ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MARCH 2021
ಸೇನೆ ಸೇರಬೇಕು, ಗಡಿಯಲ್ಲಿ ನಿಂತು ದೇಶ ಸೇವೆ ಮಾಡಬೇಕು ಅನ್ನುವ ಗುರಿ ಹೊಂದಿರುವ ಮಲೆನಾಡಿನ ಯುವಕರಿಗೆ, ಶಿವಮೊಗ್ಗದ ಮಾಜಿ ಯೋಧರ ತಂಡವೊಂದು ಉಚಿತ ತರಬೇತಿ ನೀಡುತ್ತಿದೆ. ಸೂಕ್ತ ಮಾರ್ಗದರ್ಶನ ನೀಡಿ ಸೇನಾ ನೇಮಕಾತಿ ರಾಲಿಗೆ ಕಳುಹಿಸುತ್ತಿದೆ.
ಶಿವಮೊಗ್ಗದ ಮನೆ ಮನೆಯಲ್ಲೂ ಯೋಧರಿರಬೇಕು ಅನ್ನುವ ಸದುದ್ದೇಶದಿಂದ, ಮಾಜಿ ಯೋಧರ ತಂಡ, ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್ ಸ್ಥಾಪಿಸಿದೆ. ಆಕಾಂಕ್ಷಿಗಳಿಗೆ ಉಚಿತವಾಗಿ ಸೇನಾ ತರಬೇತಿ ನೀಡುತ್ತಿದೆ. ಇವರ ಗರಡಿಯಲ್ಲಿ ಪಳಗಿದವರು ಈಗ ಗಡಿಯಲ್ಲಿ ದೇಶ ಕಾಯುತ್ತಿದ್ದಾರೆ.
ಉಡುಪಿ ನೇಮಕಾತಿಗೆ ಸಿದ್ಧ
ಮಾರ್ಚ್ 17ರಿಂದ ಉಡುಪಿಯಲ್ಲಿ ಸೇನಾ ನೇಮಕಾತಿ ರಾಲಿ ನಡೆಯಲಿದೆ. ಇದಕ್ಕೆ ಶಿವಮೊಗ್ಗದಲ್ಲಿ ಆಕಾಂಕ್ಷಿಗಳಿಗೆ ಉಚಿತವಾಗಿ ತರಬೇತಿ ನೀಡಲಾಯಿತು. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ವಿವಿಧೆಡೆಯಿಂದ ಆಕಾಂಕ್ಷಿಗಳು ತರಬೇತಿಗೆ ಬಂದಿದ್ದರು. ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ದೈಹಿಕ ತರಬೇತಿ, ಜಿಲ್ಲಾ ತರಬೇತಿ ಕೇಂದ್ರದಲ್ಲಿ ಪರೀಕ್ಷೆಗೆ ಬೇಕಿರುವ ಪೂರ್ವ ಸಿದ್ಧತಾ ತರಬೇತಿ ನೀಡಲಾಯಿತು.
ಹೇಗಿರುತ್ತೆ? ಏನೇನೆಲ್ಲ ತರಬೇತಿ ಇರುತ್ತೆ?
ಆಕಾಂಕ್ಷಿಗಳಿಗೆ ಹದಿನೈದು ದಿನ ತರಬೇತಿ ನೀಡಲಾಯಿತು. ‘ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ದೈಹಿಕ ಸಾಮರ್ಥ್ಯ ಹೆಚ್ಚಿಸುವ ವಿವಿಧ ವ್ಯಾಯಾಮಗಳನ್ನು ಹೇಳಿ ಕೊಡಲಾಗುತ್ತಿದೆ. ನೇಮಕಾತಿಗೆ ಅಗತ್ಯವಿರುವ ರನ್ನಿಂಗ್, ಹೈಜಂಪ್ ಸೇರಿದಂತೆ ವಿವಿಧ ತರಬೇತಿ ನೀಡಲಾಗುತ್ತಿದೆ’ ಅನ್ನುತ್ತಾರೆ ಮಾಜಿ ಯೋಧ, ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್‍ನ ಸಂಸ್ಥಾಪಕರಲ್ಲಿ ಒಬ್ಬರಾದ ಸುಭಾಷ್ ಚಂದ್ರ ತೇಜಸ್ವಿ.
ಇದನ್ನೂ ಓದಿ | ಆನಂದಪುರದಲ್ಲಿ ಟ್ರೇನಿಂಗ್ ಪಡೆದವರು ಭಾರತೀಯ ಸೇನೆಗೆ ಆಯ್ಕೆ, ಎಷ್ಟು ಯುವಕರಿಗೆ ಅವಕಾಶ ಸಿಕ್ಕಿದೆ ಗೊತ್ತಾ?
ಮಾಜಿ ಯೋಧರಾದ ಕಿಶೋರ್ ಭೈರಾಪುರ ಮತ್ತು ಸುಭಾಷ್ ಚಂದ್ರ ತೇಜಸ್ವಿ ಅವರು ದೈಹಿಕ ತರಬೇತಿ ನೀಡುತ್ತಾರೆ. ಇವರ ಜೊತೆಗೆ ರಜೆಗಾಗಿ ಊರಿಗೆ ಬಂದಿರುವ ಯೋಧರು ಕೂಡ ಕೈ ಜೋಡಿಸಿದ್ದಾರೆ. ದೈಹಿಕ ತರಬೇತಿ ಜೊತೆಗೆ ವಿವಿಧ ಕಾಲೇಜುಗಳ ಉಪನ್ಯಾಸಕರಿಂದ ಲಿಖಿತ ಪರೀಕ್ಷೆಗೆ ಅಗತ್ಯವಿರುವ ತರಬೇತಿ ನೀಡಲಾಯಿತು.
‘ಇಲ್ಲಿ ಬಂದ ಮೇಲೆ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಸೇನಾ ನೇಮಕಾತಿ ರಾಲಿಯಲ್ಲಿ ಮುಂಚೂಣಿ ಕಾಯ್ದುಕೊಳ್ಳುವ ಭರವಸೆ ಮೂಡಿದೆ’ ಅನ್ನುತ್ತಾರೆ ಶಿಬಿರಾರ್ಥಿ ಉಡುಪಿಯ ಗೌತಮ್.
‘ತರಬೇತಿಯ ಜೊತೆಗೆ ನಮ್ಮ ದಾಖಲೆಗಳನ್ನು ಪರಿಶೀಲಿಸಿ, ಸರಿಪಡಿಸಲಾಗಿದೆ. ಮೈ ಮೇಲೆ ಹಚ್ಚೆ ಇದ್ದವರಿಗೆ ತೆಗೆಸಿದ್ದಾರೆ. ಎಲ್ಲ ಬಗೆಯಲ್ಲಿ ನಾವು ಸನ್ನದ್ಧರಾಗಿದ್ದೇವೆ. ಆಯ್ಕೆ ಆಗುತ್ತೇವೆ ಎಂಬ ಭರವಸೆಯಲ್ಲಿದ್ದೇವೆ’ ಅನ್ನುತ್ತಾರೆ ಶಿಬಿರಾರ್ಥಿ ರಿಪ್ಪನ್‍ಪೇಟೆಯ ರವಿರಾಜ್.
26 ಯುವಕರು ಈಗ ಯೋಧರು
2019ರಲ್ಲಿ ಗದಗದಲ್ಲಿ ಸೇನಾ ನೇಮಕಾತಿ ರಾಲಿ ನಡೆಯಿತು. ಮಾಜಿ ಯೋಧರಾದ ಕಿಶೋರ್ ಭೈರಾಪುರ, ಸುಭಾಷ್ ಚಂದ್ರ ತೇಜಸ್ವಿ ಅವರು ಈ ರಾಲಿಗಾಗಿ ಆನಂದಪುರದ ಮುರುಘಾ ಮಠದ ಆವರಣದಲ್ಲಿ ಉಚಿತ ತರಬೇತಿ ನೀಡಿದ್ದರು. ಈ ತರಬೇತಿಯಲ್ಲಿ ಭಾಗವಹಿಸಿದ್ದವರ ಪೈಕಿ 26 ಮಂದಿ ಸೇನೆಗೆ ನೇಮಕವಾಗಿದ್ದಾರೆ. ದೇಶದ ವಿವಿಧೆಡೆ ಇವರನ್ನು ನಿಯೋಜಿಸಲಾಗಿದೆ.
ಈಗ ಉಡುಪಿ ರಾಲಿಗೆ ತರಬೇತಿ ನೀಡಲಾಗಿದ್ದು, ಹೆಚ್ಚಿನ ಪ್ರಮಾಣದ ಆಕಾಂಕ್ಷಿಗಳು ಆಯ್ಕೆಯಾಗುವ ನಿರೀಕ್ಷೆ ಇದೆ ಅನ್ನುತ್ತಾರೆ ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್‍ನ ಸಂಸ್ಥಾಪಕ ಕಿಶೋರ್ ಭೈರಾಪುರ.
VIDEO REPORT
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422