ಶಿವಮೊಗ್ಗ ಲೈವ್.ಕಾಂ |SHIMOGA NEWS | 1 DECEMBER 2020
ಶಿವಮೊಗ್ಗದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲೆಯ 271 ಗ್ರಾಮ ಪಂಚಾಯಿತಿಗಳ ಪೈಕಿ 244 ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಅಧಿಸೂಚನೆ ಪ್ರಕಟ
ಮೊದಲ ಹಂತದ ಚುನಾವಣೆಗೆ ಡಿಸೆಂಬರ್ 7ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ. ಎರಡನೇ ಹಂತದ ಚುನಾವಣೆಗೆ ಡಿಸೆಂಬರ್ 11ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಯಾವ್ಯಾವ ತಾಲೂಕಲ್ಲಿ ಯಾವಾಗ ಎಲೆಕ್ಷನ್?
- ಮೊದಲ ಹಂತ | ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ತಾಲೂಕು
- ಎರಡನೇ ಹಂತ | ಸಾಗರ, ಶಿಕಾರಿಪುರ, ಸೊರಬ, ಹೊಸನಗರ
ಸ್ಥಾನಗಳೆಷ್ಟು? ಮತಗಟ್ಟೆಗಳೆಷ್ಟು?
ಶಿವಮೊಗ್ಗ ಜಿಲ್ಲೆಯ 244 ಗ್ರಾಮ ಪಂಚಾಯಿತಿಯ 2609 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 1415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
271ರ ಪೈಕಿ 244 ಗ್ರಾ.ಪಂಗಷ್ಟೇ ಚುನಾವಣೆ
ಜಿಲ್ಲೆಯಲ್ಲಿ 271 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ 244 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಐದು ವರ್ಷ ಪೂರ್ಣಗೊಳ್ಳದ ಏಳು ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳಾಗಿ ಪೂರ್ಣ ಮತ್ತು ಭಾಗಶಃ ಪರಿವರ್ತನೆ ಆಗಿರುವ 20 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಇರುವುದಿಲ್ಲ.
ಯಾವೆಲ್ಲ ಗ್ರಾ.ಪಂನಲ್ಲಿ ಎಲೆಕ್ಷನ್ ಇಲ್ಲ?
- ಐದು ವರ್ಷ ಪೂರ್ಣಗೊಳ್ಳದ ಶಿವಮೊಗ್ಗ ತಾಲೂಕಿನ ಕುಂಸಿ, ಪುರದಾಳು, ಭದ್ರಾವತಿಯ ಕೋಮಾರನಹಳ್ಳಿ, ವೀರಾಪುರ, ಶಿಕಾರಿಪುರದ ಹಾರೋಗೊಪ್ಪ, ತರಲಘಟ್ಟ, ಚುರ್ಚಿಗುಂಡಿಯಲ್ಲಿ ಚುನಾವಣೆ ನಡೆಯುವುದಿಲ್ಲ.
- ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆ ಆಗಿರುವ ಭದ್ರಾವತಿ ತಾಲೂಕು ಹೊಳೆಹೊನ್ನೂರು, ಸಿದ್ಲೀಪುರ, ಹನುಮಂತಾಪುರ, ಎಮ್ಮೇಹಟ್ಟಿ ಗ್ರಾಮ ಪಂಚಾಯಿತಿಗಳು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಿದೆ.
- ಶಿಕಾರಿಪುರ ತಾಲೂಕಿನ ತಡಗಣಿ, ಉಡುಗಣಿ ಗ್ರಾಮ ಪಂಚಾಯಿತಿಗಳು ಶಿರಾಳಕೊಪ್ಪ ಪುರಸಭೆಯಾಗಿ ಪರಿವರ್ತನೆಯಾಗಿದೆ.
- ಸೊರಬ ತಾಲೂಕಿನ ಹಳೇ ಸೊರಬ, ಕೊಡಕಣಿ, ತವನಂದಿ, ಹೆಚ್ಚೆ, ಮುಟುಗುಪ್ಪೆ ಗ್ರಾಮ ಪಂಚಾಯಿತಿಗಳು ಸೊರಬ ಪುರಸಭೆಯಾಗಿ ಪರಿವರ್ತನೆಯಾಗಿದೆ.
- ಸೊರಬ ತಾಲೂಕಿನ ಆನವಟ್ಟಿ, ಕುಬಟೂರು, ಸಮನವಳ್ಳಿ, ತಲ್ಲೂರು, ಕಾತುವಳ್ಳಿ, ಅಗಸನಹಳ್ಳಿ, ಎಣ್ಣೆಕೊಪ್ಪ, ತತ್ತೂರು, ಗೆಂಡ್ಲ ಗ್ರಾಮ ಪಂಚಾಯಿತಿಗಳು ಆನವಟ್ಟಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಿದೆ. ಹಾಗಾಗಿ ಇಲ್ಲಿ ಚುನಾವಣೆ ನಡೆಯುವುದಿಲ್ಲ.
ಎಷ್ಟು ಮತದಾರರಿದ್ದಾರೆ?
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈ ಬಾರಿ 8,12,126 ಮತದಾರರು ಹಕ್ಕು ಚಲಾಯಿಸಲಿದ್ದಾರೆ. 4,06,446 ಪುರುಷ ಮತದಾರರು, 4,05,680 ಮಹಿಳಾ ಮತದಾರರು ಇದ್ದಾರೆ.
ಚುನಾವಣಾ ಕರ್ತವ್ಯಕ್ಕಾಗಿ 244 ಚುನಾವಣಾಧಿಕಾರಿಗಳು, 244 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 1557 ಅಧ್ಯಕ್ಷಾಧಿಕಾರಿ, 4671 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಈಗಾಗಲೆ ಒಂದು ಹಂತದ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅನುರಾಧ ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]