ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 FEBRUARY 2024
SHIMOGA : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ದೆಹಲಿಯಲ್ಲಿ ರೈತರ ಮೇಲಿನ ಪೊಲೀಸರ ದೌರ್ಜನ್ಯ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ, ಸಿಐಟಿಯು ಕಾರ್ಮಿಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕಾಯ್ದೆಗಳ ವಿರುದ್ಧ 13 ತಿಂಗಳು ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗಿತ್ತು. ಆದರೆ ಉಳಿದ ಬೇಡಿಕೆಗಳನ್ನು ಈಡೇರಿಸಿಲ್ಲ. ಇನ್ನು, ಆ ಸಂದರ್ಭ ರೈತರ ಮೇಲೆ ಹಾಕಲಾಗಿದ್ದ ಕೇಸ್ಗಳನ್ನು ಹಿಂಪಡೆದಿಲ್ಲ. ಇದನ್ನು ಖಂಡಿಸಿ ರೈತರು ಪುನಃ ಪ್ರತಿಭಟನೆ ಆರಂಭಿಸಿದ್ದು, ಅವರ ವಿರುದ್ಧ ದೆಹಲಿಯಲ್ಲಿ ಕೇಂದ್ರ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ಮಾಡಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಬೇಕು. ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳ ಮಾಡಬೇಕು. ಪಿಎಂ ಫಸಲ್ ಭೀಮಾ ಯೋಜನೆ ಬದಲು ಎಲ್ಲ ಬೆಳೆಗಳಿಗು ವಿಮೆ ಒದಗಿಸಬೇಕು. ಸಮಗ್ರ ಸಾಲ ಮನ್ನಾ ಯೋಜನೆ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಹಸಿರು ಸೇನೆ ಮತ್ತು ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಡಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ, ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಸಿಐಟಿಯು ಸಂಘಟನೆಯ ಮುಖಂಡರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಿಂದ ಮಂಗಳೂರಿಗೆ ನಾಳೆ 8 ಸಾವಿರ ಮಂದಿ, ಗ್ಯಾರಂಟಿ ಯೋಜನೆ ಕುರಿತು ಮಹತ್ವದ ಚರ್ಚೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422