SHIVAMOGGA LIVE NEWS | 3 JULY 2024
SHIMOGA : ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಸುದ್ದಿ ವಾಟ್ಸಪ್‌ನಲ್ಲಿ ವೈರಲ್ (viral) ಆಗಿದ್ದು ಜನ ಆತಂಕಕ್ಕೀಡಾಗಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಈತನಕ ಚಿರತೆಯ ಕುರುಹು ಪತ್ತೆಯಾಗಿಲ್ಲ.
ರಾಗಿಗುಡ್ಡ ಪಕ್ಕದ ಕುವೆಂಪು ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ವಿಚಾರ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಚಿರತೆ ಮಾದರಿಯ ಪ್ರಾಣಿಯೊಂದು ಹಾದು ಹೋಗಿರುವುದು ಮನೆಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಇದೇ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.
ಎಲ್ಲಿದೆ? ಹೇಗಿದೆ ಕುವೆಂಪು ನಗರ?
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜು ಎದುರು, ಸವಳಂಗ ರಸ್ತೆ ಮತ್ತು ರಾಗಿಗುಡ್ಡಕ್ಕೆ ಹೊಂದಿಕೊಂಡಂತೆ ಕುವೆಂಪು ನಗರ ಬಡಾವಣೆ ಇದೆ. ವಿವಿಧ ಬ್ಲಾಕ್‌ಗಳಲ್ಲಿ ಬಡಾವಣೆ ನಿರ್ಮಿಸಲಾಗಿದೆ. ನೂರಾರು ಮನೆಗಳು ಸಾವಿರಾರು ಜನರು ಇಲ್ಲಿ ವಾಸವಾಗಿದ್ದಾರೆ. ಬಡಾವಣೆಯಲ್ಲಿ ಈಗಲು ಬಹುತೇಕ ಖಾಲಿ ನಿವೇಶನಗಳಿವೆ. ಅಲ್ಲೆಲ್ಲ ಗಿಡಗಂಟಿ ಬೆಳೆದು ಕಾಡಿನಂತಹ ವಾತಾವರಣವಿದೆ.
ಚಿರತೆ ಭೀತಿಯಲ್ಲಿ ವಾಕಿಂಗ್ ಕೈಬಿಟ್ಟರು
ಕೆಲವು ತಿಂಗಳ ಹಿಂದೆ ಕುವೆಂಪು ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ವಿಚಾರ ತೀವ್ರ ಆತಂಕ ಮೂಡಿಸಿತ್ತು. ಕಣ್ಣಾರೆ ಕಂಡವರು ಯಾರು ಇಲ್ಲದ್ದರಿಂದ ಗಾಳಿ ಸುದ್ದಿ ಎಂದು ಭಾವಸಿ ಜನ ಸುಮ್ಮನಾಗಿದ್ದರು. ಜುಲೈ 1ರ ನಡುರಾತ್ರಿ ಕುವೆಂಪು ನಗರದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್ ಆಗುತ್ತಿದ್ದಂತೆ ಸ್ಥಳೀಯರಲ್ಲಿ ಭೀತಿ ಎದುರಾಗಿದೆ.
ಚಿರತೆ ವಿಚಾರ ಬಡಾವಣೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಹಲವರು ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವುದನ್ನು ನಿಲ್ಲಿಸಿದ್ದಾರೆ. ಒಂಟಿ ಮನೆಗಳು ಹೆಚ್ಚಿರುವುದರಿಂದ ಭೀತಿಯಲ್ಲಿದ್ದಾರೆ. ಇಲ್ಲಿ ಬೀದಿ ನಾಯಿಗಳು ಹೆಚ್ಚಿವೆ. ಹಾಗಾಗಿ ಚಿರತೆ ಬಂದಿದ್ದರೆ ಬೀದಿ ನಾಯಿಗಳ ಮೇಲೆ ದಾಳಿ ಮಾಡಬೇಕಿತ್ತು. ಆದರೆ ಅಂತಹ ಯಾವುದೇ ಪ್ರಕರಣಗಳು ಆಗಿಲ್ಲ.ಸಿ.ಜಿ.ಮಧುಸೂದನ್, ಸ್ಥಳೀಯರು
ವೈರಲ್ ವಿಡಿಯೋದಲ್ಲಿ ಏನಿದೆ?
ಚಿರತೆ ಪ್ರತ್ಯಕ್ಷ ಎಂಬ ಶೀರ್ಷಿಕೆಯೊಂದಿಗೆ 16 ಸೆಕೆಂಡ್‌ನ ವಿಡಿಯೋ ವೈರಲ್ ಆಗಿದೆ. ವಿಡಿಯೋದ ಆರಂಭದಲ್ಲಿ ಚಿರತೆಯಂತೆ ಗೋಚರಿಸುವ ಪ್ರಾಣಿಯೊಂದು ಮನೆಯೊಂದರ ಕಾಂಪೌಂಡ್ ಪಕ್ಕದಲ್ಲಿ ನಡೆದು ಹೋಗುತ್ತದೆ. ಮೂರ್ನಾಲ್ಕು ಕ್ಷಣಕ್ಕೆ ಆ ಪ್ರಾಣಿ ಹಿಂತಿರುಗಿ ಓಡಲು ಆರಂಭಿಸುತ್ತದೆ. ಅದರ ಹಿಂದೆಯೇ ನಾಯಿಯೊಂದು ಬೆನ್ನಟ್ಟಿಕೊಂಡು ಹೋಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಜುಲೈ 1ರ ಮಧ್ಯ ರಾತ್ರಿ 12.28ಕ್ಕೆ ಈ ದೃಶ್ಯ ಸೆರೆಯಾಗಿದೆ.
ಅರಣ್ಯ ಇಲಾಖೆಯಿಂದ ಪರಿಶೀಲನೆ
ಸಿಸಿಟಿವಿಯಲ್ಲಿ ಚಿರತೆ ದೃಶ್ಯ ಸೆರೆಯಾದ ಮನೆ ಬಳಿ ಶಂಕರ ವಲಯದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ತೆರಳಿ ಪರಿಶೀಲಿಸಿದರು. ಚಿರತೆಯ ಹೆಜ್ಜೆ ಗುರುತು, ಅದು ಓಡಾಡಿರಬಹುದಾದ ಸ್ಥಳ ಕುರಿತು ಪರಿಶೀಲನೆ ಮಾಡಿದರು.
ಮಳೆಯಿಂದಾಗಿ ನೆಲ ಹಸಿ ಇದೆ. ಚಿರತೆಗಳು ಸಾಮಾನ್ಯವಾಗಿ 60 ಕೆ.ಜಿ. ತೂಕವಿರುತ್ತವೆ. ಹಾಗಾಗಿ ಅದು ಓಡಾಡಿದ ಕಡೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಬೇಕಿತ್ತು. ಈತನಕ ಎಲ್ಲಿಯು ಹೆಜ್ಜೆ ಗುರುತು ಸಿಕ್ಕಿಲ್ಲ. ಇನ್ನು, ಕಾಡು ಬೆಕ್ಕುಗಳು ಕೂಡ ಚಿರತೆಯಂತೆಯೇ ಕಾಣುತ್ತವೆ. ಅವುಗಳ ಬಾಲವು ಚಿರತೆಯಂತೆಯೇ ಇರುತ್ತದೆ. ಹಾಗಾಗಿ ಅಲ್ಲಿ ಕಾಣಿಸಿದ್ದು ಚಿರತೆಯೋ, ಕಾಡು ಬೆಕ್ಕೊ ಅನ್ನುವುದು ಸ್ಪಷ್ಟವಾಗಬೇಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾವು ಆ ಭಾಗದಲ್ಲಿ ಗಸ್ತು ಮಾಡುತ್ತಿದ್ದೇವೆ.ಸುಧಾಕರ್, ವಲಯ ಅರಣ್ಯ ಅಧಿಕಾರಿ
ಸದ್ಯ ಕುವೆಂಪು ನಗರದ ಜನರಲ್ಲಿ ಆತಂಕವಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಗಸ್ತು ಮಾಡುತ್ತಿದ್ದು ಜನರಲ್ಲಿ ತುಸು ನೆಮ್ಮದಿ ಮೂಡಿಸಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಚಿರತೆಯೋ, ಕಾಡು ಬೆಕ್ಕೋ ಅನ್ನುವುದು ನಿಖರವಾದರಷ್ಟೆ ಮುಂದಿನ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
ಇದನ್ನೂ ಓದಿ – ತುಂಗಾ ಮೇಲ್ದಂಡೆ ಯೋಜನೆ ನಾಲೆಗಳಿಗೆ ನೀರು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200