ಶಿವಮೊಗ್ಗ ಲೈವ್.ಕಾಂ | SHIMOGA | 5 ನವೆಂಬರ್ 2019
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊರ ರಾಜ್ಯದವರ ಹಾವಳಿ, ಕನ್ನಡಿಗರ ಕೊರತೆ ಎಂಬ ಟೀಕೆಗಳಿಗೆ ಈಗ ಬ್ಯಾಂಕ್ ಸಿಬ್ಬಂದಿಯೇ ಪರಿಹಾರ ಹುಡುಕಲು ಮುಂದಾಗಿದ್ದಾರೆ. ಶಿವಮೊಗ್ಗದ ಮೂವರು ಬ್ಯಾಂಕ್ ಸಿಬ್ಬಂದಿ ಆರಂಭಿಸಿದ ಪರಿಹಾರ ಈಗ ರಾಜ್ಯ ವ್ಯಾಪ್ತಿ ವಿಸ್ತರಿಸಿದೆ. ಪ್ರತಿಫಲದತ್ತ ಹೆಜ್ಜೆ ಹಾಕಿದೆ.

ಶಿವಮೊಗ್ಗದ ಕೆನರಾ ಬ್ಯಾಂಕ್ ಉದ್ಯೋಗಿಗಳಾದ ರಾಜೇಂದ್ರ ಪೈ, ರಘು.ಕೆ.ಆರ್, ಪ್ರಭುಗೌಡ ಅವರ ಹೊಸ ಐಡಿಯಾಗೆ ಉತ್ತಮ ಸ್ಪಂದನೆ ಸಿಕ್ಕಿದೆ. 3700 ವಿದ್ಯಾರ್ಥಿಗಳು ಈಗಾಗಲೇ ತರಬೇತಿ ಪಡೆದಿದ್ದಾರೆ.
2018ರ ನವೆಂಬರ್ 1ರಂದು ಮೂರು ಜನರಿಂದ ಆರಂಭವಾದ ‘ಕೆನರಾ ಬ್ಯಾಂಕ್ ಉದ್ಯೋಗಿಗಳ ಕನ್ನಡ ಕೂಟ’ ಇವತ್ತು 780 ಸದಸ್ಯರೊಂದಿಗೆ ರಾಜ್ಯಾದ್ಯಂತ ವ್ಯಾಪಿಸಿದೆ. ಹೊರ ರಾಜ್ಯದ ಬ್ಯಾಂಕಿಂಗ್ ಸಿಬ್ಬಂದಿ ಕೂಡ ಈ ಮಣ್ಣಿನ ಋಣ ತೀರಿಸಬೇಕೆಂಬ ಆಶಯದಿಂದ ಈ ಕಾರ್ಯದಲ್ಲಿ ಸೇರಿಕೊಂಡಿರುವುದು ವಿಶೇಷ.
ಏನಿದು ಕನ್ನಡ ಕೂಟ? ಇದರ ಕೆಲಸವೇನು?
ಬ್ಯಾಂಕ್ ಸಿಬ್ಬಂದಿಗೆ ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ. ಇಂತಹ ದಿನಗಳಲ್ಲಿ ಸ್ಥಳೀಯ ಕಾಲೇಜುಗಳಿಗೆ ಭೇಟಿ ನೀಡಿ, ಎರಡರಿಂದ ಎರಡುವರೆ ಗಂಟೆ ಐಬಿಪಿಎಸ್ ಪರೀಕ್ಷೆ ಬಗ್ಗೆ ಮಾಹಿತಿ ಕೊಡಲಾಗುತ್ತದೆ. ಆನ್’ಲೈನ್, ಆಫ್’ಲೈನ್ ಎಕ್ಸಾಂ ಮೆಟೀರಿಯಲ್ ಪಡೆಯುವ ಬಗ್ಗೆ ಮಾಹಿತಿ, ರೆಫರೆನ್ಸ್ ಬುಕ್’ಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಜತೆಗೆ ಈಚೆಗೆ ಐಬಿಪಿಎಸ್ ಪರೀಕ್ಷೆ ಪಾಸಾಗಿ ಕೆಲಸಕ್ಕೆ ಸೇರಿದವರಿಂದಲೂ ಮಾಹಿತಿ ವಿನಿಮಯ ಮಾಡಿಸಲಾಗುತ್ತಿದೆ. ಆನ್ಲೈನ್ನಲ್ಲಿ ಸಿಗುವ ಕೆಲವು ಮೆಟಿರಿಯಲ್’ಗಳನ್ನು ವಿದ್ಯಾರ್ಥಿಗಳಿಗೆ ಈ-ಮೇಲ್ ಮಾಡಲಾಗುತ್ತದೆ.

ಪ್ರತಿ ಜಿಲ್ಲೆಯಲ್ಲೂ ಆಸಕ್ತರನ್ನು ಗುರುತಿಸಿ ಅವರಿಗೆ ತರಬೇತಿ ಜವಾಬ್ದಾರಿ ನೀಡಲಾಗಿದೆ. ಹುಬ್ಬಳ್ಳಿ, ಸಾಗರ, ಹಾಸನದಲ್ಲಿ ಈಗಾಗಲೇ ಈ ತಂಡಗಳು ಸಕ್ರಿಯವಾಗಿವೆ. ಶಿರಸಿ, ಗುಲ್ಬರ್ಗಾ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಸದ್ಯದಲ್ಲೇ ತರಬೇತಿ ಆರಂಭವಾಗಲಿದೆ ಎನ್ನುತ್ತಾರೆ ಕೂಟದ ಸಂಸ್ಥಾಪಕ ಸದಸ್ಯ ರಾಜೇಂದ್ರ ಪೈ.

ಬ್ಯಾಂಕಿಂಗ್ ಪರೀಕ್ಷೆ ಎದುರಿಸಲು ರೆಡಿ
ಇನ್ನು, ತರಬೇತಿ ಪಡೆದ ಸಹ್ಯಾದ್ರಿ ಕಾಲೇಜು ಎಂಬಿಎ ವಿದ್ಯಾರ್ಥಿನಿ ಸಂಗೀತಾ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿ, ಕನ್ನಡ ಕೂಟದಿಂದ ತರಬೇತಿ ನೀಡಿದ್ದು ತುಂಬಾ ಅನುಕೂಲವಾಗಿದೆ. ಐಬಿಪಿಎಸ್ ಪರೀಕ್ಷೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ನಮ್ಮ ತರಗತಿಯ ಅನೇಕ ವಿದ್ಯಾರ್ಥಿಗಳು ಮೋಟಿವೇಟ್ ಆಗಿ ಪರೀಕ್ಷೆ ಕಟ್ಟಿದ್ದಾರೆ. ನಾನು ಒಮ್ಮೆ ಪರೀಕ್ಷೆ ಬರೆದಿದ್ದೇನೆ ಅನ್ನುತ್ತಾರೆ.

ನಮ್ಮ ಜನ ಬ್ಯಾಂಕ್’ಗಳಲ್ಲಿ ಕನ್ನಡದ ಅಧಿಕಾರಿಗಳು ಇಲ್ಲ ಎಂದು ದೂರುತ್ತಾರೆ. ಆದರೆ ತಮ್ಮ ಮಕ್ಕಳನ್ನೇ ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸುವುದಿಲ್ಲ. ಶಿವಮೊಗ್ಗದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಇದ್ದರೂ ಆಂಧ್ರದ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಇಲ್ಲೇ ಇರುವ ನಮ್ಮ ವಿದ್ಯಾರ್ಥಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಬ್ಯಾಂಕ್ ಸಿಬ್ಬಂದಿಗೆ ಇರುವ ಸೌಲಭ್ಯ, ಸೌಕರ್ಯಗಳ ಬಗ್ಗೆ ಅನೇಕ ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲ. ಕೆಲವರಿಗೆ ಐಬಿಪಿಎಸ್ ಪರೀಕ್ಷೆ ಬಗ್ಗೆಯೇ ಗೊತ್ತಿಲ್ಲ. ಕಾಲೇಜುಗಳಿಗೆ ಭೇಟಿ ನೀಡಿ ಇಂತಹ ಸಂಶಯಗಳನ್ನು ನಿವಾರಣೆ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಲ್ಲೂ ಈ ಬಗ್ಗೆ ಆಸಕ್ತಿ ಬೆಳೆಯಬೇಕು ಎನ್ನುತ್ತಾರೆ ರಾಜೇಂದ್ರ ಪೈ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ ಅನ್ನುವುದಕ್ಕೆ ಶಿವಮೊಗ್ಗದ ಮೂವರು ಬ್ಯಾಂಕ್ ಉದ್ಯೋಗಿ ಪರಿಹಾರ ಕಂಡುಹಿಡಿದಿದ್ದಾರೆ. ಇದು ಇತರೆ ಬ್ಯಾಂಕುಗಳಲ್ಲಿ ಇರುವ ಕನ್ನಡಿಗರನ್ನು ಸೆಳೆದಿದೆ. ಉಳಿದ ಬ್ಯಾಂಕುಗಳಲ್ಲು ಈಗ ಕನ್ನಡ ಕೂಟಗಳು ರಚನೆ ಆಗುತ್ತಿವೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]