ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 2 JUNE 2023
ಲೈಂಗಿಕ ಕಿರುಕುಳ, ಸಂಸದನ ಬಂಧನಕ್ಕೆ ಒತ್ತಾಯ
SHIMOGA : ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಅಂತಾರಾಷ್ಟ್ರೀಯ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಅವರನ್ನು ಕೂಡಲೆ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಗಾಳಿ, ಮಳೆಗೆ ಅಂಗನವಾಡಿ ಟೆಂಟ್ ಹಾನಿ
SHIMOGA : ನಗರದಲ್ಲಿ ಗುರುವಾರ ಗಾಳಿ, ಮಳೆಯಾಗಿದ್ದು, ಅಂಗನವಾಡಿ ಟೆಂಟ್ ಹಾರಿ ಹೋಗಿದೆ. ನಗರದ ಶ್ರೀರಾಂಪುರದಲ್ಲಿರುವ ಹಕ್ಕಿಪಿಕ್ಕಿ ಕ್ಯಾಂಪ್ನಲ್ಲಿ ಸ್ಥಳೀಯರೆ ಟೆಂಟ್ ಹಾಕಿ ಅಂಗನವಾಡಿ ನಿರ್ಮಿಸಿದ್ದರು. ಗಾಳಿ, ಮಳೆಗೆ ಟೆಂಟ್ ಹಾರಿ ಹೋಗಿದ್ದು ಮಕ್ಕಳ ಕಲಿಕೆಗೆ ಸಮಸ್ಯೆಯಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ಕಾರ್ಯಾಗಾರ
SHIMOGA : ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ತಿಂಗಳ ಉಚಿತ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಸಂಚಾಲಕಿ ಪವಿತ್ರಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವಿತ್ರಾ, ಮಿಷನ್ ಖಾಕಿ-ಪಿಎಸ್ಐ-ಪಿಸಿ ಹೆಸರಿನಲ್ಲಿ ಜೂ.3ರಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೊದಲು ಬಂದ 100 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. ಆಸಕ್ತರು 7337683668 ಮೊಬೈಲ್ ನಂಬರ್ ಸಂಪರ್ಕಿಸಬಹುದು.
ರಾಜಾ ಕಾಲುವೆ ಕಾಮಗಾರಿ ಪರಿಶೀಲಿಸಿದ ಎಂಎಲ್ಎ
SHIMOGA : ಎಲ್.ಬಿ.ಎಸ್ ನಗರದಲ್ಲಿ ನಿರ್ಮಾಣವಾಗುತ್ತಿರುವ ರಾಜಾ ಕಾಲುವೆಯ ಕಾಮಗಾರಿಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರ ಸಮಸ್ಯೆ ಆಲಿಸಿದರು. ಸಮಸ್ಯೆಗಳನ್ನು ತಕ್ಷಣಕ್ಕೆ ಪರಿಹರಿಸುವಂತೆ ಶಾಸಕ ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಸದಸ್ಯರು, ಅಧಿಕಾರಿಗಳು, ಸ್ಥಳೀಯರು ಪಾಲ್ಗೊಂಡಿದ್ದರು.
ಎಂಎಲ್ಎ ಕಚೇರಿಗೆ ರುದ್ರೇಗೌಡ ಭೇಟಿ
SHIMOGA : ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಇದೆ ವೇಳೆ ಎಸ್.ಎನ್.ಚನ್ನಬಸಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ಪಾಲಿಕೆ ಸದಸ್ಯ ವಿಶ್ವಾಸ್ ಇದ್ದರು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಒತ್ತಾಯ
SHIMOGA : ವಿಧಾನಸಭೆ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಹಲವರ ಹೆಸರು ಇಲ್ಲದಿರುವುದು ತಿಳಿದು ಬಂದಿದೆ. ಮುಂದಿನ ಚುನಾವಣೆಯ ಒಳಗಾಗಿ ಮತದಾರರ ಹೆಸರನ್ನು ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದ್ದರೆ. ವಿಧಾನಸಭೆ ಚುನಾವಣೆ ವೇಳೆ ವಿವಿಧ ವಾರ್ಡ್ಗಳಲ್ಲಿ ತಮ್ಮ ಹೆಸರು ಬಿಟ್ಟು ಹೋಗಿದೆ ಎಂದು ಮತದಾರರು ದೂರಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬೈಕ್ಗೆ ಹಿಂಬದಿಯಿಂದ ಗುದ್ದಿದ ಕಾರು, ಗಂಭೀರ ಗಾಯ
SHIMOGA : ಚಲಿಸುತ್ತಿದ್ದ ಬೈಕ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಿವಮೊಗ್ಗ – ಸಾಗರ ರಸ್ತೆಯ ಪೆಸೆಟ್ ಕಾಲೇಜು ಸಮೀಪ ಘಟನೆ ಸಂಭವಿಸಿದೆ. ಶ್ರೀರಾಂಪುರದ ವಿಜಯ ಕುಮಾರ್ (24) ಗಾಯಾಳು. ತ್ಯಾವರೆಕೊಪ್ಪದಲ್ಲಿರುವ ಸಂಬಂಧಿಯ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿದೆ. ಬೈಕ್ಗೆ ಡಿಕ್ಕಿ ಹೊಡೆಸಿದ ಕಾರು ಸ್ಥಳದಿಂದ ಪರಾರಿಯಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್.ಟಿ.ರಸ್ತೆಯ ಹೊಟೇಲ್ ಮೇಲೆ ಪೊಲೀಸ್ ದಾಳಿ
SHIMOGA : ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿದ್ದ ಆರೋಪದ ಹಿನ್ನೆಲೆ ಸತೀಶ್ ಶೆಟ್ಟಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಎನ್.ಟಿ.ರಸ್ತೆಯ ಹೊಟೇಲ್ ಒಂದರಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮದ್ಯದ ಪೌಚ್ಗಳು, ಪ್ಲಾಸ್ಟಿಕ್ ಗ್ಲಾಸ್ಗಳನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಮಿಲಿಟರಿ ಹೊಟೇಲ್ ಮೇಲೆ ದಾಳಿ
SHIMOGA : ಮಿಲಿಟರಿ ಹೊಟೇಲ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೋಟೆ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಲಷ್ಕರ್ ಮೊಹಲ್ಲಾ ಸರ್ಕಲ್ ಸಮೀಪ ಇರುವ ಮಿಲಿಟರಿ ಹೊಟೇಲ್ನಲ್ಲಿ ದಾಳಿ ವೇಳೆ 35 ಮದ್ಯದ ಪೌಚ್ಗಳು, 1229 ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಪ್ರಭಾಕರ್ ಎಂಬಾತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಬಾರ್ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆ
SHIMOGA : ನಗರದ ಗಂಧರ್ವ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗ ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನ ಮಾಡಲಾಗಿದೆ. ರವಿಕುಮಾರ್ ಎಂಬುವವರು ತಮ್ಮ ಬೈಕನ್ನು ಬಾರ್ ಮುಂದೆ ನಿಲ್ಲಿಸಿ ಒಳಗೆ ಹೋಗಿ ಹೊರಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು. ಮೇ 14ರಂದು ಘಟನೆ ಸಂಭವಿಸಿದೆ. ಎಲ್ಲೆಡೆ ಹುಡುಕಾಡಿ ಬೈಕ್ ಸಿಗದ ಹಿನ್ನೆಲೆ ವಿನೋಬನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸಿ
SHIMOGA : ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರು, ರಸ್ತೆ, ವಿದ್ಯುತ್ ಇತರೆ ಸೌಕರ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 187ನೇ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಕಾರಿಗಳಿಗೆ ವಿವಿಧ ಸೂಚನೆ ನೀಡಿದರು. ಕೈಗಾರಿಕಾ ಸಂಘಗಳ ಪ್ರಮುಖ, ಕೈಗಾರಿಕೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಹೊರ ರಾಜ್ಯದ ಕಾರ್ಮಿಕರಿಗೆ ಕೆಲಸ ಕೊಡದಂತೆ ಪ್ರತಿಭಟನೆ
SHIMOGA : ನಗರ ಮತ್ತು ಜಿಲ್ಲೆಯಲ್ಲಿ ಹೊಟೇಲ್, ಕಟ್ಟಡ ನಿರ್ಮಾಣ, ಕಾರ್ಖಾನೆಗಳಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ಕೆಲಸ ಕೊಡಲಾಗುತ್ತಿದೆ. ಇದರಿಂದ ಸ್ಥಳೀಯರು ಕೆಲಸವಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಪರ ರಾಜ್ಯದ ಕಾರ್ಮಿಕರನ್ನು ಹೊಂದುವ ಉದ್ಯಮಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರುದ್ರಾಭಿಷೇಕ, ದುರ್ಗಾ ಹೋಮ, ಸರಳ ವಿವಾಹ
SHIMOGA : ನಗರದ ಮಂಡ್ಲಿ ಮಠದಲ್ಲಿನ ದುರ್ಗಾಚೌಡೇಶ್ವರಿ ದೇವಸ್ಥಾನದಲ್ಲಿ ಜೂ.23 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರುದ್ರಾಭಿಷೇಕ, ದುರ್ಗಾಹೋಮ, ಸರಳ ವಿವಾಹ ಸೇರಿದಂತೆ ಹಲವು ಕಾರ್ಯಕ್ರಮಗಳಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಹೆಚ್ಚಿನ ಮಾಹಿತಿಗೆ ಅರ್ಚಕರಾದ ಶಿವಕುಮಾರ್ 8105170435 ಸಂಪರ್ಕಿಸಲು ಕೋರಲಾಗಿದೆ.
ವೈನ್ ಉದ್ಯಮದಲ್ಲಿ ಮಹಿಳೆಯರು
SHIMOGA : ವೈನ್ ಉದ್ಯಮದಲ್ಲಿ ಮಹಿಳೆಯರು ತೊಡಗಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದು ವೈನ್ ಉದ್ಯಮಿ ಸುಷ್ಮಾ ಸಂಜಯ್ ತಿಳಿಸಿದರು. ಶಿವಮೊಗ್ಗದ ಭಾವಸಾರ ವಿಜನ್ ಇಂಡಿಯಾ ಸಂಸ್ಥೆ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ವೈನ್ ಉದ್ಯಮ ಸುಲಭದ ಮಾತಲ್ಲ. ರಾಜ್ಯದ ಮೊದಲ ಮಹಿಳಾ ವೈನ್ ಉದ್ಯಮಿ ಎಂಬ ಹೆಮ್ಮೆ ಇದೆ ಎಂದರು. ವೈನ್ ಉದ್ಯಮ ಆರಂಭ, ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ವಂಡ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸಚಿನ್ ಬೇದ್ರೆ, ನಿರ್ದೇಶಕರಾದ ಸ್ವಪ್ನಾ ಹರೀಶ್, ಮಮತಾ ಕಮಲಾಕರ್, ಸ್ವಪ್ನಾ ಪ್ರಭಾಕರ್, ವಾಣಿ ತೇಲ್ಕರ್ ಮತ್ತಿತರರು ಇದ್ದರು.
ಇದನ್ನೂ ಓದಿ – ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟವನ ವಿರುದ್ಧ ಶಿವಮೊಗ್ಗದಲ್ಲಿ ಕೇಸ್, ಏನಿದು ಪ್ರಕರಣ? ಯಾರು ಈತ?
ಸಚಿವ ಮಧು ಬಂಗಾರಪ್ಪಗೆ ಶಿವಮೊಗ್ಗದಲ್ಲಿ ಅಭಿನಂದನೆ
SHIMOGA : ಸಚಿವರಾದ ಮೇಲೆ ಜೂನ್ 3ರಂದು ಮೊದಲ ಬಾರಿಗೆ ಮಧು ಬಂಗಾರಪ್ಪ ಅವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅದ್ಧೂರಿಯಾಗಿ ಸ್ವಾಗತಿಸಿ, ಅಭಿನಂದನೆ ಸಲ್ಲಿಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಈಡಿಗರ ಸಮುದಾಯ ಭವನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422