ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಅಕ್ಟೋಬರ್ 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಮಲೆನಾಡಿನ ರೈತರು ಶ್ರದ್ಧಾ, ಭಕ್ತಿಯಿಂದ ಭೂಮಿ ಹುಣ್ಣಿಮೆಯನ್ನು ಆಚರಿಸಿದರು. ಹೊಲದಲ್ಲಿ ಬೆಳೆದು ನಿಂತ ಫಸಲಿಗೆ ಪೂಜೆ ಸಲ್ಲಿಸಿ, ಉತ್ತಮ ಬೆಳೆಗಾಗಿ ಪ್ರಾರ್ಥಿಸಿದರು. ಮಲೆನಾಡು ಭಾಗದ ರೈತರು ಆಚರಿಸುವ ಶೀಗಿ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವಂತೆ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಶೇಷ ಖಾದ್ಯಗಳನ್ನು ತಯಾರಿಸಿ, ಭೂಮಣ್ಣಿ ಬುಟ್ಟಿಗಳಲ್ಲಿ ಕೊಂಡೊಯ್ದು ಎಡೆ ಇಡಲಾಗುತ್ತದೆ. ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಹಬ್ಬದ ಅಡುಗೆಯನ್ನು ಎಲ್ಲೆಡೆ ಬೀರಲಾಗುತ್ತದೆ.
ಮನೆಯವರೆಲ್ಲ ಹೊಲದಲ್ಲೇ ಕುಳಿತು ಊಟ ಮಾಡಿ ಮನೆಗೆ ಮರಳುತ್ತಾರೆ. ಅನ್ನದಾತರು ಶ್ರದ್ಧಾ ಭಕ್ತಿಯಿಂದ ಈ ಪೂಜೆ ಸಲ್ಲಿಸುತ್ತಾರೆ. ಭೂಮಿ ತಾಯಿಗೆ ವಿಶೇಷ ಗೌರವ ಸಲ್ಲಿಸುವ ಆಚರಣೆ ಇದಾಗಿದೆ. ಇದಕ್ಕಾಗಿ ಒಂದು ವಾರದ ಸಿದ್ಧತೆಯೂ ಇರಲಿದೆ.
ಭೂಮಣ್ಣಿ ಬುಟ್ಟಿ ತಯಾರಿ
ಭೂಮಿ ಹುಣ್ಣಿಮೆಯಲ್ಲಿ ಭೂಮಣ್ಣಿ ಬುಟ್ಟಿಗೆ ವಿಶೇಷ ಸ್ಥಾನ. ಬುಟ್ಟಿಗೆ ಸಗಣಿ, ಕೆಮ್ಮಣ್ಣು ಹಚ್ಚಲಾಗುತ್ತದೆ. ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರಗಳನ್ನು ಬಿಡಿಸಲಾಗುತ್ತದೆ. ಒಂದು ದೊಡ್ಡ ಬುಟ್ಟಿ ಮತ್ತೊಂದು ಚಿಕ್ಕ ಬುಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಎರಡು ಬುಟ್ಟಿಗಳಿಗೆ ಮಹಿಳೆಯರು ಅಲಂಕಾರ ಮಾಡುತ್ತಾರೆ. ದಸರಾ ಹಬ್ಬ ಮುಗಿಯುತ್ತಿದ್ದಂತೆ ಭೂಮಣ್ಣಿ ಬುಟ್ಟಿ ಸಿದ್ಧತಾ ಕಾರ್ಯ ಶುರುವಾಗಲಿದೆ.

ಇಡಿ ರಾತ್ರಿ ಅಡುಗೆ
ಭೂಮಿ ಹುಣ್ಣಿಮೆ ಪೂಜೆ ಹಿನ್ನೆಲೆ ಮಹಿಳೆಯರು ರಾತ್ರಿ ಪೂರ್ತಿ ಅಡುಗೆ ಮಾಡುತ್ತಾರೆ. ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ‘ಹಚ್ಚಂಬಲಿ.. ಹಾಲಂಬಲಿ.. ಗುಡ್ಡದ ಮೇಲಿನ ನೂರೊಂದು ಕುಡಿ ಭೂ ತಾಯಿ ಬಂದು ಉಂಡೋಗಲಿ’ ಎಂದು ಹಾಡುತ್ತ ಹಚ್ಚಂಬಲಿಯನ್ನು ಬೀರಲಾಯಿತು.
ಫಸಲಿಗೆ ತಾಳಿ ಕಟ್ಟುತ್ತಾರೆ
ಬೆಳೆದು ನಿಂತ ಫಸಲಿಗೆ ಒಂದು ಕಡೆಯಲ್ಲಿ ಪುಟ್ಟ ಮಂಟಪ ನಿರ್ಮಿಸಿ, ಹೂವು ಕಟ್ಟಿ, ಬಾಳೆಗೊನೆಯನ್ನು ನಿಲ್ಲಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಫಸಲಿಗೆ ತಾಳಿಯನ್ನು ಕಟ್ಟಕಲಾಗುತ್ತದೆ. ಕೆಲವು ಕಡೆ ಮಹಿಳೆಯರು ತಮ್ಮದೇ ತಾಳಿಯನ್ನು ತೆಗೆದು ಭೂಮಿ ತಾಯಿಗೆ ಕಟ್ಟುತ್ತಾರೆ. ಉಳಿದ ಕಡೆಯಲ್ಲಿ ದೇವರ ಮನೆಯಲ್ಲಿರಿಸಿದ ತಾಳಿಯನ್ನು ಫಸಲಿಗೆ ಕಟ್ಟಲಾಗುತ್ತದೆ.

ಕಾಗೆ, ಇಲಿಗಳಿಗೆ ಎಡೆ
ಭೂಮಿ ಹುಣ್ಣಿಮೆಯಂದು ರೈತರು ಕಾಗೆಗಳು, ಇಲಿಗಳಿಗೆ ಎಡೆ ಇಡುತ್ತಾರೆ. ನಿಧನರಾದ ಕುಟುಂಬದ ಹಿರಿಯರಿಗೆ ಎಡೆ ಅರ್ಪಿಸಲಾಗುತ್ತದೆ. ಅದಕ್ಕಾಗಿ ಕಾಗೆಗಳಿಗೆ ಒಂದೆಡೆ ಎಡೆ ಇಡಲಾಗುತ್ತದೆ. ಇನ್ನು, ಬೆಳೆ ಹಾನಿ ಮಾಡುವ ಇಲಿಗಳಿಗೂ ಎಡೆಯಲ್ಲಿ ಪಾಲು ಕೊಡಲಾಗುತ್ತದೆ. ತಮ್ಮ ಬೆಳೆಗಳನ್ನು ಹಾನಿ ಮಾಡಬೇಡ ಎಂದು ಪ್ರಾರ್ಥಿಸಿ ರೈತರು ಇಲಿಗಳಿಗೆ ಎಡೆ ಅರ್ಪಿಸುತ್ತಾರೆ.
ಹೊಲದಲ್ಲಿ ಕಡಬು ಹುಗಿಯುತ್ತಾರೆ
ಪೂಜೆಗೆ ತಂದ ಕಡಬನ್ನು ಗದ್ದೆಯ ಒಂದು ಭಾಗದಲ್ಲಿ ಹೂಳಲಾಗುತ್ತದೆ. ಭತ್ತದ ಕೊಯ್ಲಿನ ಸಂದರ್ಭ ಈ ಕಡಬನ್ನು ಹೊರಗೆ ತೆಗೆಯುತ್ತಾರೆ. ಆ ದಿನ ಅಡುಗೆ ವೇಳೆ ಆ ಕಡಬು ಹಾಕಲಾಗುತ್ತದೆ. ಕೊಯ್ಲಿಗೆ ಬಂದವರಿಗೆಲ್ಲ ಪ್ರಸಾದದ ರೀತಿಯಲ್ಲಿ ಕೊಡಲಾಗುತ್ತದೆ.

ಒಗ್ಗೂಡಿ ಊಟ ಮಾಡುತ್ತಾರೆ
ಭೂಮಿ ಹುಣ್ಣೆಮೆಯನ್ನು ರೈತ ಕುಟುಂಬಗಳು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತವೆ. ದೂರದೂರುಗಳಲ್ಲಿ ಇರುವ ಕುಟುಂಬದ ಸದಸ್ಯರು ಪೂಜೆಗಾಗಿ ಊರಿಗೆ ಮರಳುತ್ತಾರೆ. ಎಲ್ಲರೂ ಒಗ್ಗೂಡಿ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿ, ಒಟ್ಟಿ ಕುಳಿತು ಹೊಲದಲ್ಲಿ ಊಟ ಮಾಡುತ್ತ್ತಾರೆ. ಉತ್ತಮ ಬೆಳೆ ನೀಡುವಂತೆ ಎಲ್ಲರೂ ಭೂಮಿ ತಾಯಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಕೃಷಿ ಚಟುವಟಿಕೆ ಮತ್ತು ನಿಸರ್ಗಕ್ಕೆ ಪೂಜನೀಯ ಸ್ಥಾನ ನೀಡಿ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಆಧುನಿಕತೆಯ ಅಬ್ಬರದ ನಡುವೆಯು, ಭೂಮಿ ಪೂಜೆ ಸಂಪ್ರದಾಯ ಮುಂದುವರೆಯುತ್ತಿದೆ. ಹೆಚ್ಚು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






