ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 MARCH 2023
SHIMOGA : ರಾಜ್ಯಕ್ಕೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (Rashtriya Raksha University) ಮಂಜೂರಾಗಿದೆ. ಶಿವಮೊಗ್ಗದಲ್ಲಿಯೇ ಅದನ್ನು ಆರಂಭಿಸಲು ನಿರ್ಧರಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಪ್ರಸ್ತುತ ರಾಗಿಗುಡ್ಡದಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಿವಿ ಆರಂಭವಾಗಲಿದೆ. ನವುಲೆಯಲ್ಲಿ 8 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಅವರು ಗುರುತಿಸಿದ್ದಾರೆ. ಆಮೇಲೆ ಅಲ್ಲಿ ವಿಶ್ವವಿದ್ಯಾಲಯ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ದೇಶದಲ್ಲಿ ಎರಡನೇ ವಿವಿ
ಕೆಲ ತಿಂಗಳ ಹಿಂದೆ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿರುವ ರಾಷ್ಟ್ರೀಯ ರಕ್ಷಾ ವಿವಿಗೆ (Rashtriya Raksha University) ಭೇಟಿ ನೀಡಿದ್ದೆ. ಕರ್ನಾಟಕಕ್ಕೂ ಒಂದು ರಕ್ಷಾ ವಿವಿ ಬೇಕಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ. ಅದರಂತೆ ಗೃಹ ಇಲಾಖೆ ವಿವಿಯನ್ನು ಮಂಜೂರು ಮಾಡಿದೆ. ಶಿವಮೊಗ್ಗದಲ್ಲಿಯೇ ಇದನ್ನು ಸ್ಥಾಪಿಸಬೇಕು ಎಂದು ನಿರ್ಧರಿಸಿದ್ದೇವೆ. ಗುಜರಾತ್ ಬಳಿಕ ದೇಶದಲ್ಲಿಯೇ ಎರಡನೆ ವಿವಿ ಶಿವಮೊಗ್ಗಕ್ಕೆ ಒಲಿದಿದೆ ಎಂದರು.
ಯಾವೆಲ್ಲ ಕೋರ್ಸುಗಳಿವೆ?
ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ಡಿಪ್ಲೋಮಾ ಇನ್ ಪೊಲೀಸ್ ಸೈನ್ಸ್, ಬೇಸಿಕ್ ಕೋರ್ಸ್ ಇನ್ ಕರ್ಪೊರೇಟ್ ಸೆಕ್ಯೂರಿಟಿ ಮ್ಯಾನೇಜ್ಮೆಂಟ್, ಡಿಪ್ಲೋಮಾ ಇನ್ ಕ್ರಿಮಿನಲ್ ಇನ್ವೆಸ್ಟಿಗೇಷನ್, ಪಿಜಿ ಡಿಪ್ಲೋಮಾ ಇನ್ ಸೈಬರ್ ಸೆಕ್ಯೂರಿಟಿ ಅಂಡ್ ಸೈಬರ್ ಲಾ, ರೋಡ್ ಟ್ರಾಫಿಕ್ ಸೇಫ್ಟಿ ಮ್ಯಾನೇಜ್ಮೆಂಟ್, ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಎರಡು ವಾರಗಳ ಸರ್ಟಿಫಿಕೇಟ್ ಕೋರ್ಸ್, ಪೋಸ್ಟ್ ಗ್ರಾಜುಯೇಷನ್ ಡಿಪ್ಲೋಮಾ ಇನ್ ಕೋಸ್ಟಲ್ ಸೆಕ್ಯೂರಿಟಿ ಅಂಡ್ ಲಾ ಎನ್ಫೋರ್ಸ್ ಮೆಂಟ್ ಕೋರ್ಸುಗಳು ಇರಲಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಯಾರೆಲ್ಲ ಕೋರ್ಸುಗಳಿಗೆ ಸೇರಬಹುದು?
ಪಿಯುಸಿ ಉತ್ತೀರ್ಣರಾದವರಿಗೆ ಡಿಪ್ಲೋಮಾ ಕೋರ್ಸ್ ಹಾಗೂ ಪದವಿ ಕೋರ್ಸ್ ಇರಲಿವೆ. ಪದವಿ ಪೂರೈಸಿದವರು ಸ್ನಾತಕೋತ್ತರ ಪದವಿ ಪಡೆಯಬಹುದು. ಸೇನೆ ಮತ್ತು ಪೊಲೀಸ್ ಇಲಾಖೆಗೆ ಪೂರಕವಾದ ಕೋರ್ಸುಗಳು ಇರಲಿವೆ. ನೂತನ ವಿಶ್ವವಿದ್ಯಾಲಯದ ಮೂಲಕ ಹೊಸ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲೆಗೆ ನಾಲ್ಕನೆ ವಿಶ್ವವಿದ್ಯಾಲಯ
ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿ ಈಗಾಗಲೆ ಕುವೆಂಪು ವಿಶ್ವವಿದ್ಯಾಲಯವಿದೆ. ಇರುವಕ್ಕಿಯಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಇದೆ. ಆಯುಷ್ ವಿವಿ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಈಗ ರಾಷ್ಟ್ರೀಯ ರಕ್ಷಾ ವಿವಿಯೂ ಮಂಜೂರಾಗಿದೆ. ಈ ಮೂಲಕ ನಾಲ್ಕು ವಿವಿಗಳನ್ನು ಹೊಂದಿದ ಹೆಗ್ಗಳಿಕೆ ಶಿವಮೊಗ್ಗ ಜಿಲ್ಲೆಯದ್ದಾಗಲಿದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ ಹೆಸರಿನ ವಿಚಾರ, ಕುತೂಹಲ ಉಳಿಸಿ ಹೋದ ಪ್ರಧಾನಿ ಮೋದಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422