SHIVAMOGGA LIVE NEWS | 23 NOVEMBER 2023
SHIMOGA : ಬೆಂಗಳೂರಿನ ಕಾಡುಗೋಡಿಯಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗು ಧಾರುಣವಾಗಿ ಸಾವನ್ನಪ್ಪಿದ ಘಟನೆ ರಾಜ್ಯವನ್ನು ತಲ್ಲಣಗೊಳಿಸಿದೆ. ಇದೆ ಮಾದರಿ ವಿದ್ಯುತ್ ಅವಘಡ ಶಿವಮೊಗ್ಗದಲ್ಲಿ ಸಂಭವಿಸಿದರು ಆಶ್ಚರ್ಯ ಪಡುವಂತಿಲ್ಲ.
![]() |
ನಗರದ ವಿವಿಧೆಡೆ ವಿದ್ಯುತ್ ತಂತಿ, ಸ್ವಿಚ್ ಬೋರ್ಡ್‌ಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಸ್ವಲ್ಪ ಯಾಮಾರಿದರು ಅವಘಡ ನಿಶ್ಚಿತ.
ಶಿವಮೊಗ್ಗದಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ಸ್ಯಾಂಪಲ್
ಸ್ಯಾಂಪಲ್ 1 : ಬೀದಿ ದೀಪಗಳ ಕಂಬಗಳು
ಇದು ಶಿವಮೊಗ್ಗದ ವಿದ್ಯಾನಗರದ ಬಿ.ಹೆಚ್.ರಸ್ತೆಯ ಡಿವೈಡರ್ ಮೇಲಿರುವ ಬೀದಿ ದೀಪದ ಕಂಬದ ಪರಿಸ್ಥಿತಿ. ಹಲವು ಕಂಬಗಳಲ್ಲಿ ಪ್ಲಗ್‌ಗಳಿಗೆ ಅಳವಡಿಸಿರುವ ಲಾಕರ್ ಮಾದರಿ ಬಾಗಿಲು ತೆರೆದುಕೊಂಡಿವೆ. ಪ್ಲಗ್‌ಗಳು ಸುಲಭಕ್ಕೆ ಕೈಗೆ ಸಿಗುತ್ತವೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲು ಇದೆ ಪರಿಸ್ಥಿತಿ ಇದೆ. ಈ ಕಂಬಗಳಿಗೆ ಫ್ಲೆಕ್ಸ್, ಪ್ರಮುಖ ಸಂದರ್ಭದಲ್ಲಿ ಬಾಳೆ ಕಂಬ ಕಟ್ಟಲಾಗುತ್ತದೆ. ಸ್ವಲ್ಪ ಮೈಮರೆತರು ಅವಘಡ ತಪ್ಪಿದ್ದಲ್ಲ.
ಸ್ಯಾಂಪಲ್ 2 : ಸ್ವಿಚ್ ಬೋರ್ಡ್ ಬಾಕ್ಸ್
ರೈಲ್ವೆ ನಿಲ್ದಾಣದ ಸಮೀಪ ಮೆಸ್ಕಾಂ ಕಚೇರಿ ಎದುರಿನ ಡಿವೈಡರ್ ಮೇಲಿರುವ ಸ್ವಿಚ್ ಬಾಕ್ಸ್‌ನ ಪರಿಸ್ಥಿತಿ ಇದು. ಈ ಬಾಕ್ಸ್‌ಗೆ ಒಂದು ಬಾಗಿಲಿಲ್ಲ. ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ಬರುವ ವಾಹನಗಳು ಈ ಸ್ವಿಚ್ ಬಾಕ್ಸ್ ಪಕ್ಕದಲ್ಲಿಯೇ ನಿಲ್ಲುತ್ತವೆ.
ಸ್ಯಾಂಪಲ್ 3 : ಕೈಗೆಟುಕುವ ಸ್ಥಿತಿಯಲ್ಲಿ ವಯರ್
ಇದು ಜಿಲ್ಲಾಧಿಕಾರಿ ಮನೆ ಮುಂಭಾಗ ಸೈನಿಕ ಪಾರ್ಕ್ ಪಕ್ಕದ ವಿದ್ಯುತ್ ಕಂಬ. ವಿದ್ಯುತ್ ದೀಪಕ್ಕೆ ಕರೆಂಟ್ ವಯರ್‌ನಿಂದ ಸಂಪರ್ಕ ಕಲ್ಪಿಸಲಾಗಿದೆ. ಇದರ ವಯರ್ ಕೈಗೆಟುಕುವ ಸ್ಥಿತಿಯಲ್ಲಿದೆ.
ಸ್ಯಾಂಪಲ್ 4 : ಭೂಗತ್ ಕೇಬಲ್‌ಗಳ ಭೀತಿ
ಇದು ಕುವೆಂಪು ರಸ್ತೆಯ ಸಾಯಿವರಂ ಹೊಟೇಲ್ ಮುಂಭಾಗ ಸ್ಮಾರ್ಟ್ ಸಿಟಿ ಭೂಗತ ಕೇಬಲ್‌ನ ಪರಿಸ್ಥಿತಿ. ಫುಟ್ ಪಾತ್ ಮೇಲೆ ಈ ಕೇಬಲ್‌ಗಳು ಆಪಾಯಕಾರಿ ಸ್ಥಿತಿಯಲ್ಲಿವೆ. ಇದಕ್ಕೆ ವಿದ್ಯುತ್ ಸಂಪರ್ಕ ಇದೆಯೋ ಇಲ್ಲವೊ ಅನ್ನುವುದು ತಿಳಿದಿಲ್ಲ. ಆದರೆ ಇವುಗಳ ಪರಿಸ್ಥಿತಿ ಜನರಲ್ಲಿ ಆತಂಕ ಮೂಡಿಸಿದೆ.
ಸ್ಯಾಂಪಲ್ 5 : ಕೇಬಲ್ ವಯರ್‌ಗಳ ಭೀತಿ
ನಗರದ ವಿವಿಧೆಡೆ ವಿದ್ಯುತ್ ಕಂಬಗಳಲ್ಲಿ ಹಲವು ಕೇಬಲ್ ವಯರ್‌ಗಳನ್ನ ಎಳೆಯಲಾಗಿದೆ. ಈ ವಯರ್‌ಗಳು ಆಗಾಗ ತುಂಡಾಗಿ ಬೀಳುತ್ತಿವೆ. ಇದರಿಂದ ಕರೆಂಟ್ ಶಾಕ್ ಹೊಡೆಯಬಹುದು ಎಂಬ ಭೀತಿ ಸಾರ್ವಜನಿಕರದ್ದು. ವಿವಿಧೆಡೆ ವಿದ್ಯುತ್ ವಯರ್ ಮತ್ತು ಕೇಬಲ್ ವಯರ್‌ಗಳು ತೀರ ಸಮೀಪದಲ್ಲಿ ಇರಲಿದೆ. ಹಾಗಾಗಿ ಸ್ವಲ್ಪ ಯಾಮಾರಿದರೆ ಅವಘಡ ಸಂಭವಿಸಬಹುದು.
ಏಳು ತಿಂಗಳಲ್ಲಿ 18 ಸಾವು
ಮೆಸ್ಕಾಂ ಶಿವಮೊಗ್ಗ ವೃತ್ತ ವ್ಯಾಪ್ತಿಯಲ್ಲಿ ಕಳೆದ ಏಳು ತಿಂಗಳಲ್ಲಿ ವಿದ್ಯುತ್ ಅವಘಡಕ್ಕೆ 18 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರು ಮೆಸ್ಕಾಂ ಸಿಬ್ಬಂದಿಗಳು. 33 ಜಾನುವಾರುಗಳು ವಿದ್ಯುತ್ ಶಾಕ್‌ಗೆ ಬಲಿಯಾಗಿವೆ. ಮೆಸ್ಕಾಂ ಇಲಾಖೆಯ ವಿದ್ಯುತ್ ಸಂಪರ್ಕದ ಶಾಕ್‌ಗೆ ಏಪ್ರಿಲ್ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಜೂನ್, ಜುಲೈನಲ್ಲಿ ತಲಾ ಒಬ್ಬರು ಮತ್ತು ಸೆಪ್ಟಂಬರ್‌ನಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಇಲಾಖೇತರ ವಿದ್ಯುತ್ ಸಂಪರ್ಕದ ಶಾಕ್‌ಗೆ ಏಪ್ರಿಲ್, ಜುಲೈ, ಆಗಸ್ಟ್ ತಿಂಗಳಲ್ಲಿ ತಲಾ ಒಬ್ಬರು, ಮೇ, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ತಲಾ ಮೂವರು, ಜೂನ್ ತಿಂಗಳಲ್ಲಿ ನಾಲ್ವರು ಸೇರಿ ಒಟ್ಟು 16 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ನಾಲ್ವರು ಗಾಯಗೊಂಡಿದ್ದಾರೆ. ಇನ್ನು, ಜುಲೈನಲ್ಲಿ 13, ಮೇನಲ್ಲಿ 8 ಸೇರಿ ಒಟ್ಟು 33 ಜಾನುವಾರುಗಳು ಸಾವನ್ನಪ್ಪಿವೆ.
ಅವಘಡಕ್ಕು ಮೊದಲು ಎಚ್ಚೆತ್ತುಕೊಳ್ಳಬೇಕಿದೆ
ಮೇಲಿನವುಗಳು ಕೇವಲ ಉದಾಹರಣೆ. ನಗರದ ವಿವಿಧೆಡೆ ಇಂತಹ ದೂರುಗಳಿವೆ. ಮೆಸ್ಕಾಂ ಮತ್ತು ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡರೆ ಬೆಂಗಳೂರಿನ ಕಾಡುಗೋಡಿ ಮಾದರಿ ದುರಂತ ತಡೆಯಬಹುದು.
ಇದನ್ನೂ ಓದಿ – ಅಡಿಕೆ ಮಂಡಿ ಮಾಲೀಕನಿಗೆ ಕೋಟಿ ಕೋಟಿ ವಂಚನೆ, ದೂರು ನೀಡಿದ್ರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200