SHIVAMOGGA LIVE NEWS | 16 MAY 2024
SHIMOGA : ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಸುದ್ದಿಯಾಗುತ್ತಿದೆ. ಈ ಮಧ್ಯೆ ನಕ್ಸಲರ ಶರಣಾಗತಿ (Surrender) ಮತ್ತು ಪುನರ್ವಸತಿಗೆ ಸರ್ಕಾರ ರಾಜ್ಯಮಟ್ಟದ ಸಮಿತಿಯನ್ನು ಪುನರ್ ನೇಮಕ ಮಾಡಿದೆ. ಸಾಹಿತಿ, ಪ್ರಗತಿಪರ ಚಿಂತಕ ಬಂಜಗೆರೆ ಜಯಪ್ರಕಾಶ್, ಪತ್ರಕರ್ತ ಪಾರ್ವತೀಶ, ವಕೀಲ ಕೆ.ಪಿ.ಶ್ರೀಪಾಲ್ ಅವರನ್ನು ಸದಸ್ಯರಾಗಿ ನೇಮಿಸಿದೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಸ್ಯರು, ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿರುವವರು ಮುಖ್ಯವಾಹಿನಿಗೆ ಬರಲು ಆಸಕ್ತರಿದ್ದರೆ ಸಮಿತಿ ನೆರವು ನೀಡಲಿದೆ ಎಂದು ತಿಳಿಸಿದರು.
ಯಾರೆಲ್ಲ ಏನೇನು ಹೇಳಿದರು?
ಬಂಜಗೆರೆ ಜಯಪ್ರಕಾಶ್, ಪ್ರಗತಿಪರ ಚಿಂತಕ
ನಕ್ಸಲರ ಮುಂದಿನ ಜೀವನ, ಪುನರ್ವಸತಿಗೆ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ನಕ್ಸಲ್ ಚಟುವಟಿಯಿಂದ ಹೊರಬಂದು ಮುಖ್ಯವಾಹಿನಿಯಲ್ಲಿ ಇದ್ದು ಹೋರಾಟ ಮುಂದುವರೆಸಲು ಅವಕಾಶವಿದೆ. ಮುಖ್ಯವಾಹಿನಿಗೆ ಬಂದ ಮೇಲೆ ಕಾನೂನು ಪ್ರಕ್ರಿಯೆಗಳು ಮುಂದುವರೆಯಲಿವೆ. ಈಗಾಗಲೇ ಮುಖ್ಯವಾಹಿನಿಗೆ ಬಂದಿರುವವರು ಉತ್ತಮ ಜೀವನ ನಡೆಸುತ್ತಿದ್ದಾರೆ. ಮುಖ್ಯವಾಹಿನಿಗೆ ಬರುವವರು ತಮ್ಮನ್ನು ಸಂಪರ್ಕಿಸಬಹುದು.
ಪಾರ್ವತೀಶ, ಪತ್ರಕರ್ತ
ಈ ಹಿಂದೆ ಎರಡು ಬಾರಿ ಶರಣಾಗತಿ ಮತ್ತು ಪುನರ್ವಸತಿಗೆ ರಾಜ್ಯಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಆಗ 14 ಮಂದಿ ಸಶಸ್ತ್ರ ಹೋರಾಟ ತೊರೆದು ಮುಖ್ಯವಾಹಿನಿಗೆ ಬಂದಿದ್ದಾರೆ. ಈಗ ಸರ್ಕಾರ ಮುಕ್ತ ಅವಕಾಶ ನೀಡಿರುವುದು ಸ್ವಾಗತಾರ್ಹ. ಕರ್ನಾಟಕದಲ್ಲಿ ನಕ್ಸಲ್ ಹೋರಾಟ ಇಳಿಮುಖ ಆಗಿತ್ತು. ಕಳೆದ ತಿಂಗಳು ಮಲೆನಾಡಿನಲ್ಲಿ ಮತ್ತೆ ನಕ್ಸಲ್ ಇರುವಿಕೆ ಸುದ್ದಿಯಾಗಿದೆ. ರಾಜ್ಯದಲ್ಲಿ ಏಳರಿಂದ ಎಂಟು ನಕ್ಸಲರು ಇದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ. ಸಕಾರಾತ್ಮಕ ಪ್ರತಿಕ್ರಿಯೆ ಬಂದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯದ ನಕ್ಸಲರು ಮತ್ತು ಹೊರ ರಾಜ್ಯದ ನಕ್ಸಲರಿಗೆ ಪ್ರತ್ಯೇಕ ಪ್ಯಾಕೇಜ್ ಇರಲಿದೆ.
ಕೆ.ಪಿ.ಶ್ರೀಪಾಲ್, ವಕೀಲ
ನಕ್ಸಲರು ಶರಣಾದರೆ ನ್ಯಾಯಾಲಯದ ಕಲಾಪಗಳು ಅತ್ಯಂತ ವಿಳಂಬವಾಗಲಿದೆ ಎಂಬ ಅಭಿಪ್ರಾಯವಿದೆ. ಆದರೆ ಈಗಾಗಲೇ ಮುಖ್ಯವಾಹಿನಿಗೆ ಬಂದಿರುವ 14 ಮಂದಿ ಪೈಕಿ ಮೂವರ ಪ್ರಕರಣಗಳು ಮಾತ್ರ ವಿಚಾರಣೆಯಲ್ಲಿದೆ. ನಕ್ಸಲರ ಪ್ರಕರಣಗಳ ವಿಚಾರಣೆಗಳಿಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮುಖ್ಯವಾಹಿನಿಗೆ ಬರುವವರ ಪರ ವಾದಕ್ಕೆ ವಕೀಲರು ಕೂಡ ಸಿದ್ದರಿದ್ದಾರೆ.
ಇದನ್ನೂ ಓದಿ – ಲಾರಿಗೆ ಅಡಿಕೆ ತುಂಬುವಾಗ ಇದ್ದ ತೂಕ ಒಂದು, ಇಳಿಸುವಾಗ ಇದ್ದ ತೂಕ ಮತ್ತೊಂದು, ಮಧ್ಯದಲ್ಲಿ ಆಗಿದ್ದೇನು?
ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಒಳಾಡಳಿತ ಇಲಾಖೆಯ ಅಪರ ಕಾರ್ಯದರ್ಶಿ, ಡಿಜಿ ಮತ್ತು ಐಜಿಪಿ, ಗುಪ್ತವಾರ್ತೆ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥರು, ರಾಜ್ಯ ಗುಪ್ತವಾರ್ತೆ ವಿಭಾಗದ ಕೌಂಟರ್ ಇಂಟೆಲಿಜೆನ್ಸ್ ಉಪ ನಿರ್ದೇಶಕರು, ಪ್ರಗತಿಪರ ಚಿಂತಕ ಬಂಜಗೆರೆ ಜಯಪ್ರಕಾಶ್, ಪತ್ರಕರ್ತ ಪಾರ್ವತೀಶ, ವಕೀಲ ಕೆ.ಪಿ.ಶ್ರೀಪಾಲ್, ನಕ್ಸಲ್ ನಿಗ್ರಹ ದಳದ ಉಪ ಪೊಲೀಸ್ ಮಹಾ ನಿರೀಕ್ಷಕರು ಸಮಿತಿ ಸದಸ್ಯರಾಗಿರುತ್ತಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200