ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022
ಹಿಜಾಬ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕೆಲವರಿಗೆ ಪ್ರತಿಷ್ಠೆಯಾಗಿದೆ ಮಾರ್ಪಾಡಾಗಿದೆ. ಇದರ ಪರಿಣಾಮ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೋರಾಟ, ಗಲಭೆ ಶುರುವಾದಾಗಿನಿಂದ ಈ ಕುಟುಂಬಗಳಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೆ ಗತಿಯಾಗಿದೆ.
ಶಿವಮೊಗ್ಗದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿತ್ತು. ವಿದ್ಯಾರ್ಥಿಗಳು ಪರಸ್ಪರ ಜಗಳಕ್ಕಿಳಿದು, ಕಲ್ಲು ತೂರಾಟವಾಗಿತ್ತು. ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವಿವಾದ ಶುರುವಾದಾಗಿನಿಂದ ಶಿವಮೊಗ್ಗದ ಕೆಲವು ಬೀದಿ ಬದಿ ವ್ಯಾಪಾರಿಗಳ ಬದುಕು ಮೂರಾಬಟ್ಟೆಯಾಗಿದೆ.
ದುಡಿಮೆ ಆಗುತ್ತೋ? ಇಲ್ಲವೋ?
ಡಿ.ವಿ.ಎಸ್ ಕಾಲೇಜು ಸಮೀಪ ಮಲ್ಲಿಕಾರ್ಜುನ ಅವರ ಟೀ ಸ್ಟಾಲ್ ಇದೆ. ಹಲವು ವರ್ಷದಿಂದ ಇಲ್ಲಿ ಟೀ, ಕಾಫಿ ಮಾರಾಟ ಮಾಡುತ್ತಿದ್ದಾರೆ. ಸುತ್ತಮುತ್ತಲ ಕಾಲೇಜು, ಕಚೇರಿ, ಲೈಬ್ರರಿಗೆ ಬರುವ ವಿದ್ಯಾರ್ಥಿಗಳು, ಗಾಂಧಿ ಪಾರ್ಕಿಗೆ ಬರುವವರೆಲ್ಲ ಇಲ್ಲಿ ಬಂದು ಟೀ ಕುಡಿಯುತ್ತಾರೆ. ಹಿಜಾಬ್, ಕೇಸರಿ ಶಾಲು ಸಂಘರ್ಷ ಆರಂಭವಾದಾಗಿನಿಂದ ಮಲ್ಲಿಕಾರ್ಜುನ ಅವರ ಟೀ ಸ್ಟಾಲ್ ಸಂಕಷ್ಟಕ್ಕೆ ಸಿಲುಕಿದೆ.
‘ಕೊರೋನದಿಂದ ಒಂದೂವರೆ ವರ್ಷ ಅಂಗಡಿ ತೆಗೆದಿರಲಿಲ್ಲ. ಈಗ ಗಲಾಟೆ ಶುರುವಾದಾಗಿನಿಂದ ಅಂಗಡಿ ಬಂದ್ ಮಾಡಿಸಿದ್ದರು. ನಿನ್ನೆ ಸ್ವಲ್ಪ ಹೊತ್ತು ತೆಗೆಯಲು ಅವಕಾಶವಿತ್ತು. ಇವತ್ತು ಎಷ್ಟು ಹೊತ್ತಿನವರೆಗೆ ಅಂಗಡಿ ತೆಗೆಯಬಹುದು ಗೊತ್ತಿಲ್ಲ. ನಾಳೆ ಏನಾಗುತ್ತದೋ ತಿಳಿಯುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮಲ್ಲಿಕಾರ್ಜನ.
ಟೀ, ಕಾಫಿ ಶಾಪ್’ಗೆ ಪ್ರತಿದಿನ ಹಾಲು ತರಬೇಕು. ಹೆಚ್ಚು ಹಾಲು ತಂದಾಗ ಪೊಲೀಸರು ಅಂಗಡಿ ಬಂದ್ ಮಾಡಿಸಿದರೆ ಹಾಲು ವ್ಯರ್ಥವಾಗುತ್ತದೆ. ಕಡಿಮೆ ಹಾಲು ತಂದರೆ ಮತ್ತೊಂದು ರೀತಿಯ ಸಮಸ್ಯೆ. ಇವೆಲ್ಲದರ ನಡುವೆ ನಿಷೇಧಾಜ್ಞೆ ಇರುವುದರಿಂದ ಜನ ಗುಂಪುಗೂಡುವಂತಿಲ್ಲ.
ಮಲ್ಲಿಕಾರ್ಜುನ ಅವರು ಟೀ ಶಾಪ್’ನಿಂದಲೇ ಕುಟುಂಬ ನಿರ್ವಹಣೆ ಮಾಡಬೇಕಿದೆ. ಯಾರದ್ದೋ ಜಗಳಕ್ಕೆ ಮಲ್ಲಿಕಾರ್ಜುನ ಅವರು ಬೆಲೆ ತೆರಬೇಕಾಗಿ ಬಂದಿದೆ.
ಹಣ್ಣು, ಫ್ರೈಡ್ ರೈಸ್, ಸೋಡಾ
ಮಲ್ಲಿಕಾರ್ಜುನ ಅವರ ಕಥೆ ಮಾತ್ರವಲ್ಲ. ಶಿವಮೊಗ್ಗದ ಎನ್ಇಎಸ್, ಡಿವಿಎಸ್ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲು ಹತ್ತಾರು ಬಗೆಯ ವ್ಯಾಪಾರ ನಡೆಯುತ್ತಿದೆ. ಇವೆಲ್ಲವು ವಿದ್ಯಾರ್ಥಿ ಕೇಂದ್ರಿತ ವ್ಯಾಪಾರ ಚಟುವಟಿಕೆಯಾಗಿದೆ. ಇವುಗಳೆಲ್ಲವು ಈಗ ಸಂಕಷ್ಟಕ್ಕೆ ಸಿಲುಕಿವೆ.
ಫ್ರೈಡ್ ರೈಸ್ ಗಾಡಿಗಳು, ಮಿಕ್ಸೆಡ್ ಫ್ರೂಟ್ ಗಾಡಿ, ಸೋಡಾ ಗಾಡಿ, ಪಾನಿಪೂರಿ, ಗೂಡಂಗಡಿಗಳೆಲ್ಲವು ವಿದ್ಯಾರ್ಥಿ ಕೇಂದ್ರಿತವಾಗಿದ್ದವು. ಸಂಘರ್ಷ ಶುರು ಆದಾಗಿನಿಂದ ನಿಷೇಧಾಜ್ಞೆ ಇದೆ. ವಿದ್ಯಾರ್ಥಿಗಳು ಗುಂಪುಗೂಡಲು ಪೊಲೀಸರು ಅವಕಾಶ ನೀಡುತ್ತಿಲ್ಲ.
ಹಲವು ವಿದ್ಯಾರ್ಥಿಗಳು ಆತಂಕದಲ್ಲಿಯೇ ತರಗತಿವರೆಗೆ ಬಂದು ಹಿಂತಿರುಗುತ್ತಿದ್ದಾರೆ. ಹಲವು ಪೋಷಕರು ಬಂದು ಮಕ್ಕಳನ್ನು ಶಾಲೆ, ಕಾಲೇಜಿಗೆ ಬಿಟ್ಟು, ಬಳಿಕ ಕರೆದೊಯ್ಯುತ್ತಿದ್ದಾರೆ. ಇವೆಲ್ಲದರ ಪರಿಣಾಮ ಬೀದಿ ಬದಿ ವ್ಯಾಪಾರಿಗಳ ಬದುಕು ಬೀದಿಗೆ ಬಿದ್ದಂತಾಗಿದೆ. ಕೆಲವು ವ್ಯಾಪಾರಿಗಳು ತಮ್ಮ ಗಾಡಿಗಳನ್ನೆ ಇಲ್ಲಿಗೆ ತರುತ್ತಿಲ್ಲ. ಗಾಡಿ ತಂದು ನಿಲ್ಲಿಸಿಕೊಂಡವರಿಗೆ ವ್ಯಾಪಾರವಿಲ್ಲದೆ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಜೆರಾಕ್ಸ್ ಶಾಪ್ ಕಥೆ ಭಿನ್ನವೇನಲ್ಲ
ಹಲವು ಶಾಲೆ, ಕಾಲೇಜುಗಳು ಇರುವುದರಿಂದ ಈ ಭಾಗದಲ್ಲಿ ಜೆರಾಕ್ಸ್ ಶಾಪ್’ಗಳು ಕೂಡ ಹೆಚ್ಚಿವೆ. ವಿವಾದ ಆರಂಭವಾದಾಗಿನಿಂದ ಜೆರಾಕ್ಸ್ ಅಂಗಡಿಯವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿದ್ಯಾರ್ಥಿಗಳು ಬಾರದೆ ಜೆರಾಕ್ಸ್ ಅಂಗಡಿಯವರ ಬದುಕಿಗೆ ಮಸಿ ಅಂಟಿದಂತಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಹಿಜಾಬ್ ಹೋರಾಟ ಮತ್ತಷ್ಟು ತೀವ್ರ, ಇವತ್ತು ಎಲ್ಲೆಲ್ಲಿ ಏನೇನಾಯ್ತು?
ಕೊರೋನ ಲಾಕ್ ಡೌನ್’ನಿಂದಾಗಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಜೀವನ ನಿರ್ವಹಣೆ ಕಷ್ಟವಾಗಿತ್ತು. ಒಪ್ಪೊತ್ತಿನ ಊಟಕ್ಕೂ ಪರದಾಡಿದ್ದರು. ಈಗ ಚೇತರಿಕೆ ಕಾಣುವ ಹಂತದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಈ ವ್ಯಾಪಾರಿಗಳಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಯಾರದ್ದೋ ಪ್ರತಿಷ್ಠೆ, ಮತ್ಯಾರದ್ದೋ ಹೋರಾಟಕ್ಕೆ ದಿನದ ದುಡಿಮೆಯಿಂದ ಜೀವನ ನಡೆಸುತ್ತಿರುವ ಬಡಪಾಯಿಗಳ ಬದುಕು ಅನಿಶ್ಚಿತತೆಗೆ ಸಿಲುಕಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422