ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 JANUARY 2023
ಶಿವಮೊಗ್ಗ : ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಅವಘಡ (firing) ಇಬ್ಬರನ್ನು ಬಲಿ ಪಡೆದಿದೆ. ಎರಡು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.
ಶಿವಮೊಗ್ಗದ ವಿದ್ಯಾನಗರದಲ್ಲಿ ಕಳೆದ ರಾತ್ರಿ ಸಂಭವಿಸಿದ ದುರ್ಘಟನೆಯಲ್ಲಿ (firing) ಉದ್ಯಮಿ ಮಂಜುನಾಥ್ ಓಲೇಕರ್ ಮತ್ತು ವಿನಯ್ ಎಂಬುವವರು ಸಾವನ್ನಪ್ಪಿದ್ದಾರೆ. ಸಂಭ್ರಮಾಚರಣೆಯ ಮೂಡ್ ನಲ್ಲಿದ್ದ ಮನೆಗೆ ಕೆಲವೆ ನಿಮಿಷದಲ್ಲಿ ಸೂತಕದ ಛಾಯೆ ಆವರಿಸಿದೆ.
ಹೇಗಾಯ್ತು ಘಟನೆ? (firing)
ಗೋಪಾಲ್ ಗ್ಲಾಸ್ ಹೌಸ್ ಮಾಲೀಕ ಮಂಜುನಾಥ್ ಓಲೇಕರ್ ಅವರ ಮನೆಯಲ್ಲಿ ಹೊಸ ವರ್ಷದ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಮಂಜುನಾಥ್ ಓಲೇಕಾರ್ (67), ಅವರ ಮಗ ಮತ್ತು ಆತನ ಸ್ನೇಹಿತರು ಮನೆಯಲ್ಲಿ ಪಾರ್ಟಿ ನಡೆಸುತ್ತಿದ್ದರು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕಮಾರ್ ತಿಳಿಸಿದ್ದಾರೆ.
12 ಗಂಟೆಗೆ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಲು ಪ್ರಯತ್ನಿಸಿದ್ದಾರೆ. ‘ಮಂಜುನಾಥ ಓಲೇಕರ್ ಅವರು ಬಂದೂಕಿಗೆ ಬುಲೆಟ್ ಲೋಡ್ ಮಾಡುವ ಹೊತ್ತಿಗೆ ಫೈರ್ ಆಗಿದೆ. ಆ ಗುಂಡು ವಿನಯ್ (34) ಎಂಬುವವರಿಗೆ ತಗುಲಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.
ವಿನಯ್ ಗೆ ಗಂಭೀರ ಗಾಯ (firing)
ಮಂಜುನಾಥ ಓಲೇಕರ್ ಅವರ ಮಗನ ಸ್ನೇಹಿತ ವಿನಯ್, ರಾತ್ರಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಬಂದೂಕಿನಿಂದ ಸಿಡಿದ ಗುಂಡು ವಿನಯ್ ಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೆ ವಿನಯ್ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಯಿತು.
ನಿಂತೆ ಹೋಯ್ತು ಹೃದಯ (firing)
ಗುಂಡು ತಗುಲಿ ವಿನಯ್ ಗೆ ಗಂಭೀರ ಗಾಯವಾಗಿದ್ದರಿಂದ ಮಂಜುನಾಥ್ ಓಲೇಕರ್ ಅವರು ಆತಂಕಕ್ಕೀಡಾದರು. ಘಟನೆ ಸಂಭವಿಸಿದ ಕೆಲವೆ ಹೊತ್ತಿನಲ್ಲಿ ಮಂಜುನಾಥ್ ಓಲೇಕರ್ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಂಜುನಾಥ ಓಲೇಕರ್ ಅವರು ಹೃಯದಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೊನೆಯುಸಿರೆಳೆದ ವಿನಯ್
ಇತ್ತ ಮ್ಯಾಕ್ಸ್ ಆಸ್ಪತ್ರೆಯಲ್ಲಿ ವಿನಯ್ ಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಗಂಭೀರ ಸ್ಥಿತಿಯಲ್ಲಿದ್ದರಿಂದ ವಿನಯ್ ನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ವಿನಯ್ ಇವತ್ತು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ಪಿಡಬ್ಲುಡಿ ಕ್ವಾರ್ಟರ್ಸ್ ನಿವಾಸಿಯಾಗಿದ್ದ ವಿನಯ್, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಪಿ.ಹೆಚ್.ಡಿ ಮಾಡುತ್ತಿದ್ದರು.
ದಿಕ್ಕು ತೋಚದಂತಾದ ಕುಟುಂಬಗಳು
ಸಂಭ್ರಮಾಚರಣೆ ವೇಳೆ ಸಂಭವಿಸಿದ ಅವಘಡ ಎರಡು ಕುಟುಂಬಗಳನ್ನು ದುಃಖದ ಮಡುವಿಗೆ ದೂಡಿದೆ. ವಿಷಯ ತಿಳಿಯುತ್ತಿದ್ದಂತೆ ಬೆಳಗ್ಗೆಯಿಂದಲೆ ಜನರು ಉದ್ಯಮಿ ಮಂಜುನಾಥ ಓಲೇಕಾರ್ ಅವರ ಮನೆ ಬಳಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಇತ್ತಿ ಮಧ್ಯಾಹ್ನದ ವೇಳೆ ವಿನಯ್ ಸಾವನ್ನಪ್ಪಿದ ವಿಷಯ ತಿಳಿದು ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ – ಶಿವಮೊಗ್ಗ ನಗರದ 19 ರಸ್ತೆಯಲ್ಲಿ ಸರಕು ಸಾಗಣೆ, ಭಾರಿ ವಾಹನ ಪ್ರವೇಶ ನಿಷೇಧ, ಸಂಚಾರಕ್ಕೆ ಟೈಮ್ ಫಿಕ್ಸ್
ಕುಟುಂಬದವರು ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ಮಂಜುನಾಥ್ ಓಲೇಕರ್ ಅವರ ಸಹೋದರ ಶ್ರೀನಾಥ್ ಅವರು, ಪ್ರತಿ ವರ್ಷ ಹೊಸ ವರ್ಷಾಚರಣೆ ಮಾಡುತ್ತಿದ್ದರು. ಎಲ್ಲರು ಒಟ್ಟಿಗೆ ಸೇರಿದ ಆಚರಣೆ ಮಾಡಲಾಗುತ್ತಿತ್ತು. ನನ್ನ ಅಣ್ಣ, ಅವರ ಸ್ನೇಹಿತರು, ಮಗನ ಸ್ನೇಹಿತರೆಲ್ಲ ಸೇರಿ ಪಾರ್ಟಿ ಮಾಡಿದ್ದಾರೆ. ಬಂದೂಕಿನಿಂದ ಗುಂಡು ಸಿಡಿದಿದೆ. ವಿನಯ್ ಅವರು ಹತ್ತಿರದಲ್ಲಿದ್ದಿದ್ದರಿಂದ ಅವರಿಗೆ ಗುಂಡು ತಗುಲಿದೆ’ ಎಂದು ತಿಳಿಸಿದರು.
ಘಟನೆಯ ಮಹಿತಿ ಲಭಿಸುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422