ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 5 ಜನವರಿ 2022
ಕೆಲ ತಿಂಗಳಿಂದ ತಗ್ಗಿದ್ದ ಕರೋನ ಪ್ರಕರಣಗಳು ನಿಧಾನಕ್ಕೆ ಹೆಚ್ಚಳವಾಗುತ್ತಿವೆ. ಮೂರನೆ ಅಲೆ ಬಗ್ಗೆ ಜನರಲ್ಲಿ ಆತಂಕ ಮೂಡಿದೆ. ಈ ಮಧ್ಯೆ ಓಂ ಶಕ್ತಿ ದರ್ಶನಕ್ಕೆ ತೆರಳಿದ್ದ ಸಾವಿರಾರು ಮಹಿಳೆಯರು ಇವತ್ತು ಶಿವಮೊಗ್ಗಕ್ಕೆ ಮರಳುತ್ತಿದ್ದಾರೆ. ಇದು ಕೋವಿಡ್ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮತ್ತೊಂದೆಡೆ ಓಂ ಶಕ್ತಿಗೆ ತೆರಳಿದ್ದ ಮಹಿಳೆಯರು ಶಿವಮೊಗ್ಗಕ್ಕೆ ಪ್ರವೇಶಿಸುತ್ತಿದ್ದಂತೆ ಸ್ಕ್ರೀನಿಂಗ್ ಕಾರ್ಯ ನಡೆಸಲಾಗುತ್ತಿದೆ.
ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಮರಳುತ್ತಿರುವ ಬಸ್ಸುಗಳನ್ನು ಸಹ್ಯಾದ್ರಿ ಕಾಲೇಜು ಬಳಿ ತಡೆದು ತಪಾಸಣೆ ನಡೆಸಲಾಗುತ್ತಿದೆ. ಬಸ್ಸಿನಲ್ಲಿರುವ ಮಹಿಳೆಯರ ಕರೋನ ಸ್ಕ್ರೀನಿಂಗ್ ಕಾರ್ಯ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ತಪಾಸಣೆ ನಡೆಸುತ್ತಿದ್ದಾರೆ.
ಐದು ಸಾವಿರಕ್ಕೂ ಅಧಿಕ ಮಹಿಳೆಯರು
ಶಿವಮೊಗ್ಗದಿಂದ ಪ್ರತಿ ವರ್ಷ ಸಾವಿರಾರು ಮಹಿಳೆಯರು ಓಂ ಶಕ್ತಿ ಮಾಲೆ ಧರಿಸಿಕೊಂಡು ದೇವರ ದರ್ಶನಕ್ಕೆ ತೆರಳುತ್ತಾರೆ. ತಮಿಳುನಾಡಿನ ಮೇಲ್ ಮರತ್ತೂರಿಗೆ ಧಾರ್ಮಿಕ ಪ್ರವಾಸ ಕೈಗೊಂಡು ಮರಳುತ್ತಾರೆ. ಈ ಭಾರಿ ಶಿವಮೊಗ್ಗದಿಂದ ಸುಮಾರು ಐದು ಸಾವಿರ ಮಹಿಳೆಯರು ಓಂ ಶಕ್ತಿ ದರ್ಶನಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಡಿ.31ರಂದು ಪ್ರವಾಸ ಆರಂಭಿಸಿದ್ದ ಮಹಿಳೆಯರು ಇವತ್ತು ಹಿಂತಿರುಗುತ್ತಿದ್ದಾರೆ.
ಮಂಡ್ಯದಲ್ಲಿ 30 ಮಹಿಳೆಯರಿಗೆ ಪಾಸಿಟಿವ್
ಓಂ ಶಕ್ತಿ ದರ್ಶನ ಪಡೆದು ಮಂಡ್ಯ ಜಿಲ್ಲೆಗೆ ಮರಳಿದ 30ಕ್ಕೂ ಅಧಿಕ ಮಹಿಳೆಯರಿಗೆ ಕರೋನ ಪಾಸಿಟಿವ್ ಬಂದಿದೆ. ಇದು ಶಿವಮೊಗ್ಗ ಜಿಲ್ಲೆಯ ಜನರಲ್ಲಿ ಭೀತಿಗೆ ಕಾರಣವಾಗಿದೆ. ಹಾಗಾಗಿ ಈ ಮಹಿಳೆಯರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಸಹ್ಯಾದ್ರಿ ಕಾಲೇಜು ಬಳಿ ಸ್ಕ್ರೀನಿಂಗ್
ಶಿವಮೊಗ್ಗ, ಭದ್ರಾವತಿ ಡಿಪೋದಿಂದ ಸುಮಾರು ನೂರು ಬಸ್ಸುಗಳಲ್ಲಿ ಮಹಿಳೆಯರು ಓಂ ಶಕ್ತಿ ದರ್ಶನಕ್ಕೆ ತೆರಳಿದ್ದರು. ಅವರೆಲ್ಲ ಇವತ್ತು ಬೆಳಗ್ಗೆಯಿಂದ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದಾರೆ. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಓಂ ಶಕ್ತಿ ದರ್ಶನಕ್ಕೆ ತೆರಳಿದ್ದವರ ಬಸ್ಸುಗಳು ಬರುತ್ತಿದ್ದಂತೆ, ಅವುಗಳನ್ನು ಸಹ್ಯಾದ್ರಿ ಕಾಲೇಜು ಬಳಿ ತಡೆದು ನಿಲ್ಲಿಸಲಾಗುತ್ತಿದೆ. ಬಸ್ಸಿನಲ್ಲಿರುವ ಪ್ರತಿ ಮಹಿಳೆಯನ್ನು ತಪಾಸಣೆ ಮಾಡಲಾಗುತ್ತಿದೆ.
ಏಳು ದಿನ ಕ್ವಾರಂಟೈನ್
ಇನ್ನು, ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಬೆಳಗ್ಗೆ 6.15ರಿಂದ ತಪಾಸಣೆ ನಡೆಸಲಾಗುತ್ತಿದೆ. ತಮಿಳುನಾಡಿನಿಂದ ಆಗಮಿಸಿದ 25 ಬಸ್ಸುಗಳನ್ನು ತಡೆದು ತಪಾಸಣೆ ಮಾಡಲಾಗಿದೆ. ಎಲ್ಲರಿಗೂ ಏಳು ದಿನ ಹೋಂ ಕ್ವಾರಂಟೈನ್’ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೆಎಸ್ಆರ್’ಟಿಸಿ ಬಸ್ಸುಗಳಿಗೆ ಸ್ಯಾನಿಟೈಸ್
ಓಂ ಶಕ್ತಿ ತೀರ್ಥಯಾತ್ರೆಗೆ ತೆರಳಿರುವ ನೂರಕ್ಕೂ ಹೆಚ್ಚು ಬಸ್ಸುಗಳು ಡಿಪೋಗೆ ಮರಳುತ್ತಿದ್ದಂತೆ, ರೆಗುಲರ್ ರೂಟ್’ಗಳಿಗೆ ಕಳುಹಿಸಲಾಗುತ್ತದೆ. ಆದರೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್ಸುಗಳಿಗೆ ಸ್ಯಾನಿಟೈಸ್ ಮಾಡಲು ಕೆಎಸ್ಆರ್’ಟಿಸಿ ನಿರ್ಧರಿಸಿದೆ. ಡಿಪೋಗೆ ಬರುತ್ತಿದ್ದಂತೆ ಬಸ್ಸುಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ, ನಂತರ ರೆಗುಲರ್ ರೂಟ್’ಗೆ ಬಸ್ಸುಗಳನ್ನು ಕಳುಹಿಸಲು ಯೋಜಿಸಲಾಗಿದೆ.
ಪ್ರಭಾವಿ ಮುಖಂಡರಿಂದ ವ್ಯವಸ್ಥೆ
ಪ್ರತಿ ವರ್ಷ ಸಾವಿರಾರು ಮಹಿಳೆಯರು ಓಂ ಶಕ್ತಿ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಮಾಲಾಧಾರಣೆ ಮಾಡಿ, ಮಡಿಯಿಂದ ಇದ್ದು ದೇವಿಯ ದರ್ಶನಕ್ಕೆ ತೆರಳುತ್ತಾರೆ. ವರ್ಷದಿಂದ ವರ್ಷಕ್ಕೆ ಶಿವಮೊಗ್ಗದಲ್ಲಿ ಓಂ ಶಕ್ತಿಗೆ ತೆರಳುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಪ್ರಭಾವಿ ಮುಖಂಡರೊಬ್ಬರು ಓಂ ಶಕ್ತಿ ದರ್ಶನಕ್ಕೆ ಬಸ್ಸುಗಳ ಉಚಿತ ವ್ಯವಸ್ಥೆ ಮಾಡಿಕೊಡುತ್ತಾರೆ. ಈ ಭಾರಿಯೂ ಬಸ್ಸುಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಮಹಿಳೆಯರು ತಮಿಳುನಾಡಿನ ಮೇಲ್ ಮರತ್ತೂರಿನಲ್ಲಿ ಓಂ ಶಕ್ತಿ ದೇವಿಯ ದರ್ಶನ ಪಡೆಯುತ್ತಾರೆ. ಬಳಿಕ ಕುಂಬಕೋಣಂ, ಶ್ರೀರಂಗಂ, ತಿರುವಣ್ಣಾಮಲೈ ಬಳಿಕ ರಾಜ್ಯದ ಕೆಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ, ಶಿವಮೊಗ್ಗಕ್ಕೆ ಮರಳುತ್ತಿದ್ದಾರೆ. ವಿವಿಧ ಜಿಲ್ಲೆಯಿಂದ ಓಂ ಶಕ್ತಿ ತೀರ್ಥಯಾತ್ರೆಗೆ ತೆರಳಿದ್ದ ಮಹಿಳೆಯರಲ್ಲಿ ಕರೋನ ಪಾಸಿಟಿವ್ ಬಂದ ಹಿನ್ನೆಲೆ, ಶಿವಮೊಗ್ಗದ ಜನರಲ್ಲಿ ಭೀತಿ ಎದುರಾಗಿದೆ. ಓಂ ಶಕ್ತಿ ತೀರ್ಥಯಾತ್ರೆಯ ಬಳಿಕ ಹಿಂತಿರುಗುತ್ತಿರುವ ಮಹಿಳೆಯರ ಪರೀಕ್ಷೆ ಮಾಡಲಾಗುತ್ತಿದೆ.
ಇದನ್ನೂ ಓದಿ | ಸರ್ಕಾರದಿಂದ ಮತ್ತಷ್ಟು ಟಫ್ ರೂಲ್ಸ್, ಶಿವಮೊಗ್ಗ ಜಿಲ್ಲೆಗೆ ಯಾವುದೆಲ್ಲ ಅನ್ವಯವಾಗುತ್ತೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422