ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 ಮಾರ್ಚ್ 2022
ಶಿವಮೊಗ್ಗ ನಗರ ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಅತ್ಯಂತ ಪ್ರಸಿದ್ಧಿ ಪಡೆದ ಸ್ಥಳವಾಗಿದೆ. ಇಲ್ಲಿನ ಪುರಾತನ ದೇವಾಲಯಗಳಲ್ಲಿ ಕೋಟೆ ಶ್ರೀ ಆಂಜನೇಯ ದೇವಾಲಯ, ಕೋಟೆ ಶ್ರೀ ಭೀಮೇಶ್ವರ ದೇವಾಲಯ ಮತ್ತು ಶಕ್ತಿದೇವತೆ ಶ್ರೀ ಕೋಟೆ ಮಾರಿಕಾಂಬೆ ದೇವಾಲಯ ಪ್ರಮುಖವಾದುದು. ಅದರಲ್ಲಿಯೂ ನಗರದ ಆದಿದೇವತೆ ಶ್ರೀ ಮಾರಿಕಾಂಬೆ ಶಿವಮೊಗ್ಗದ ಸರ್ವ ಧರ್ಮಿಯರ ಆರಾಧನೆಗೆ ಪಾತ್ರಳಾಗಿರುವುದು ವಿಶೇಷ.
ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನ ಮತ್ತು ಜಾತ್ರೆ ಕುರಿತು ಪ್ರಮುಖ 15 ವಿಚಾರಗಳು ಇಲ್ಲಿವೆ
ಜಾತ್ರೆ ನಡೆಸುವ ರೀತಿ ರಿವಾಜುಗಳು ಇಡೀ ನಾಡಿಗೆ ಮಾರ್ಗದರ್ಶಿಯಾಗಿದೆ. ಈ ಜಾತ್ರೆಗೆ ಸುಮಾರು 600 ವರ್ಷಗಳ ಇತಿಹಾಸವಿದೆ. ಅಲ್ಲದೆ, ಅಂದಿನಿಂದಲೂ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈಗಿನ ಗಾಂಧಿಬಜಾರ್ ಹಿಂದೆ ದೊಡ್ಡಪೇಟೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅದು ಮಾರಿಕಾಂಬೆಯ ತವರುಮನೆಯೆಂದೇ ಖ್ಯಾತಿ ಪಡೆದಿದೆ.
ವಿಶ್ವಕರ್ಮ ಸಮುದಾಯದವರು ದೇವಿಯ ವಿಗ್ರಹವನ್ನು ಮರದಲ್ಲಿ ನಿರ್ಮಿಸಿ, ಅದನ್ನು ಶಾಸ್ತ್ರೋಕ್ತವಾಗಿ ಪೂಜಿಸಿದ ನಂತರವೇ ಸಾರ್ವಜನಿಕರ ಪೂಜೆಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು ಎಂಬ ವಾಡಿಕೆಯಿದ್ದರೂ, ವಾಸ್ತವವಾಗಿ ಅಲ್ಲಿನ ಪ್ರಥಮ ಪೂಜಾ ವಿಧಿಯನ್ನು ನಡೆಸುತ್ತಿದ್ದವರು ಬ್ರಾಹ್ಮಣರಾಗಿದ್ದರು.
ನಾಡಿಗರ ಮನೆತನದವರು ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಮಾಡಿ, ಮಂಗಳ ದ್ರವ್ಯ ತಂದು, ಉಡಿತುಂಬಿ ಪ್ರಥಮ ಪೂಜೆಯನ್ನು ಮಾಡುತ್ತಿದ್ದರು. ಅದು ಇಂದಿಗೂ ನಡೆಯುತ್ತಿರುವ ಪದ್ಧತಿಯಾಗಿದೆ. ನಂತರ ಮಾರಿಕಾಂಬೆಯ ವಿಗ್ರಹವನ್ನು ನಿರ್ಮಿಸಿದ ವಿಶ್ವಕರ್ಮ ಜನಾಂಗದವರು ದೇವಿಯನ್ನು ಪೂಜಿಸುವ ಪದ್ಧತಿ ಬೆಳೆದು ಬಂದಿದೆ. ಸಾಮಾನ್ಯವಾಗಿ ಮಂಗಳವಾರದಂದು ಪ್ರಾರಂಭವಾಗುವ ಜಾತ್ರೆ ಮತ್ತು ಪೂಜಾವಿಗಳು ಕೆಲವು ವೈಶಿಷ್ಟ್ಯದಿಂದ ಕೂಡಿವೆ.
ಪ್ರಾರಂಭದಲ್ಲಿ ಇಲ್ಲಿ ಪ್ರಾಣಿಬಲಿ ಕೊಡುವ ಪದ್ಧತಿಯಿತ್ತು. ಆದರೆ, ದೇವಾಲಯದ ಉದ್ಘಾಟನೆಗೆ ಆಗಮಿಸಿದ್ದ ಶೃಂಗೇರಿ ಶ್ರೀಗಳು ಬಲಿಕೊಡುವುದನ್ನು ನಿಷೇಸಿದರೆ ಮಾತ್ರ ಬರುವುದಾಗಿ ತಿಳಿಸಿದ್ದರು. ದೇವಸ್ಥಾನ ಆಡಳಿತ ಮಂಡಳಿ ಇದಕ್ಕೆ ಒಪ್ಪಿ ಅಂದಿನಿಂದ ಒಲಿಕೊಡುವುದನ್ನು ನಿಷೇಸಿತು. ಹೀಗಾಗಿ ಕೆಲವು ಸಮಾಜದವರು ತಮ್ಮ ತಮ್ಮ ಮನೆಗಳಲ್ಲಿಯೇ ದೇವಿಯ ಹೆಸರಿನಲ್ಲಿ ಬಲಿಕೊಡುವ ಪದ್ಧತಿ ಬೆಳೆದು ಬಂದಿದೆ.
ಮೊದಲೆಲ್ಲಾ ಶಿವಣೆ, ರಕ್ತಚಂದನ ಅಥವಾ ಬೇವು ವೃಕ್ಷಗಳನ್ನು ದೇವಿಯ ಮೂರ್ತಿಯ ಕೆತ್ತನೆಗೆ ಬಳಸುತ್ತಿದ್ದರು. ಕಾಲಕ್ರಮೇಣ ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಬೃಹತ್ ದೇವಿಯ ಬದಲಾಗಿ ವಿಸರ್ಜನೆಗೆಂದೇ ದೇವಿಯ ಪುಟ್ಟ ವಿಗ್ರಹವನ್ನು ತಯಾರು ಮಾಡಲಾಗುತ್ತಿದೆ.
ಈ ಮೊದಲು ಮಾರಿ ಗದ್ದಿಗೆ ಎಂಬ ಸ್ಥಳದಲ್ಲಿ ಯಾವ ದೇವಾಲಯವೂ ಇರಲಿಲ್ಲ. 1974ರಲ್ಲಿ ಮಾರಿಕಾಂಬಾ ಸೇವಾ ಸಮಿತಿ ರಚನೆಯಾದ ಮೇಲೆ ಇಲ್ಲಿ ಭವ್ಯವಾದ ದೇವಾಲಯ ನಿರ್ಮಿಸಲಾಗಿದೆ. ಇದು ನಗರದ ಪ್ರಮುಖ ಆಕರ್ಷಣೆಯಾಗಿದೆ. ಅಮ್ಮನವರ ಮುಖ ದೈವಿಕ ಕಳೆಯಿಂದ ಕಂಗೊಳಿಸುವುದನ್ನು ದರ್ಶಿಸಿದ ಬಳಿಕ ಎಲ್ಲಾ ಭಕ್ತಾದಿಗಳೂ ಕೃತಾರ್ಥರಾಗುತ್ತಾರೆ.
ಜಾತ್ರೆಯು ಕೊನೆಯ ದಿನ ಅಂದರೆ ಐದನೆಯ ದಿನ ಮಹಾಮಂಗಳಾರತಿ, ಅದ್ಧೂರಿ ಮೆರವಣಿಗೆಯ ನಂತರ ಊರ ಹೊರಗಿನ ಗಡಿಭಾಗಕ್ಕೆ ಕರೆದೊಯ್ದು ಶ್ರೀದೇವಿಯನ್ನು ವಿಸರ್ಜಿಸಲಾಗುವುದು. ಇದು ಅನೂಚಾನವಾಗಿ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.
ಜಾತ್ರೆಯ ಅಂಗವಾಗಿ ಕುಸ್ತಿ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಈ ಮೂಲಕ ಕ್ರೀಡೆಗೂ ಒತ್ತು ನೀಡುವ ಪದ್ಧತಿ ಶ್ಲಾಘನೀಯವಾದುದು. ಈ ಭಾರಿ ಸಮಯದ ಅಭಾವದಿಂದಾಗಿ ಕುಸ್ತಿ ಪಂದ್ಯಾವಳಿ ರದ್ದು ಮಾಡಲಾಗಿದೆ ಎಂದು ದೇವಸ್ಥಾನದ ಸಮಿತಿ ಪ್ರಮುಖರು ತಿಳಿಸಿದ್ದಾರೆ.
ದೇವಾಲಯದಲ್ಲಿ ಮೂಲಗದ್ದುಗೆ ಹಿಂಭಾಗ ಕೃಷ್ಣ ಶಿಲೆಯಿಂದ ನಿರ್ಮಾಣವಾದ ಅಮ್ಮನವರ ಮೂರ್ತಿ ಕಣ್ಮನ ಸೆಳೆಯುವಂತಿದೆ. ದೇವಾಲಯದ ಒಳಭಾಗದಲ್ಲಿ ನವದುರ್ಗೆಯರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಶ್ರೀಲಕ್ಷ್ಮಿ, ಚಂಡಿಕಾ ದುರ್ಗಾ ಮಾತೆ, ಆರ್ಯ ದುರ್ಗಾ ಮಾತೆ, ವಾಗೇಶ್ವರಿ ಮಾತೆ, ಆದಿಶಕ್ತಿ ಮಾತೆ, ಕುಮಾರಿ ದುರ್ಗಾದೇವಿ, ಭಗವತಿ ಮಾತೆ, ಶ್ರೀ ದುರ್ಗಾ ಮಾತೆ ಮತ್ತು ಶಾರದಾ ಮಾತೆಯರ ವಿಗ್ರಹ ನೋಡಲು ಅತಿ ಸುಂದರವಾಗಿವೆ. ದೇವಾಲಯದ ಮುಂಭಾಗದಲ್ಲಿ ಕರಿಬಾನಿ ಹಾಗೂ ಮಾತಂಗಮ್ಮನವರ ಗುಡಿಗಳನ್ನು ನಿರ್ಮಿಸಲಾಗಿದೆ.
ದೇವಾಲಯದ ಗೋಪುರ ಸಹ ಅತ್ಯಂತ ಆಕರ್ಷಕವಾಗಿದ್ದು, ಅಲ್ಲಿರುವ ಚಾಮುಂಡೇಶ್ವರಿಯ ಸಿಂಹಾರೂಢ ವಿಗ್ರಹ ಅತ್ಯಂತ ಕಣ್ಮನ ಸೆಳೆಯುತ್ತದೆ. ಶಿವಮೊಗ್ಗೆಯ ಆಕರ್ಷಕ ತಾಣಗಳಲ್ಲಿ ಮಾರಿಕಾಬ ದೇವಾಲಯವೂ ಸೇರಿದೆ.
ಈ ದೇವಾಲಯದಲ್ಲಿ ಜಾತ್ರೆ ನಡೆಸುವುದರ ಜೊತೆಗೆ ಶ್ರಾವಣ ಮಾಸದಲ್ಲಿ ಮತ್ತು ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದೆ. ಅಲ್ಲದೆ ದೀಪೋತ್ಸವ, ಕುಂಬಾಭಿಷೇಕ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ನಡೆಸಿ, ಎಲ್ಲ ಭಕ್ತಾಧಿಗಳೂ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗಿದೆ.
ಕೋಟೆ ಶ್ರೀ ಮಾರಿಕಾಂಬೆಗೆ ಅರಸರು ಕೂಡ ನಡೆದುಕೊಳ್ಳುತ್ತಿದ್ದರು. ಶಿಸ್ತಿನ ಶಿವಪ್ಪನಾಯಕ ಅವರು ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿಯೇ ಯುದ್ಧಕ್ಕೆ ಹೊರಡುತ್ತಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ.
ಸಾಮಾನ್ಯವಾಗಿ ಫೆಬ್ರವರಿ ಕೊನೆ ವಾರ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಎರಡು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಮೊದಲು ಒಂದು ದಿನ ಮಾತ್ರ ನಡೆಯುತ್ತಿದ್ದ ಜಾತ್ರೆ ಜನಸಂಖ್ಯೆ ಬೆಳೆದಂತೆ 2, 3 ದಿನಕ್ಕೆ ವಿಸ್ತರಣೆಗೊಂಡು ಪ್ರಸ್ತುತ 5 ದಿನ ಜಾತ್ರೆ ನಡೆಯುತ್ತದೆ. ಬುಧವಾರ ಮಾಂಸಹಾರ ಪ್ರಿಯರು ಕೋಳಿ, ಕುರಿ ನೈವೇದ್ಯ ಸಲ್ಲಿಸುತ್ತಾರೆ. ಸಸ್ಯಹಾರಿಗಳು ಹೋಳಿಗೆ, ಕಡುಬು ಅರ್ಪಿಸುತ್ತಾರೆ.
ದೇವಸ್ಥಾನ ಎದುರಿನ ಅರಳಿಮರದ ಮುಂದಿರುವ ದುಂಡು ಕಲ್ಲುಗಳು ಭಕ್ತರ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತಿವೆ. ತಮ್ಮ ಬೇಡಿಕೆ ಕೇಳಿ ಕಲ್ಲುಗಳನ್ನು ಎತ್ತುವ ಪದ್ಧತಿ ಇದೆ. ಮಂಗಳವಾರ, ಶುಕ್ರವಾರ ಇಲ್ಲಿ ಜನರ ದಂಡೆ ನೆರೆದಿರುತ್ತದೆ. ದೇವಿಗೆ ಪೂಜೆ ಸಲ್ಲಿಸಿ ನಂತರ ಕಲ್ಲು ಎತ್ತಿ ತಮ್ಮ ಬೇಡಿಕೆ ಸಲ್ಲಿಸುತ್ತಾರೆ.
ಇಡೀ ನಗರವನ್ನು ರಕ್ಷಣೆಮಾಡುವ ಜವಾಬ್ದಾರಿ ಶ್ರೀದೇವಿಗೆ ಸೇರಿರುವುದರಿಂದ ಜಾತ್ರಾ ಸಮಯದಲ್ಲಿ ಎಲ್ಲಾ ಜನಾಂಗ, ಮುಸ್ಲೀಂ, ಕ್ರಿಶ್ಚಿಯನ್ ಮತ್ತು ಜೈನ ಧರ್ಮದವರು ಇಲ್ಲಿ ದೇವಿಗೆ ಪೂಜೆ ಸಲ್ಲಿಸುತ್ತಾರೆ.
ಇದನ್ನೂ ಓದಿ | ಕೋಟೆ ಮಾರಿಕಾಂಬಾ ದೇವಿ ಜಾತ್ರೆ ಸಿದ್ಧತೆ, ಹೇಗಿದೆ ಈ ಭಾರಿ ಉತ್ಸವ? ಇಲ್ಲಿದೆ ಟಾಪ್ 10 ಪಾಯಿಂಟ್
ಇದನ್ನೂ ಓದಿ | ಕೋಟೆ ಮಾರಿಕಾಂಬ ಜಾತ್ರೆ ಮಳಿಗೆ ಹಂಚಿಕೆ ವಿವಾದ, ಟೆಂಡರ್ ಪಡೆದಿದ್ದವನಿಗೆ ಜೀವ ಬೆದರಿಕೆಯ ಆರೋಪ
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422