಯದಲ್ಲಿ ವಿಶ್ವವಿದ್ಯಾಲಯವು ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.
ಅತ್ಯುತ್ತಮ ಶಿಕ್ಷಕರು, ವಿಜ್ಞಾನಿಗಳು, ಸಿಬ್ಬಂದಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು. ನಿವೃತ್ತರಾದ ಶಿಕ್ಷಕ, ಸಿಬ್ಬಂದಿಯನ್ನು ಗೌರವಿಸಲಾಯಿತು.
ಇದನ್ನೂ ಓದಿ – ಪ್ರಗತಿಪರ ರೈತ, ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ?
ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ್ ಸ್ವಾಗತಿಸಿದರು. ವ್ಯವಸ್ಥಾಪನಾ ಮಂಡಳಿ ಸದಸ್ಯ ಹಾಗೂ ಪ್ರಗತಿಪರ ರೈತ ವೀರಭದ್ರಪ್ಪ ಪೂಜಾರಿ, ಶಿಕ್ಷಣ ತಜ್ಞ ಪಿ.ಕೆ.ಬಸವರಾಜ ಮಾತನಾಡಿದರು. ಪ್ರಗತಿಪರ ರೈತ ನಾಗರಾಜ್, ಕೃಷಿ ಉದ್ದಿಮೆದಾರ ಬಿ.ಕೆ.ಕುಮಾರಸ್ವಾಮಿ, ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
