ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 9 ಏಪ್ರಿಲ್ 2020
ಜಗತ್ತಿನಾದ್ಯಂತ ಕರೋನ ಆತಂಕವಿದ್ದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ ಎದುರಾಗಿದೆ. ತೀರ್ಥಹಳ್ಳಿ, ಸಾಗರ ತಾಲೂಕಿನ ವಿವಿಧೆಡೆ ಮಂಗನ ಕಾಯಿಲೆ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಕಡೆಗೆ ಜನರು ಕಾಡಿಗೆ ಹೋಗುವುದನ್ನೆ ನಿರ್ಬಂಧಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತೀರ್ಥಹಳ್ಳಿಯಲ್ಲಿ 111 ಸೋಂಕಿತರು
ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಲ್ಲಿ ಕೆಎಫ್’ಡಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಇನ್ನು ಸಾಗರದಲ್ಲಿ 27 ಮತ್ತು ಹೊಸನಗರ ತಾಲೂಕಿನಲ್ಲಿ ಒಬ್ಬರು ಸೋಂಕು ತಗುಲಿದೆ.
ಕೆಎಫ್’ಡಿಗೆ ಐವರು ಸಾವು
ಮಂಗನ ಕಾಯಿಲೆಗೆ ಈ ವರ್ಷ ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಲ್ಲಿ ಐವರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕನ್ನಂಗಿ, ಬೆಟ್ಟಬಸವಾನಿ, ಕೋಣಂದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಸಾಗರದ ತುಮರಿ ಮತ್ತು ಅರಳಗೋಡು ಪಿಹೆಚ್’ಸಿ ವ್ಯಾಪ್ತಿಯಲ್ಲಿ ತಲಾ ಒಬ್ಬರು ಕೆಎಫ್’ಡಿಗೆ ಅಸುನೀಗಿದ್ದಾರೆ.
ದಯವಿಟ್ಟು ಕಾಡಿಗೆ ಹೋಗಬೇಡಿ
ಕೆಎಫ್’ಡಿ ಹರಡುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ 31 ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದೆ. ಇಲ್ಲೆಲ್ಲ ಜನರು ಕಾಡಿಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. ಇನ್ನು, ಮಂಗನ ಕಾಯಿಲೆ ಭೀಕರವಾಗಿ ಹರಡುತ್ತಿರುವ ಈ ಸಮಯದಲ್ಲಿ ಜನರು ದರಗು, ಕಟ್ಟಿಗೆ ತರಲು ಕಾಡಿಗೆ ಹೋಗುವ ದುಸ್ಸಾಹಸ ಮಾಡಬೇಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಅವರು ಮನವಿ ಮಾಡಿದ್ದಾರೆ.
ಕರೋನ ಎಮರ್ಜನ್ಸಿಯಲ್ಲಿ ಕೆಎಫ್’ಡಿ ನಿರ್ಲಕ್ಷ್ಯ
ಮತ್ತೊಂದೆಡೆ ಕರೋನದ ಚಿಕಿತ್ಸೆಗೆ ಅಧಿಕಾರಿಗಳು, ಆಡಳಿತ ಹೆಚ್ಚು ಮುತುವರ್ಜಿ ತೋರಿಸುತ್ತಿದ್ದು, ಕೆಎಫ್’ಡಿಯತ್ತೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪಗಳು ಹುಟ್ಟಿಕೊಂಡಿವೆ. ‘ತೀರ್ಥಹಳ್ಳಿ ತಾಲೂಕಿನಲ್ಲಿ ನೂರಾರು ಮಂದಿಗೆ ಕೆಎಫ್’ಡಿ ಸೋಂಕು ತಗುಲಿದೆ. ಈಗಾಗಲೇ ಮೂವರು ಮೃತಪಟ್ಟಿದ್ದಾರೆ. ಕರೋನ ನಿಗ್ರಹದ ನೆಪದಲ್ಲಿ ಕೆಎಫ್’ಡಿ ಪೀಡಿತರ ಕುರಿತು ನಿರ್ಲಕ್ಷ್ಯ ವಹಿಸಲಾಗುತ್ತಿದೆ’ ಎಂದು ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಸದಸ್ಯ ಸಾಲೇಕೊಪ್ಪ ರಾಮಚಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಗಳ ಕಳೇಬರ ಪತ್ತೆ, ಆತಂಕ
ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಿಗೆ ಗ್ರಾಮದ ಮೈತಳ್ಳಿಯಲ್ಲಿ ಎರಡು ಮಂಗಗಳ ಕಳೇಬರ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಂಗಗಳ ಕಳೇಬರದ ಅಂತ್ಯಕ್ರಿಯೆ ನೆರವೇರಿಸಿದರು. ಶಿವಮೊಗ್ಗ ಜಿಲ್ಲೆಯಾದ್ಯಂತ ಮಾರ್ಚ್ 10ರವರೆಗೆ 115 ಮಂಗಗಳು ಸಾವು ವರದಿಯಾಗಿದೆ. ಈ ಪೈಕಿ 48 ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಎರಡು ಮಂಗಗಳಲ್ಲಿ ಕೆಎಫ್’ಡಿ ಪಾಸಿಟಿವ್ ಕಂಡು ಬಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]