ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 14 ಫೆಬ್ರವರಿ 2022
ಶಿವಮೊಗ್ಗದಲ್ಲಿ ಹಿಜಾಬ್ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆ ವಿದ್ಯಾರ್ಥಿನಿಯರು ಪರೀಕ್ಷೆ ತ್ಯಜಿಸಿ ಹೊರ ನಡೆದಿದ್ದಾರೆ.
ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜ ಪ್ರೌಢಶಾಲೆ ವಿಭಾಗದಲ್ಲಿ ಘಟನೆ ಸಂಭವಿಸಿದೆ. 13 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ಹೊರ ನಡೆದಿದ್ದಾರೆ. ಎಂದಿನಂತೆ ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಗೆ ತೆರಳಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಹಿಜಾಬ್ ಧರಿಸದಂತೆ ಶಿಕ್ಷಕರು ಸೂಚಿಸಿದರು.
ಪರೀಕ್ಷಾ ಕೊಠಡಿಯಿಂದ ಹೊರ ನಡೆದರು
ವಿದ್ಯಾರ್ಥಿನಿಯರು ಬೆಳಗ್ಗೆ ಪರೀಕ್ಷಾ ಕೊಠಡಿಯೊಳಗೆ ಬಂದಿದ್ದರು. ಹಿಜಾಬ್, ಬುರ್ಖಾ ಧರಿಸುವಂತಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ. ಆದರೆ ಹಿಜಾಬ್ ತೆಗೆಯಲು ಒಪ್ಪದ 13 ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಯಿಂದ ಹೊರ ನಡೆದಿದ್ದಾರೆ. ಈ ಪೈಕಿ ಇಬ್ಬರು ಎಂಟು ಮತ್ತು ಒಂಭತ್ತನೆ ತರಗತಿಯವರು. ಉಳಿದವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಾಗಿದ್ದಾರೆ.
ಮನವೊಲಿಕೆ ಪ್ರಯತ್ನ ವಿಫಲ
ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಯಿಂದ ಹೊರೆ ನಡೆಯುವುದಾಗಿ ತಿಳಿಸಿದ್ದಾರೆ. ಆದರೆ ಶಿಕ್ಷಕರು ಅವರ ಮನವೊಲಿಸಿ ಪರೀಕ್ಷೆ ಎದುರಿಸುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಹೊರ ನಡೆದಿದ್ದಾರೆ.
ಡಿಡಿಪಿಐ ಹೇಳಿದ್ದೇನು?
ಈ ಕುರಿತು ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಮೇಶ್, ‘ಪರೀಕ್ಷೆ ಬರೆಯಲು ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯುವಂತೆ ತಿಳಿಸಲಾಗಿತ್ತು. ಮಕ್ಕಳಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದೇವೆ.’ ಎಂದು ತಿಳಿಸಿದರು.
ಪೋಷಕರು ಹೇಳುವುದೇನು?
‘ನಮ್ಮ ಮಕ್ಕಳು ತಲೆ ಮೇಲೆ ಸ್ಕಾರ್ಫ್ ಕಟ್ಟಿಕೊಂಡಿದ್ದಾರೆ. ಅದನ್ನು ತೆಗೆಯುವಂತೆ ತಿಳಿಸಿದರು. ಮೇಲಿಂದ ಆದೇಶವಿದೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನಮ್ಮ ಮಕ್ಕಳನ್ನು ಕರೆದೊಯ್ಯುತ್ತಿದ್ದೇವೆ.’ ಎಂದು ಪೋಷಕರೊಬ್ಬರು ತಿಳಿಸಿದರು.
ಬಿಗಿ ಭದ್ರೆತೆಯಲ್ಲಿ ಶಾಲೆ ಆರಂಭ
ಹಿಜಾಬ್, ಕೇಸರಿ ಶಾಲು ಸಂಘರ್ಷದ ಹಿನ್ನೆಲೆ ರಾಜ್ಯ ಸರ್ಕಾರ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಮೊದಲ ಹಂತದಲ್ಲಿ ಪ್ರೌಢಶಾಲೆಗಳ ತರಗತಿ ಆರಂಭವಾಗಿದೆ. ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ಪ್ರೌಢಶಾಲೆಗಳು ಪುನಾರಂಭವಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕಳೆದ ವಾರ ಬಾಪೂಜಿನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಲು ತೂರಟವಾಗಿತ್ತು. ಸಮೀಪದಲ್ಲೇ ಇರುವ ಬಿ.ಹೆಚ್.ರಸ್ತೆಯ ಸರ್ಕಾರಿ ಪ್ರೌಢಶಾಲೆ ಇದೆ. ಆದ್ದರಿಂದ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆ ಸಂಭವಿಸದಂತೆ ಮೀಸಲು ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ.
ತರಗತಿಗೆ ಹಿಜಾಬ್, ಬುರ್ಖಾ ಇಲ್ಲ
ಹಿಜಾಬ್, ಬುರ್ಖಾ, ಕೇಸರಿ ಶಾಲು ಧರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅದರಂತೆ ಇವತ್ತು ಶಿವಮೊಗ್ಗ ಜಿಲ್ಲೆಯ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ, ಹಿಜಾಬ್ ಸೇರಿದಂತೆ ಧರ್ಮ ಸೂಚಕ ಬಟ್ಟೆ ಧರಿಸದಂತೆ ನಿಗಾ ವಹಿಸಲಾಯಿತು. ಹಿಜಾಬ್, ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಸಮವಸ್ತ್ರದಲ್ಲಿ ಶಾಲೆಗೆ ಬರುವಂತೆ ಸೂಚಿಸಲಾಯಿತು.
‘ಶಿವಮೊಗ್ಗ ಜಿಲ್ಲೆಯ ಎಲ್ಲಾ ಕಡೆಯು ತರಗತಿಗಳು ನಡೆಯುತ್ತಿವೆ. ಸಾಗರ, ಶಿಕಾರಿಪುರದಲ್ಲಿ ಒಂದು ಕಡೆಯಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿದೆ. ಇದರ ಹೊರತು ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ಸೇರಿದಂತೆ ಎಲ್ಲೆಡೆಯು ತರಗತಿಗಳು ಎಂದಿನಂತೆ ನಡೆಯುತ್ತಿವೆ’ ಎಂದು ಡಿಡಿಪಿಐ ತಿಳಿಸಿದ್ದಾರೆ.
ಮತ್ತೊಂದು ಸ್ವರೂಪದ ಆತಂಕ
ಪ್ರೌಢಶಾಲೆ ಹಂತದಲ್ಲಿಯೇ ಕೆಲ ಶಾಲೆಗಳಲ್ಲಿ ಮಕ್ಕಳು ಹಿಜಾಬ್ ತೆಗೆಯಲು ಹಿಂದೇಟು ಹಾಕಿದ್ದಾರೆ. ಇದು ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಹೊಸ ತಲೆನೋವು ತಂದಿದೆ. ಪೋಷಕರು ಮತ್ತು ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನವಾಗುತ್ತಿದೆ. ಅಲ್ಲದೆ ಶಾಲೆಗಳ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿ | About Shivamogga Live
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422