SHIVAMOGGA LIVE NEWS | 22 SEPTEMBER 2023
SHIMOGA : ವಿಶ್ವ ಹಿಂದೂ ಪರಿಷತ್ನ 60 ವರ್ಷಾಚರಣೆ ಹಿನ್ನೆಲೆ ದೇಶಾದ್ಯಂತ ಶೌರ್ಯ ಜಾಗರಣ ರಥ (Ratha) ಯಾತ್ರೆ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿಯು ರಥ ಸಂಚರಿಸಲಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮ ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ನೀಡುವುದು ವಿಎಚ್ಪಿ ಉದ್ದೇಶ. ರಾಮಮಂದಿರ ನಿರ್ಮಿಸುವ ಅಭಿಯಾನವನ್ನು ವಿಎಚ್ಪಿ ಮತ್ತು ಬಜರಂಗದಳ ಮುನ್ನಡೆಸಿದ್ದವು. ಇದನ್ನು ಸ್ಮರಿಸುವ ಉದ್ದೇಶದಿಂದ ರಥ ಯಾತ್ರೆ ನಡೆಸಲಾಗುತ್ತಿದೆ ಎಂದರು.
ಬಜರಂಗದಳ ವಿಭಾಗ ಸಂಯೋಜಕ ರಾಜೇಶ್ ಗೌಡ ಮಾತನಾಡಿ, ಶೌರ್ಯ ಜಾಗರಣ ಯಾತ್ರೆಯು (Ratha) ಸೆ.25ರಂದು ಚಿತ್ರದುರ್ಗದಲ್ಲಿ ಪ್ರಾರಂಭವಾಗಲಿದೆ. ದಾವಣಗೆರೆ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ಮೂಲಕ ಸಾಗಿ ಸೆ.27ರಂದು ಶಿವಮೊಗ್ಗಕ್ಕೆ ಬರಲಿದೆ. ಈ ರಥಯಾತ್ರೆಯಲ್ಲಿ ಸ್ಥಳೀಯವಾಗಿ ಹಿಂದೂ ಸಮಾಜದ ರಕ್ಷಣೆಗೆ ಬಲಿದಾನ ನೀಡಿದವರನ್ನು ಸ್ಮರಿಸಲಾಗುತ್ತದೆ ಎಂದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಅತಿ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ, ಎಲ್ಲೆಲ್ಲಿ ಹೇಗಿದೆ ಕಾರ್ಯಕ್ರಮ?
ಸೆ.27ರಂದು ಸಂಜೆ 5.30ಕ್ಕೆ ಶಿವಪ್ಪನಾಯಕ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಆರ್ಎಸ್ಎಸ್ ವಿಭಾಗ ಪ್ರಮುಖ್ ಲೋಹಿತಾಶ್ವ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶ್ರೀ ರಾಚೋಟೇಶ್ವರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಎಚ್ಪಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ವರ್ಣೇಕರ್, ನಾಗೇಶ್, ಸುರೇಶ್ ಬಾಬು, ಮಂಜು ಶೇಟ್ ಇದ್ದರು.
