ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ನವೆಂಬರ್ 2021
ಬಲಿಪಾಡ್ಯಮಿ ಗೋ ಪೂಜೆ ಸಂದರ್ಭ ಪೂಜೆ ಮಾಡಿಸಿಕೊಂಡ ಗೋವುಗಳು ಕೆಲವೇ ಹೊತ್ತಿನಲ್ಲಿ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ. ಘನ ತ್ಯಾಜ್ಯ ವಿಲೇವಾರಿಯಲ್ಲಿನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಜನರು ಆರೋಪಿಸಿದ್ದಾರೆ.
![]() |
ಶಿವಮೊಗ್ಗದ ಅನುಪಿನಕಟ್ಟೆ ಗ್ರಾಮದಲ್ಲಿ ಇವತ್ತು ಐದಕ್ಕೂ ಹೆಚ್ಚು ಗೋವುಗಳು ಸಾವನ್ನಪ್ಪಿವೆ. ಇನ್ನಷ್ಟು ಗೋವುಗಳು ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಪಶುವೈದ್ಯರು ಮತ್ತು ಸಿಬ್ಬಂದಿ ಮನೆಗೆ ಮೆನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಗೋವುಗಳ ಮೂಖರೋಧನೆ ಕಂಡು ಅವುಗಳನ್ನು ಸಾಕಿದ್ದವರು ಆಕ್ರೋಶ ಇಮ್ಮಡಿಯಾಗಿದೆ.
ಏನಿದು ಘಟನೆ? ಯಾಕಾಯ್ತು ಹೀಗೆ?
ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವಿದೆ. ಶಿವಮೊಗ್ಗ ನಗರದಲ್ಲಿ ಉತ್ಪತ್ತಿಯಾಗುವ ತ್ಯಜ್ಯದ ವಿಲೇವಾರಿ ಪ್ರಕ್ರಿಯೆ ಇಲ್ಲಿಯೇ ನಡೆಯಲಿದೆ. ತ್ಯಾಜ್ಯ ತುಂಬಿಕೊಂಡು ಬರುವ ವಾಹನಗಳು ಘಟಕದಲ್ಲಿ ತ್ಯಾಜ್ಯ ಸುರಿಯುವ ಬದಲು, ತುಂಗಾ ಎಡದಂಡೆ ಕಾಲುವೆ ಮೇಲೆ ಸುರಿದು ಹೋಗುತ್ತಿರುವ ಆರೋಪವಿದೆ. ಹೀಗೆ ಸುರಿದ ಕಸದ ರಾಶಿ ಮಧ್ಯೆ ಇದ್ದ ಆಹಾರ ಪದಾರ್ಥ ಸೇವಿಸಿ ಹಸುಗಳು ಸಾವನ್ನಪ್ಪಿವೆ.
ಮೇಯಲು ಹೋದ ಹಸುಗಳು ಮೇಲೇಳುತ್ತಿಲ್ಲ
ಅನುಪಿನಕಟ್ಟೆ ಗ್ರಾಮಸ್ಥರು ನಿತ್ಯ ಹಸುಗಳನ್ನು ಮೇಯಲು ಬಿಡುತ್ತಾರೆ. ಚಾನಲ್ ಸುತ್ತಮುತ್ತಲ ಪ್ರದೇಶದಲ್ಲಿ ಮೇಯಲು ಹೋಗಿ, ಹಿಂತಿರುಗಿದ್ದ ಹಸುಗಳು ಕೊಟ್ಟಿಗೆಯಲ್ಲಿ ಮಲಗಿದ್ದವು ಈಗ ಮೇಲೇಳದ ಸ್ಥಿತಿಗೆ ತಲುಪಿವೆ. ಸುಮಾರು ಐದು ಗೋವುಗಳು ಕೊಟ್ಟಿಗೆಯಲ್ಲೇ ಪ್ರಾಣ ಕಳೆದುಕೊಂಡಿವೆ. ಇನ್ನಷ್ಟು ಗೋವುಗಳು ಕುಳಿತಲ್ಲೆ ನರಳಾಡುತ್ತಿವೆ. ಕೆಲವು ದನಗಳು ಬಾಯಲ್ಲಿ ಹುಲ್ಲನ್ನು ಗಟ್ಟಿಯಾಗಿ ಕಚ್ಚಿಕೊಂಡು ನುಂಗಲಾಗದೆ, ಉಗುಳಲಾರದೆ ಒದ್ದಾಡುತ್ತಿವೆ. ಕೆಲವು ದನಗಳ ಪಕ್ಕದಲ್ಲಿ ಕೆಲವು ದಿನದ ಹಿಂದಷ್ಟೆ ಜನ್ಮತಾಳಿದ ಕರುಗಳು ಏನೂ ಅರಿವಾಗದೆ ಗೊಂದಲದಲ್ಲಿ ನಿಂತಿವೆ.
ಹಳಸಿದ ಅನ್ನ, ಆಹಾರ ಪದಾರ್ಥಗಳು
ಕಸ ಸಂಗ್ರಹ ಮಾಡಿದ ವಾಹನಗಳು ಬೆಳಗ್ಗೆ ಮತ್ತು ರಾತ್ರಿ ವೇಳೆ ವಿಲೇವಾರಿ ಘಟಕಕ್ಕೆ ಬರುತ್ತವೆ. ‘ಪಾಲಿಕೆ ವಾಹನಗಳು ತ್ಯಾಜ್ಯ ವಿಲೇವಾರಿ ಮಾಡಲು ಬರುತ್ತವೆ. ಕೆಲವರು ಕಲ್ಯಾಣ ಮಂಟಪ, ಕಾರ್ಯಕ್ರಮದಲ್ಲಿ ಉಳಿದ ಆಹಾರವನ್ನು ತಂದು ಚಾನಲ್ ಪಕ್ಕದಲ್ಲಿ ಸುರಿದು ಹೋಗುತ್ತಾರೆ. ನಾವು ಎಷ್ಟೆ ನಿಗಾ ವಹಿಸಿದರು ತಡೆಯಲು ಆಗುತ್ತಿಲ್ಲ. ದನಗಳನ್ನು ಮೇಯಲು ಬಿಟ್ಟಾಗ, ಅವು ಈ ಆಹಾರವನ್ನು ಸೇವಿಸುತ್ತವೆ’ ಎಂದು ಆರೋಪಿಸುತ್ತಾರೆ ಸ್ಥಳೀಯರಾದ ಸುರೇಶ್.
ಗೋವುಗಳ ಜೊತೆ ಜೀವನವು ಹೋಯ್ತು
ಅನುಪಿನಕಟ್ಟೆಯಲ್ಲಿ ಬಹುತೇಕರು ಬ್ಯಾಂಕು, ಸ್ವ ಸಹಾಯ ಸಂಘಗಳಲ್ಲಿ ಸಾಲ ಮಾಡಿ ಗೋವುಗಳನ್ನು ಖರೀದಿಸಿದ್ದರು. ಹಾಲು ಕರೆದು ಜೀವನ ನಡೆಸುತ್ತಿದ್ದರು. ಈಗ ಪ್ರೀತಿಯ ಗೋವುಗಳನ್ನು ಕಳೆದುಕೊಂಡು ಜನರು ಕಣ್ಣೀರು ಹಾಕುತ್ತಿದ್ದಾರೆ. ‘ಸಂಘದಿಂದ 50 ಸಾವಿರ ಸಾಲ ತಗೆದುಕೊಂಡು ಹಸು ಖರೀದಿ ಮಾಡಿದ್ದೆವು. ಆದರೆ ಈಗ ಹೀಗಾಗಿದೆ. ನಾವು ನಿನ್ನೆ ಹಬ್ಬ ಮಾಡಿಲ್ಲ. ಹಸುವಿನ ಆರೈಕೆ ಮಾಡಿಕೊಂಡಿದ್ದೇವೆ. ಹಸುವಿನಿಂದಲೇ ನಮ್ಮ ಜೀವನ ನಡೆಯುತ್ತಿತ್ತು. ಈಗ ಅದಿಲ್ಲ’ ಎಂದು ಗದ್ಗದಿತರಾಗುತ್ತಾರೆ ದಾನಮ್ಮ.
ಸ್ಥಳಕ್ಕೆ ಉಪ ಮೇಯರ್, ಪೊಲೀಸ್ ಭೇಟಿ
ಸಾಲು ಸಾಲು ಗೋವುಗಳು ಸಾವನ್ನಪ್ಪುತ್ತಿದ್ದಂತೆ ಅನುಪಿನಕಟ್ಟೆ ಗ್ರಾಮಸ್ಥರು ಆಕ್ರೋಶಗೊಂಡರು. ಬೀದಿಗಿಳಿದು ಪ್ರತಿಭಟನೆ ಆರಂಭಿಸಿದರು. ಕಸ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಇನ್ಸ್’ಪೆಕ್ಟರ್ ದೀಪಕ್ ಸ್ಥಳಕ್ಕೆ ಭೇಟಿ ನೀರಿ ಪರಿಶೀಲಿಸಿದರು.
ಇನ್ನು, ಉಪ ಮೇಯರ್ ಶಂಕರ್ ಗನ್ನಿ ಅವರು ಸ್ಥಳಕ್ಕೆ ಭೇಟಿ ನೀಡಿರ ಅಹವಾಲು ಆಲಿಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಉಪ ಮೇಯರ್ ಶಂಕರ್ ಗನ್ನಿ, ‘ಮಹಾನಗರ ಪಾಲಿಕೆಯಿಂದ ಜನರಿಗೆ ನ್ಯಾಯ ಕೊಡಿಸುತ್ತೇವೆ. ಸಂಬಂಧಿಸಿದ ಅಧಿಕಾರಿಗಳು ಕೂಡ ಇಲ್ಲಿಗೆ ಬಂದಿದ್ದಾರೆ. ಯಾರಿಗೆಲ್ಲ ಸಮಸ್ಯೆಯಾಗಿದೆ ಅನ್ನುವ ಕುರಿತು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಪಾಲಿಕೆಯಿಂದ ಜವಾಬ್ದಾರಿಯಿಂದ ನಿಭಾಯಿಸುತ್ತೇವೆ’ ಎಂದು ತಿಳಿಸಿದರು.
ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಬಗ್ಗೆ ಈ ಹಿಂದೆ ಹಲವು ಭಾರಿ ಪ್ರತಿಭಟನೆಗಳು ನಡೆದಿವೆ. ಈಗ ಹಸುಗಳು ಸಾವನ್ನಪ್ಪಿರುವುದು ಅನುಪಿನಕಟ್ಟೆ ಗ್ರಾಮದ ಹಲವು ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದೆ. ಇನ್ನಾದರೂ ಮಹಾನಗರ ಪಾಲಿಕೆ ಈ ಕುರಿತು ಸೂಕ್ತ ಗಮನ ಹರಿಸಬೇಕಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200