ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 30 AUGUST 2023
SHIMOGA : ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ (Terminal) ವಿಮಾನಯಾನ ಸೇವೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆ.31ರ ಬೆಳಗ್ಗೆ ಮೊದಲ ವಿಮಾನ ಸೋಗಾನೆಯ ರನ್ ವೇ ಮೇಲೆ ಇಳಿಯಲಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ.
ಈ ಮಧ್ಯೆ ವಿಮಾನ ನಿಲ್ದಾಣದ ಟರ್ಮಿನಲ್ (Terminal) ಸಂಪೂರ್ಣ ಸಜ್ಜಾಗಿದೆ. ಟರ್ಮಿನಲ್ ಒಳಾಂಗಣ ಹೇಗಿದೆ? ಏನೇನೆಲ್ಲ ಸಿದ್ಧತೆಗಳಾಗಿವೆ ಇಲ್ಲಿದೆ ಫೋಟೊ ಸಹಿತ ಮಾಹಿತಿ.
ಇದನ್ನೂ ಓದಿ- ಶಿವಮೊಗ್ಗಕ್ಕೆ ವಿಮಾನ, ಮೊದಲ ದಿನ ಯಾರೆಲ್ಲ ಪ್ರಯಾಣಿಸಲಿದ್ದಾರೆ? ಹೇಗಿರುತ್ತೆ ವಿಮಾನಕ್ಕೆ ವೆಲ್ಕಮ್?
ಎರಡು ಪ್ರತ್ಯೇಕ ವಿಭಾಗ
ವಿಮಾನ ಹತ್ತಲು ಮತ್ತು ಇಳಿದು ಬರುವ ಪ್ರಯಾಣಿಕರು ಟರ್ಮಿನಲ್ ಕಟ್ಟಡದ ಮೂಲಕವೆ ತೆರಳಬೇಕು. ಟರ್ಮಿನಲ್ನಲ್ಲಿ ಎರಡು ವಿಭಾಗವಿದೆ. ಎಡ ಭಾಗದಲ್ಲಿ ವಿಮಾನ ಹತ್ತಲು ತೆರಳುವವರು ಸಾಗುವ ಮಾರ್ಗ. ಅಂದರೆ ಚಕ್ ಇನ್ ವಿಭಾಗ. ಬಲ ಭಾಗದಲ್ಲಿ ವಿಮಾನದಿಂದ ಇಳಿದು ಬರುವವರು ಹೊರಗೆ ಬರುವ ಮಾರ್ಗ. ಅಂದರೆ ಚೆಕ್ ಔಟ್ ವಿಭಾಗ.
ಚೆಕ್ ಇನ್ ಕೌಂಟರ್
ಟರ್ಮಿನಲ್ನ ಎಡ ಭಾಗದಲ್ಲಿ ನಿರ್ಗಮನ ದ್ವಾರದಲ್ಲಿ ಪೊಲೀಸರು ಸೆಕ್ಯೂರಿಟಿ ಚೆಕ್ ಮಾಡಲಿದ್ದಾರೆ. ಒಳಾಂಗಣ ಪ್ರವೇಶಿಸುತ್ತಿದ್ದಂತೆ ಚೆಕ್ ಇನ್ ಕೌಂಟರ್ ಇದೆ. ಸದ್ಯ ಇಂಡಿಗೋ ಸಂಸ್ಥೆಯ ಚೆಕ್ ಇನ್ ಮಾತ್ರ ನಿರ್ಮಿಸಲಾಗಿದೆ. ಇಲ್ಲಿ ಟಿಕೆಟ್ ಪರಿಶೀಲನೆ ನಡೆಯಲಿದೆ. ಕೊನೆಯ ಕ್ಷಣದಲ್ಲಿ ಟಿಕೆಟ್ ಖರೀದಿಗೆ ಅವಕಾಶವು ಇದೆ.
ಕಿಮ್ಮನೆ ಕಾಫಿ ಲಾಂಜ್
ಪ್ರಯಾಣಿಕರು ತಿಂಡಿ, ತಿನಿಸು, ಕಾಫಿ, ಟೀ ಸವಿಯಲು ಕಿಮ್ಮನೆ ಕಾಫಿ ಲಾಂಜ್ ಕೆಫೆಟೇರಿಯಾ ಸ್ಥಾಪಿಸಲಾಗಿದೆ. ಒಂದು ಟೇಬಲ್ನಲ್ಲಿ ನಾಲ್ವರು ಕುಳಿತುಕೊಳ್ಳುವ ವ್ಯವಸ್ಥೆಯು ಇಲ್ಲಿದೆ. ಪಕ್ಕದಲ್ಲಿಯೇ ವೇಯ್ಟಿಂಗ್ ಲಾಂಜ್ ಇದೆ.
ಲಗೇಜ್ಗಳ ತಪಾಸಣೆ
ವಿಮಾನ ಹತ್ತಲು ತೆರಳುವ ಪ್ರಯಾಣಿಕರ ಲಗೇಜ್ ತಪಾಸಣೆ ನಡೆಯಲಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ (KSISF) ಈ ಜವಾಬ್ದಾರಿ ವಹಿಸಲಾಗಿದೆ. ಇದಕ್ಕಾಗಿ ಅತ್ಯಾಧುನಿಕ ತಪಾಸಣಾ ಯಂತ್ರಗಳನ್ನು ಅಳವಡಿಸಲಾಗಿದೆ.
ವಿಮಾನದ ಹ್ಯಾಂಗರ್ನತ್ತ
ಲಗೇಜ್ ತಪಾಸಣೆ ಬಳಿಕ ಪ್ರಯಾಣಿಕರು ವಿಮಾನಗಳ ನಿಲುಗಡೆ ಸ್ಥಳ ಹ್ಯಾಂಗರ್ನತ್ತ ತೆರಳಬೇಕು. ಅಲ್ಲಿ ವಿಮಾನ ಹತ್ತಬೇಕು. ನಿಗದಿತ ಸಮಯಕ್ಕೆ ವಿಮಾನವು ರನ್ ವೇ ಬಳಿ ತೆರಳಲಿದ್ದು ಅಲ್ಲಿಂದ ಹಾರಾಟ ಶುರು ಮಾಡಲಿದೆ.
ಚೆಕ್ ಕೌಟ್ ವಿಭಾಗ
ಇನ್ನು, ಟರ್ಮಿನಲ್ನ ಇನ್ನೊಂದು ಭಾಗ ವಿಮಾನದಿಂದ ಇಳಿದು ಬರುವ ಪ್ರಯಾಣಿಕರಿಗೆ ಮೀಸಲಾಗಿದೆ. ಚೆಕ್ ಔಟ್ ವಿಭಾಗದಲ್ಲಿಯು ಕೆಫೆಟೇರಿಯಾ, ವೇಯ್ಟಿಂಗ್ ಲಾಂಜ್ ಇದೆ. ಈ ಭಾಗದಲ್ಲಿ ಲಗೇಜ್ ಪಡೆದುಕೊಳ್ಳಲು ಲಗೇಜ್ ಕೊರೊಸೆಲ್ ಇದೆ. ವಿಮಾನದಿಂದ ತಂದ ಲಗೇಜುಗಳು ಈ ಕೊರೋಸಲ್ ನಲ್ಲಿ ಬರಲಿದೆ. ಪ್ರಯಾಣಿಕರು ತಮ್ಮ ಬ್ಯಾಗುಗಳನ್ನು ತೆಗೆದುಕೊಳ್ಳಬಹುದಾಗಿದೆ.
ಲಗೇಜ್ ಕಾರ್ಟ್, ಹೈಟೆಕ್ ವೀಲ್ ಚೇರ್
ಲಗೇಜನ್ನು ಟರ್ಮಿನಲ್ (Terminal) ಒಳಗಾಂಣ ಮತ್ತು ಹೊರ ಭಾಗಕ್ಕೆ ಕೊಂಡೊಯ್ಯಲು ಕಾರ್ಟ್ ಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು, ವಯವೃದ್ಧರು, ಅಂಗವಿಕಲರು ಮತ್ತು ತುರ್ತು ಸಂದರ್ಭ ಪ್ರಯಾಣಿಕರನ್ನು ಕರೆದೊಯ್ಯಲು ಅತ್ಯಾಧುನಿಕ ವೀಲ್ ಚೇರ್ಗಳನ್ನು ವ್ಯವಸ್ಥೆ ಮಾಡಲಾಗಿದೆ.
ವಿಐಪಿ ಲಾಂಜ್ ವ್ಯವಸ್ಥೆ
ಟರ್ಮಿನಲ್ ಒಳಾಂಗಣದಲ್ಲಿ ವಿಐಪಿ ಲಾಂಜ್ ಇದೆ. ಗಣ್ಯರು, ರಾಜಕಾರಣಿಗಳು ನಿಲ್ದಾಣಕ್ಕೆ ಬಂದರೆ ಅವರು ಕೆಲ ಹೊತ್ತು ವಿರಮಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಚೆಕ್ ಇನ್ ಮತ್ತು ಚೆಕ್ ಔಟ್ ವಿಭಾಗಕ್ಕೆ ಪ್ರತ್ಯೇಕ ಬಾಗಿಲುಗಳಿವೆ.
ಏರ್ಪೋರ್ಟ್ ಮ್ಯಾನೇಜರ್ ಕೊಠಡಿ
ಉಳಿದಂತೆ ಏರ್ ಪೋರ್ಟ್ ಮ್ಯಾನೇಜರ್, ನಿರ್ವಾಹಕ ಸಿಬ್ಬಂದಿಯ ಕೊಠಡಿಗಳನ್ನು ಕೂಡ ಸ್ಥಾಪಿಸಲಾಗಿದೆ. ಚೆಕ್ ಇನ್, ಚೆಕ್ ಔಟ್ ವಿಭಾಗಗಳಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ಚೇತನರ ಬಳಕೆಗೆ ಅನುಕೂಲವಾಗುವ ಹಾಗೆ ಶೌಚಾಲಯ ಸಿದ್ಧಪಡಿಸಲಾಗಿದೆ.
ಸೆನ್ಸಾರ್ ಬಾಗಿಲುಗಳು
ಕುಡಿಯುವ ನೀರು, ಟರ್ಮಿನಲ್ ಒಳಾಂಗಣದಲ್ಲಿ ಎಟಿಎಂ ಕೇಂದ್ರಕ್ಕೆ ಸ್ಥಳ ಕಾಯ್ದಿರಿಸಲಾಗಿದೆ. ಟರ್ಮಿನಲ್ ಗೆ ಗಾಜಿನ ಬಾಗಿಲುಗಳನ್ನು ಅಳವಡಿಸಲಾಗಿದೆ. ಎಲ್ಲವೂ ಸೆನ್ಸರ್ ಬಾಗಿಲುಗಳಾಗಿದ್ದು ಜನರು ಹತ್ತಿರ ಬರುತ್ತಿದ್ದಂತೆ ತನ್ನಿಂತಾನೆ ತೆರೆದುಕೊಳ್ಳುತ್ತವೆ.
ಟರ್ಮಿನಲ್ ಒಳಾಂಗಣದಲ್ಲಿ ಗಾಳಿ, ಬೆಳಕಿಗೆ ಕೊರತೆ ಇಲ್ಲ. ಆಕರ್ಷಕ ಇಂಟೀರಿಯರ್ ಡಿಸೈನಿಂಗ್ ಇದೆ. ಪ್ರಯಾಣಿಕರು ಮತ್ತು ಅವರ ಲಗೇಜ್ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸದ್ಯ ಜಿಲ್ಲಾ ಕೇಂದ್ರವೊಂದರಲ್ಲಿ ಇರುವ ವಿಮಾನ ನಿಲ್ದಾಣದ ಟರ್ಮಿನಲ್ ಗಳ ಪೈಕಿ ಶಿವಮೊಗ್ಗದ್ದು ಅತ್ಯಂತ ಹೈಟೆಕ್ ಆಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422