SHIVAMOGGA LIVE | 16 JUNE 2023 | FATAFAT NEWS
ಸಂಸದ ರಾಘವೇಂದ್ರ ಸೇರಿ ಹಲವರು ಪೊಲೀಸ್ ವಶಕ್ಕೆ
SHIMOGA : ವಿದ್ಯುತ್ ದರ ಹೆಚ್ಚಳ ಖಂಡಿಸಿ ಬಿಜೆಪಿ ಗ್ರಾಮಾಂತರ ಕಾರ್ಯಕರ್ತರು ಗುರುವಾರ ಶಿವಮೊಗ್ಗದಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು. ಬುಧವಾರ ಬಿಜೆಪಿ ನಗರ ಘಟಕದ ಪ್ರತಿಭಟನೆ ವೇಳೆ ಕೆಲವು ಕಾರ್ಯಕರ್ತರು ಮೆಸ್ಕಾಂ ಕಚೇರಿಯ ಕಿಟಿಕಿ ಗಾಜಿಗೆ ಕಲ್ಲು ತೂರಿದ್ದರು. ಈ ಹಿನ್ನೆಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ವೃತ್ತಾಕಾರದ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ
VIDYA NAGAR : ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಪರಿಶೀಲನೆ ನಡೆಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರೊಂದಿಗೆ ವೃತ್ತಾಕಾರದ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ, ‘ವಿದ್ಯಾನಗರದ ಸೇತುವೆ ಕಾಮಗಾರಿ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ. ನಗರದ ಸವಳಂಗ ರಸ್ತೆ, ಸೋಮಿನಕೊಪ್ಪ, ಭದ್ರಾವತಿಯ ಕಡದಕಟ್ಟೆ ಬಳಿ ಮೆಲ್ಸೇತುವೆ ಕಾಮಗಾರಿ ಬಿರುಸಾಗಿ ನಡೆಯುತ್ತಿವೆ. ಡಿಸೆಂಬರ್ ವೇಳೆಗೆ ಹಂತ ಹಂತವಾಗಿ ಮೇಲ್ಸೇತುವೆಗಳು ಉದ್ಘಾಟನೆಯಾಗಲಿವೆʼ ಎಂದು ತಿಳಿಸಿದರು.
ಶಿವಮೊಗ್ಗದಿಂದ ವಿಮಾನಯಾನ ಸೇವೆ ಆರಂಭ
SHIMOGA : ಆಗಸ್ಟ್ 11ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಆರಂಭವಾಗಲಿದೆ. ಇನ್ನೆರಡು ದಿನದಲ್ಲಿ ಇಂಡಿಗೊ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟಣೆ ಹೊರಬೀಳಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಂಟರ್‌ನ್ಯಾಷನಲ್ ಕೋಡ್ ಕೂಡ ಲಭಿಸಿದೆ ಎಂದರು.
ಇದನ್ನೂ ಓದಿ – ಶಿವಮೊಗ್ಗ ಏರ್‌ಪೋರ್ಟ್, ವಿಮಾನ ಹಾರಾಟ, 3 ವಿಚಾರ ತಿಳಿಸಿದ ಸಂಸದ ರಾಘವೇಂದ್ರ, ಏನೇನು?
ಉತ್ತಮ ಸೇವೆ, 10 ಪೊಲೀಸ್ ಸಿಬ್ಬಂದಿಗೆ ಗೌರವ
SHIMOGA : ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಕಾನ್‌ಸ್ಟೇಬಲ್‌ನಿಂದ ಎಎಸ್‌ಐವರೆಗೆ 10 ಸಿಬ್ಬಂದಿಯನ್ನು ಜೂ.16ರಂದು ಗೌರವಿಸಲಾಗುತ್ತಿದೆ. ಗೋಪಾಳದ ಸಾಯಿ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿ ಶಿವಮೊಗ್ಗ ರೌಂಡ್ ಟೇಬಲ್, ಮಲ್ನಾಡ್ ರೌಂಡ್ ಟೇಬಲ್, ಮಲ್ನಾಡ್ ಮಾಸ್ಟರ್ಸ್ ವತಿಯಿಂದ ಸನ್ಮಾನಿಸಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ಸಿಟಿ ಕೋ ಆಪರೇಟಿವ್ ಬ್ಯಾಂಕ್‌ಗೆ ನೂತನ ಅಧ್ಯಕ್ಷ
SHIMOGA : ಸಿಟಿ ಕೋ – ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಹಿರಿಯ ನಿರ್ದೇಶಕ ಎಂ.ಕೆ.ಸುರೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮರಿಯಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಜಿಲ್ಲಾ ಸಹಾಯಕ ನಿಬಂಧಕ ರುದ್ರಪ್ಪ ಕರ್ತವ್ಯ ನಿರ್ವಹಿಸಿದ್ದರು. ಬ್ಯಾಂಕ್‌ನ ನೂತನ ಆಡಳಿತ ಮಂಡಳಿಗೆ 2024ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.
ಪಠ್ಯ ಪರಿಷ್ಕರಣೆ, ಸರ್ಕಾರಕ್ಕೆ ಪ್ರಶ್ನೆ ಮಾಡಲ್ಲ
SHIMOGA : ಪಠ್ಯ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ಸ್ವಾತಂತ್ರ್ಯವಿದೆ. ಅದನ್ನು ಪ್ರಶ್ನಿಸುವ ಅಧಿಕಾರ ನನಗಿಲ್ಲ. ನಾನು ಅಧ್ಯಕ್ಷನಾಗಿದ್ದ ವೇಳೆ ಸೇರ್ಪಡೆ ಮಾಡಿರುವ ವಿಷಯಗಳ ಬಗ್ಗೆ ಸರ್ಕಾರ ಕೇಳಿದರೆ ಸ್ಪಷ್ಟ ಕಾರಣ ನೀಡಲು ಸಿದ್ಧ ಎಂದು ರೋಹಿತ್ ಚಕ್ರತೀರ್ಥ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ್ದ ವೇಳೆ ರೋಹಿತ್ ಚಕ್ರತೀರ್ಥ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕ ಚನ್ನಬಸಪ್ಪ ಬಂಧನಕ್ಕೆ ಒತ್ತಾಯ
SHIMOGA : ಪ್ರತಿಭಟನೆ ವೇಳೆ ಸರ್ಕಾರಿ ಆಸ್ತಿ ನಾಶ ಮಾಡಲು ಯತ್ನಿಸಿದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರನ್ನು ಬಂಧಿಸಬೇಕು ಎಂದು ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಘಟಕ ಆಗ್ರಹಿಸಿದೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ವೇಳೆ ಕಲ್ಲು ತೂರಾಟ ಮಾಡಲಾಗಿತ್ತು. ಆದ್ದರಿಂದ ಅವರನ್ನು ಬಂಧಿಸುವಂತೆ ಐಎನ್‌ಟಿಯುಸಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಎರಡು ದಿನ ಅಮೃತ ಮಹೋತ್ಸವ ಕಾರ್ಯಕ್ರಮ
SHIMOGA : ಅಮೃತ ಮಹೋತ್ಸವದ ಹಿನ್ನೆಲೆ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಮೈದಾನದಲ್ಲಿ ಜೂ. 20 ಮತ್ತು 21ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಮೃತ ಮಹೋತ್ಸವದ ಹಿನ್ನೆಲೆ ಪ್ರತಿಭಾ ಪುರಸ್ಕಾರ, ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ನಟ ವಸಿಷ್ಠ ಸಿಂಹ, ಗಂಗಾವತಿ ಪ್ರಾಣೇಶ್ ಅವರು ಪಾಲ್ಗೊಳ್ಳಲಿದ್ದಾರೆ. ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಶಿವಮೊಗ್ಗದ ಕಾನೂನು ಕಾಲೇಜಿಗೆ ಪ್ರಥಮ ಬಹುಮಾನ
SHIMOGA : ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಹೊನಲು ಬೆಳಕಿನ ಪುರುಷರ ಕಬಡ್ಡಿಯಲ್ಲಿ ಶಿವಮೊಗ್ಗದ ಸಿಬಿಆರ್ ಕಾನೂನು ಕಾಲೇಜು ತಂಡ ಪ್ರಥಮ ಬಹುಮಾನ ಪಡೆದಿದೆ. ಚಿತ್ರದುರ್ಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಜಿಕೆ ಕಾನೂನು ಜೊತೆ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಕಾನೂನು ಕಾಲೇಜು ಪ್ರಥಮ ಬಹುಮಾನ ಪಡೆದಿದೆ.
ಚಾರ್ಲಿ ಹುಡುಕಿಕೊಟ್ಟರೆ ಬಹುಮಾನ
SHIMOGA : ಲ್ಯಾಬ್ರಡಾರ್ ತಳಿಯ ಗಂಡು ನಾಯಿ ಚಾರ್ಲಿ ನಾಪತ್ತೆಯಾಗಿದೆ. ಹುಡಕಿಕೊಟ್ಟವರಿಗೆ ಕುಟುಂಬದವರು ಬಹುಮಾನ ಘೋಷಣೆ ಮಾಡಿದ್ದಾರೆ. ಮೇ 31ರಂದು ಚಾರ್ಲಿ ಕಾಣೆಯಾಗಿದೆ. ಮೂರು ವರ್ಷ ಶ್ವಾನದ ಕೊರಳಲ್ಲಿ ಕೆಂಪು ಬಣ್ಣದ ಕಾಲರ್ ಬೆಲ್ಟ್ ಇದೆ. ಯಾರಿಗಾದರು ಸಿಕ್ಕಿದ್ದರೆ ಕೂಡಲೆ ಮಾಹಿತಿ ನೀಡುವಂತೆ ಕುಟುಂಬದವರು ಕೋರಿದ್ದಾರೆ. ಮಾಹಿತಿಗೆ 8147327534 ಸಂಪರ್ಕಿಸಬಹುದು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200