ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಡಿಸೆಂಬರ್ 2021
ವಿಶ್ವ ಏಡ್ಸ್ ದಿನದ ಅಂಗವಾಗಿ ಶಿವಮೊಗ್ಗದಲ್ಲಿ ಇವತ್ತು ಸೈಕಲ್ ಜಾಥಾ ಮತ್ತು ಕಾಲ್ನಡಿಗೆ ಜಾಥಾ ಆಯೋಜಿಸಲಾಗಿತ್ತು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಿಂದ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಕೋರ್ಟ್ ಆವರಣದಿಂದ ಕಾಲ್ನಡಿಗೆ ಜಾಥಾ ನಡೆಸಿ, ಏಡ್ಸ್ ಕುರಿತು ಜಾಗೃತಿ ಮೂಡಿಸಲಾಯಿತು. ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಬಳಿಕ ಐಎಂಎ ಸಭಾಂಗಣದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯತು.
ವಿಡೆಲ್ ಉಪ ನಿರ್ದೇಶಕ ಡಾ.ರಘುನಂದನ್ ಮಾತನಾಡಿ, ಪ್ರಸ್ತುತ ಏಡ್ಸ್ ಕಾಯಿಲೆ ಮಾರಣಾಂತಿಕವಲ್ಲ. ಸೂಕ್ತ ಮತ್ತು ನಿಯಮಿತ ಚಿಕಿತ್ಸೆಯಿಂದ ಇದನ್ನು ನಿಯಂತ್ರಿಸಬಹುದು. ಹೆಚ್‍ಐವಿ ಪೀಡಿತರನ್ನು ಎಲ್ಲರಂತೆ ಕಾಣಬೇಕು. ಏಡ್ಸ್ ಬಗ್ಗೆ ಇರುವ ಮೌಢ್ಯವನ್ನು ಮಟ್ಟ ಹಾಕಬೇಕಿದೆ. ಇದೂ ಕೂಡ ಸಕ್ಕರೆ ಕಾಯಿಲೆ ಮತ್ತು ಇತರೆ ಖಾಯಿಲೆ ರೀತಿ ಖಾಯಿಲೆಯಾಗಿದೆ. ಚಿಕಿತ್ಸೆಯಿಂದ ಸೂಕ್ತವಾಗಿ ನಿಯಂತ್ರಿಸಬಹುದು ಹಾಗೂ ಈ ಸೋಂಕಿನ ಕುರಿತಾದ ಅರಿವಿನಿಂದ ಇದನ್ನು ದೂರ ಇಡಬಹುದು ಎಂದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಶಿವಯೋಗಿ ಮಾತನಾಡಿ, ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸದ ಸೂಜಿ ಮತ್ತು ಸಿರಂಜ್ ಬಳಕೆ, ತಪಾಸಣೆಗೊಳಪಡಿಸದ ರಕ್ತ ಮತ್ತು ಅದರ ಪದಾರ್ಥಗಳು ಹಾಗೂ ಗರ್ಭದಿಂದ ತಾಯಿಯಿಂದ ಮಗುವಿಗೆ ಈ ನಾಲ್ಕು ಮಾರ್ಗಗಳಿಂದ ಹೆಚ್‍ಐವಿ ಸೋಂಕು ಬರುತ್ತದೆ. ಆದರೆ ಇತ್ತೀಚಿನ ಸುಧಾರಣೆಗಳಿಂದಾಗಿ ರಕ್ತ, ಸೂಜಿ ಮತ್ತು ತಾಯಿಯಿಂದ ಮಗುವಿಗೆ ಬರುವುದನ್ನು ನಿಯಂತ್ರಿಸಲಾಗಿದೆ. ಆದರೆ ಜನರು ತಮ್ಮ ಅರಿವನ್ನು ಹೆಚ್ಚಿಸಿಕೊಂಡು ಅಸುರಕ್ಷಿತ ಲೈಂಗಿಕತೆಯಿಂದ ಸೋಂಕು ತಗುಲುವುದನ್ನು ನಿಯಂತ್ರಿಸಬೇಕು ಎಂದರು.
ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ದಿನೇಶ್.ಜಿ.ಸಿ ಮಾತನಾಡಿ, ಪ್ರಪಂಚದಲ್ಲಿ ಹೆಚ್‍ಐವಿ ಸೋಂಕಿತರ ಸಂಖ್ಯೆಯಲ್ಲಿ ಭಾರತವು 3ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಅಂಕಿ ಅಂಶದ ಪ್ರಕಾರ ಭಾರತದಲ್ಲಿ 2.1 ಮಿಲಿಯನ್ ಜನರು ಹೆಚ್‍ಐವಿ ಸೋಂಕಿನೊಂದಿಗೆ ಬದುಕುತ್ತಿದ್ದಾರೆ. ಶೇ.95 ರಷ್ಟು ಹೆಚ್‍ಐವಿ ಸೋಂಕಿರುವವರಿಗೆ ತಮ್ಮ ಸ್ಥಿತಿ ತಿಳಿಸುವುದು, ಸೋಂಕಿತರಿಗೆ ಚಿಕಿತ್ಸೆ ನೀಡುವುದು ಮತ್ತು ಚಿಕಿತ್ಸೆ ಪಡೆಯುತ್ತಿರುವವರಲ್ಲಿ ವೈರಸ್ ಸಂಖ್ಯೆಯನ್ನು ಕಡಿಮೆಗೊಳಿಸುವುದು ವಿಶ್ವ ಏಡ್ಸ್ ದಿನಾಚರಣೆ ಉದ್ದೇಶವಾಗಿದೆ ಎಂದರು.
ಕುವೆಂಪು ವಿವಿ ಎನ್‍ಎಸ್‍ಎಸ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಪರಿಸರ ನಾಗರಾಜ್, ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಮಂಜನಾಥ್ ನಾಗಲೀಕರ್, ಶಿವಮೊಗ್ಗ ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಎಫ್‍ಪಿಎಐ ಅಧ್ಯಕ್ಷೆ ಪುಷ್ಪಾ ಶೆಟ್ಟಿ, ಸ್ಪಂದನಾ ಫೌಂಡೇಷನ್’ನ ಮಂಜುನಾಥ್ ಅಪ್ಪಾಜಿ, ಜ್ಯೋತಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422