ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 29 ಜುಲೈ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳ ಪ್ರಯಾಣ ದರವನ್ನು ಶೇ.25ರಷ್ಟು ಹೆಚ್ಚಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ನೆರೆಯ ಜಿಲ್ಲೆಗಳಲ್ಲಿ ಈಗಾಗಲೇ ಖಾಸಗಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವಂತೆ ಜಿಲ್ಲೆಯಲ್ಲಿಯೂ ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅನಾರೋಗ್ಯಕರ ಪೈಪೋಟಿ ತಪ್ಪಿಸಲು ಕ್ರಮ
ಖಾಸಗಿ ಮತ್ತು KSRTC ಬಸ್‍ಗಳ ನಡುವೆ ಅನಾರೋಗ್ಯಕರ ಪೈಪೋಟಿ ತಪ್ಪಿಸಲು ಎರಡು ಕಡೆಯವರು ಸಹಕರಿಸಬೇಕು. ಸರ್ಕಾರಿ ಬಸ್ ನಿಲ್ದಾಣದ ಒಳಗೆ ಖಾಸಗಿಯವರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಅನಾರೋಗ್ಯಕರ ಪೈಪೋಟಿಯಲ್ಲಿ ತೊಡಗುವ ಬಸ್‍ಗಳನ್ನು ತಡೆದು ನಿಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಚಾರಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಅವರು ಸೂಚಿಸಿದರು.
ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಕ್ರಮ
ಅಟೋ ರಿಕ್ಷಾ ಪ್ರಯಾಣದ ಕನಿಷ್ಟ ದರವನ್ನು ರೂ.40ಕ್ಕೆ ಪರಿಷ್ಕರಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಜಿಲ್ಲೆಗಳಲ್ಲಿರುವ ಕನಿಷ್ಟ ದರ ಸೇರಿದಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಇದೇ ರೀತಿ ಶಿವಮೊಗ್ಗ ನಗರದ 20 ಕಿಮೀ ವ್ಯಾಪ್ತಿಯಲ್ಲಿ ಅಟೋ ಚಾಲನೆಗೆ ಅವಕಾಶ ನೀಡಬೇಕೆಂಬ ಮನವಿ ಕುರಿತಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ. ಅದರ ಆಧಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಹೊಸ ಆಟೋಗಳಿಗೆ ಪರವಾನಗಿ ಇಲ್ಲ
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಹೊಸ ಅಟೋ ಪರವಾನಿಗೆ ಅವಕಾಶ ನೀಡಲಾಗುತ್ತಿಲ್ಲ. ಇಲೆಕ್ಟ್ರಿಕಲ್ ಅಟೋಗಳಿಗೆ ಪರವಾನಿಗೆ ಅಗತ್ಯವಿಲ್ಲ. ಆದರೆ ಅದರ ಚಾಲಕರು ಸಹ ಸಮವಸ್ತ್ರವನ್ನು ಧರಿಸಬೇಕು. ಅಟೋ ಮೀಟರ್ ಹಾಕದಿರುವ ಬಗ್ಗೆ ಹೆಚ್ಚಿನ ದರ ವಸೂಲು ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದು, ಅದಕ್ಕೆ ಅವಕಾಶ ಮಾಡಬಾರದು. ಎಲ್ಲರೂ ಕಡ್ಡಾಯವಾಗಿ ಮೀಟರ್ ಹಾಕಿ ಅಟೋ ಚಲಾಯಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಲ್‍ಇಡಿ ಹೆಡ್‍ಲೈಟ್ ವಿರುದ್ಧ ಕ್ರಮ
ಕೆಲವು ವಾಹನಗಳಲ್ಲಿ ಕಣ್ಣು ಕುಕ್ಕುವ ಎಲ್‍ಇಡಿ ಹೆಡ್‍ಲೈಟ್ ಅಳವಡಿಕೆಯಿಂದ ಅಪಘಾತಗಳು ಸಂಭವಿಸಿರುವ ಬಗ್ಗೆ ದೂರುಗಳು ಬಂದಿವೆ. ಅಂತಹ ವಾಹನಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, RTO ಅಧಿಕಾರಿ ಶ್ರೀಧರ್, ವಿವಿಧ ಸಂಘಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200