ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 3 ಡಿಸೆಂಬರ್ 2018
ಬೆಂಗಳೂರಿನಲ್ಲಿ ವರದಿಯಾಗುತ್ತಿದ್ದ ಆತಂಕಕಾರಿ ಘಟನೆ ಈಗ ಶಿವಮೊಗ್ಗ ನಗರದಲ್ಲಿ ಸುದ್ದಿಯಾಗಿದೆ. ಕಟ್ಟಡ ನಿರ್ಮಾಣಕ್ಕೆ ತೆಗೆದ ಪಾಯದ ಗುಂಡಿಯಿಂದಾಗಿ, ಅಕ್ಕಪಕ್ಕದ ಮನೆಗಳು ಕುಸಿಯುವ ಆತಂಕಕಾರಿ ಬೆಳವಣಿಗೆ ಜಯನಗರದಲ್ಲಿ ವರದಿಯಾಗಿದೆ. ಇದರಿಂದ ಮನೆಯವರು ಭಯದಲ್ಲಿಯೇ ಸಮಯ ತಳ್ಳುವಂತಾಗಿದೆ.
ಜಯನಗರದ ಎರಡನೇ ತಿರುವಿನಲ್ಲಿ ಖಾಸಗಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪಾಯ ತೆಗೆಯಲಾಗಿದೆ. ಆದರೆ ಪಾಲಿಕೆ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿದ ಪರಿಣಾಮ ಸುತ್ತಮುತ್ತಲ ಮನೆ ಕಟ್ಟಡಗಳ ಕುಸಿಯುವ ಆತಂಕ ನಿರ್ಮಾಣವಾಗಿದೆ.
ಏನೆಲ್ಲ ಉಲ್ಲಂಘನೆ ಆಗಿದೆ?
ಆಸ್ಪತ್ರೆಯವರು ಸೆಲ್ಲರ್, ಗ್ರೌಂಡ್ ಸೇರಿ ಮೂರು ಮಹಡಿ ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮತಿ ಪಡೆದುಕೊಂಡಿದ್ದರು. ಆದರೆ ಸೆಲ್ಲರ್ ನಿರ್ಮಾಣಕ್ಕೆ ಸುಮಾರು 30 ಅಡಿಗೂ ಹೆಚ್ಚು ಆಳದ ಗುಂಡಿ ತೆಗೆದಿದ್ದಾರೆ. ಕಟ್ಟಡ ನಿರ್ಮಾಣ ಸಂದರ್ಭ ಅಕ್ಕಪಕ್ಕದ ಕಟ್ಟಡಗಳಿಂದ ಕನಿಷ್ಠ 5 ಅಡಿಯಷ್ಟು ಅಂತರದಲ್ಲಿ ಪಾಯ ತೆಗೆಯಬೇಕು ಎಂಬ ನಿಯಮವಿದೆ. ಆದರೆ ಆಸ್ಪತ್ರೆ ಕಟ್ಟಡಕ್ಕೆ ಈ ನಿಯಮ ಪಾಲಿಸದೆ ಪಾಯ ತೆಗೆಯಲಾಗಿದೆ.
ಏನೆಲ್ಲ ಸಮಸ್ಯೆಯಾಗಿದೆ?
ಅಂತರ ಕಾಯ್ದುಕೊಳ್ಳದೆ ಪಾಯ ತೆಗೆದಿದ್ದರಿಂದ, ಅಕ್ಕಪಕ್ಕದ ಕಟ್ಟಡಗಳ ತಡೆಗೋಡೆ ಕುಸಿದಿದೆ. ಹಾಗಾಗಿ ಮನೆಗಳು ಕುಸಿಯುವ ಹಂತಕ್ಕೆ ತಲುಪಿವೆ. ಹಾಗಾಗಿ ಮನೆಯವರು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಈ ಪೈಕಿ ಒಂದು ಕಟ್ಟಡದಲ್ಲಿ ಲೇಡಿಸ್ ಪಿಜಿ ಇತ್ತು. ಅಲ್ಲಿದ್ದ ಮಹಿಳೆಯರು ಜೀವ ಭಯದಲ್ಲಿ ಪಿಜಿಯನ್ನೇ ಖಾಲಿ ಮಾಡಿದ್ದಾರೆ.
‘ಆಸ್ಪತ್ರೆ ಬೇಡವೇ ಬೇಡ’
ವಿಚಾರ ತಿಳಿಯುತ್ತಿದ್ದಂತೆ ಜಯನಗರದ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿದರು. ಇಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು. ಕಟ್ಟಡಗಳು ಕುಸಿಯುವ ಆತಂಕ ಒಂದು ಕಡೆ, ಆಸ್ಪತ್ರೆ ನಿರ್ಮಾಣವಾದರೆ ಈ ಭಾಗದ ಜನರು ನೆಮ್ಮದಿ ಕಳೆದುಕೊಳ್ಳಲಿದ್ದಾರೆ ಎಂದರು. ಇನ್ನು, ವಿಚಾರ ತಿಳಿಯುತ್ತಿದ್ದಂತೆ, ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಕಟ್ಟಡ ಕಾಮಗಾರಿ ನಿಲ್ಲಿಸಬೇಕು, ಕುಸಿಯುವ ಹಂತದಲ್ಲಿರುವ ಕಟ್ಟಡಗಳ ಕಡೆಗೆ ಮಣ್ಣು ಬಿಗಿಗೊಳಿಸುವಂತೆ ಸೂಚಿಸಿದ್ದಾರೆ. ಘಟನೆ ಸಂಬಂಧ, ಬಿಲ್ಡರ್ ಮತ್ತು ಜಾಗದ ಮಾಲೀಕರ ವಿರುದ್ಧ ಪಾಲಿಕೆ ಎಂಜಿನಿಯರ್’ಗಳು ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
https://www.youtube.com/watch?v=GxadDVr1ODc&t=5s
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422