SHIVAMOGGA LIVE NEWS | LITERATURE | 19 ಮೇ 2022
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ (70) ಅವರು ಶಿವಮೊಗ್ಗದಲ್ಲಿ ನಿಧನರಾಗಿದ್ದಾರೆ.
ವಿನೋಬನಗರದ ಕಲ್ಲಹಳ್ಳಿಯಲ್ಲಿರುವ ಅವರ ಮನೆಯಲ್ಲಿ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಸವಿತಾ ಮತ್ತು ಸಾಹಿತ್ಯ ಅಭಿಮಾನಿಗಳನ್ನು ಅವರು ಅಗಲಿಸಿದ್ದಾರೆ. ಸಂಜೆವರೆಗೂ ಕಲ್ಲಹಳ್ಳಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೂಲತಃ ಬೆಂಗಳೂರಿನವರು
ಡಿ.ಎಸ್.ನಾಗಭೂಷಣ್ ಅವರು ಮೂಲತಃ ಬೆಂಗಳೂರಿನ ಹೊಸಕೋಟೆ ತಾಲೂಕಿನ ತಿಮ್ಮಸಂದ್ರದವರು. 1952ರ ಫೆಬ್ರಬರಿ 1ರಂದು ಜನನ. 1973ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1975 ರಿಂದ 2005ರವರೆಗೆ ಆಕಾಶವಾಣಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು.
ಸ್ವಯಂ ನಿವೃತ್ತಿ ಪಡೆದು ಪತ್ನಿ ಸವಿತಾ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು.
ಸಮಾಜವಾದಿ ಚಿಂತಕರು
ಸಮಾಜವಾದಿ ಚಿಂತನೆ ಮತ್ತು ಚರ್ಚೆಗಳ ವಿಚಾರದಲ್ಲಿ ಡಿ.ಎಸ್.ನಾಗಭೂಷಣ್ ಅವರ ಹೆಸರು ಮುಂಚೂಣಿಯಲ್ಲಿರುತ್ತಿತ್ತು. ಅಲ್ಲದೆ ಬರಹಗಳ ಮೂಲಕವು ಅವರು ಗುರುತಿಸಿಕೊಂಡಿದ್ದರು. ಇಂದಿಗೆ ಬೇಕಾದ ಗಾಂಧಿ, ಲೋಹಿಯಾ ಜೊತೆಯಲ್ಲಿ, ರೂಪ ರೂಪಗಳನ್ನು ದಾಟಿ, ಕುವೆಂಪು ಒಂದು ಪುನರನ್ವೇಷಣೆ, ಕುವೆಂಪು ಸಾಹಿತ್ಯ ದರ್ಶನ, ಜಯಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ, ನಮ್ಮ ಶಾಮಣ್ಣ, ಕನ್ನಡದ ಮನಸು ಮತ್ತು ಇತರೆ ಲೇಖನಗಳು, ಕಾಲಗ್ರಾಮ, ಮರಳಿ ಬರಲಿದೆ ಸಮಾಜವಾದ ಸೇರಿದಂತೆ ಹಲವರು ಕೃತಿಗಳನ್ನು ರಚಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಡಿ.ಎಸ್.ನಾಗಭೂಷಣ್ ಅವರ ಗಾಂಧಿ ಕಥನಕ್ಕೆ ಕೇಂದ್ರ ಸಾಹಿತ್ಯ (LITERATURE) ಅಕಾಡೆಮಿಯು 2021ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಮಹಾತ್ಮ ಗಾಂಧೀಜಿ ಅವರ ಬದುಕಿನ ವಿವರನ್ನು ಕಟ್ಟಿಕೊಡುವ ಅಪರೂಪದ ಕೃತಿ ಇದಾಗಿತ್ತು. ಇದು ಹಲವು ಭಾರಿ ಮರು ಮುದ್ರಣವನ್ನು ಕಂಡಿತ್ತು. ಅನೇಕ ಸಾಹಿತ್ಯ ಪ್ರಶಸ್ತಿಗಳು, ವಿವಿಧ ಸಂಘಟನೆಗಳಿಂದಲು ಡಿ.ಎಸ್.ನಾಗಭೂಷಣ್ ಅವರಿಗೆ ಗೌರವ ಸಲ್ಲಿಸಿದ್ದವು.
ನೇರ ನುಡಿ ಮತ್ತು ಸಮಕಾಲಿನ ವಿಚಾರಗಳ ಪ್ರಖರ ವಿಶ್ಲೇಷಣೆ ಮತ್ತು ವಿಮರ್ಶೆ ಮಾಡುತ್ತಿದ್ದರು. ಹೊಸ ಮನುಷ್ಯ ಎಂಬ ಮಾಸಿಕ ಪತ್ರಿಕೆಗೆ ಸತತ 10 ವರ್ಷ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.
ಇವತ್ತು ಸಂಜೆ ಶಿವಮೊಗ್ಗ ರೋಟರಿ ಚಿತಾಗಾರದಲ್ಲಿ ಡಿ.ಎಸ್.ನಾಗಭೂಷಣ್ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.
ಗಣ್ಯರ ಕಂಬನಿ
ಡಿ.ಎಸ್.ನಾಗಭೂಷಣ್ ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
‘ಅನ್ಯಾಯ, ಅಸಮಾನತೆ ಮತ್ತು ಆತ್ಮವಂಚಕ ನಡವಳಿಕೆಗಳ ವಿರುದ್ಧದ ಹೋರಾಟಕ್ಕೆ, ಸಮಾಜವಾದಿ ಚಿಂತನೆಗಳನ್ನು ಅಸ್ತ್ರವಾಗಿ ಬಳಸುತ್ತಾ ಬಂದಿದ್ದ ಆತ್ಮೀಯರಾಗಿದ್ದ ಡಿ.ಎಸ್.ನಾಗಭೂಷಣ್ ಅವರ ಅಗಲಿಕೆಯಿಂದ ಆಘಾತಕ್ಕೀಡಾಗಿದ್ದೇನೆ. ಅವರ ಪತ್ನಿ ಮತ್ತು ಗೆಳೆಯರೆಲ್ಲರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಡಿ.ಎಸ್.ನಾಗಭೂಷಣ್ ಅವರ ‘ಗಾಂಧಿ ಕಥನ’ ವನ್ನು ಪ್ರೀತಿಯಿಂದ ಕಳಿಸಿಕೊಟ್ಟಿದ್ದರು. ಅದನ್ನು ಓದುತ್ತಿದ್ದೇನೆ ಎಂದಾಗ ಖುಷಿಪಟ್ಟಿದ್ದರು. ಲೋಹಿಯಾ ಚಿಂತನೆಯ ಪುಸ್ತಕಗಳೂ ಸೇರಿದಂತೆ ಅವರ ಎಲ್ಲ ಕೃತಿಗಳ ಮೂಲಕ ನಾಗಭೂಷಣ್ ನಮ್ಮ ನೆನಪಲ್ಲಿ ಸದಾ ಹಸಿರಾಗಿರುತ್ತಾರೆ.’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಎಸ್.ನಾಗಭೂಷಣ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
‘ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಹಾಗೂ ಸಾಮಾಜಿಕ ಚಿಂತಕ ಡಿ.ಎಸ್. ನಾಗಭೂಷಣ ಅವರು ಕಾಲವಾದ ವಿಷಯ ತಿಳಿದು ಬೇಸರವಾಯಿತು. ಗಾಂಧಿ ಚಿಂತನೆಗಳ ಬಗ್ಗೆ ಮತ್ತಷ್ಟು ಅರಿವು ಮೂಡಿಸಿದ ಅವರ ಅಗಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200