SHIVAMOGGA LIVE NEWS | 20 FEBRURARY 2023
SHIMOGA : ಸೋಗಾನೆ ವಿಮಾನ ನಿಲ್ದಾಣ (Airport) ಉದ್ಘಾಟನೆಗೆ ಸಜ್ಜಾಗಿದೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಿಲ್ದಾಣದ ಬೃಹತ್ ಟರ್ಮಿನಲ್ (Terminal) ಜನರ ಕಣ್ಸೆಳೆಯುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಸದ್ಯ ಜನರನ್ನು ನಿಲ್ದಾಣದೊಳಗೆ ಬಿಡುತ್ತಿಲ್ಲ. ಆದರೆ ಟರ್ಮಿನಲ್ ಬಿಲ್ಡಿಂಗ್ ಹೇಗಿದೆ? ಒಳಗೆ ಏನೇನಿದೆ ಎಂಬ ಕುತೂಹಲ ಜನರಲ್ಲಿದೆ.
ಟರ್ಮಿನಲ್ ಕಟ್ಟಡದೊಳಗೆ ಏನೇನಿದೆ? ಹೇಗಿದೆ?
ಶಿವಮೊಗ್ಗ ವಿಮಾನ ನಿಲ್ದಾಣದ (Shimoga Airport) ಟರ್ಮಿನಲ್ (Terminal) ಒಳಾಂಗಣದಲ್ಲಿ ಎರಡು ಪ್ರತ್ಯೇಕ ವಿಭಾಗ ರಚಿಸಲಾಗಿದೆ. ಪ್ರಯಾಣಿಕರು ಚೆಕ್ ಇನ್ (ವಿಮಾನ ಹತ್ತಲು ತೆರಳುವುದು) ಮತ್ತು ಚೆಕ್ ಔಟ್ ಗೆ (ವಿಮಾನ ನಿಲ್ದಾಣದಿಂದ ಹೊರಬರುವುದು) ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಚೆಕ್ ಇನ್ ವಿಭಾಗದಲ್ಲಿ ಏನೇನಿದೆ?
ವಿಮಾನ ಹತ್ತಲು ತೆರಳುವವರಿಗೆ ನಿಲ್ದಾಣದ ಕಟ್ಟಡದ ಎಡ ಭಾಗದ ಬಾಗಿಲಿನ ಮೂಲಕ ಒಳ ಪ್ರವೇಶ ಪಡೆಯಬೇಕು. ಅಲ್ಲಿ ಚೆಕ್ ಇನ್ ಕೌಂಟರ್ ಗಳನ್ನು ನಿರ್ಮಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ಟಿಕೆಟ್ ಕನ್ಫರ್ಮೇಷನ್, ಪಾಸ್ ಪೋರ್ಟ್ ಪರಿಶೀಲನೆಗೆ ಕ್ಯಾಬಿನ್ ಗಳನ್ನು ನಿರ್ಮಿಸಲಾಗಿದೆ.
ಚೆಕ್ ಇನ್ ಕ್ಯಾಬಿನ್ ಮುಂಭಾಗದಲ್ಲಿಯೆ ವೇಯ್ಟಿಂಗ್ ಲಾಂಜ್ ಇದೆ. ಸಾಲಾಗಿ ಚೇರ್ ಹಾಕಲಾಗಿದೆ. ಪ್ರಯಾಣಿಕರು, ಅವರನ್ನು ಬಿಡಲು ಬರುವವರು ಇಲ್ಲಿ ಕುಳಿತು ಕಾಯಬಹುದು.
ವೇಯ್ಟಿಂಗ್ ಲಾಂಜ್ ಪಕ್ಕದಲ್ಲಿಯೇ ಕೆಫೆಟೇರಿಯ ನಿರ್ಮಾಣವಾಗಿದೆ. ಕಾಫಿ, ತಿಂಡಿಯ ವ್ಯವಸ್ಥೆ ಇರಲಿದೆ. ಹೊಟೇಲ್ ಮಾದರಿಯಲ್ಲಿ ಟೇಬಲ್, ಚೇರ್ ಗಳನ್ನು ಅಳವಡಿಸಲಾಗಿದೆ.
ವಿಮಾನ ಹತ್ತಲು ತೆರಳುವವರಿಗೆ ಸೆಕ್ಯೂರಿಟಿ ಚೆಕ್ಕಿಂಗ್ ಕಡ್ಡಾಯ. ಹಾಗಾಗಿ ಟರ್ಮಿನಲ್ ನಿಂದ ವಿಮಾನದ ಕಡೆಗೆ ತೆರಳುವ ಪ್ರಯಾಣಿಕರ ತಪಾಸಣೆಗೆ ಮೆಟಲ್ ಡಿಟೆಕ್ಟರ್, ಎಕ್ಸ್ ರೇ ಬ್ಯಾಗೇಜ್ ಸ್ಕ್ಯಾನರ್ ಗಳನ್ನು ಅಳವಡಿಸಲಾಗಿದೆ. ಇಲ್ಲಿ ಪರಿಶೀಲನೆ ಮುಗಿದ ಬಳಿಕ ವಿಮಾನ ನಿಲ್ದಾಣದ ಬೇ ಅಥವಾ ವಿಮಾನಗಳು ನಿಲ್ಲುವ ಸ್ಥಳಕ್ಕೆ ತೆರಳಬಹುದಾಗಿದೆ.
ಚೆಕ್ ಔಟ್ ವಿಭಾಗದಲ್ಲಿ ಏನೇನಿದೆ?
ಇನ್ನು, ಚೆಕ್ ಔಟ್ ವಿಭಾಗದಲ್ಲಿಯು ಕೆಫೆಟೇರಿಯಾ, ವೇಯ್ಟಿಂಗ್ ಲಾಂಜ್ ಇದೆ. ಈ ಭಾಗದಲ್ಲಿ ಲಗೇಜ್ ಪಡೆದುಕೊಳ್ಳಲು ಲಗೇಜ್ ಕೊರೊಸೆಲ್ ಇದೆ. ವಿಮಾನದಿಂದ ತಂದ ಲಗೇಜುಗಳು ಈ ಕೊರೋಸಲ್ ನಲ್ಲಿ ಬರಲಿದೆ. ಆಯಾ ಪ್ರಯಾಣಿಕರು ತಮ್ಮ ಬ್ಯಾಗುಗಳನ್ನು ತೆಗೆದುಕೊಳ್ಳಬಹುದಾಗಿದೆ.
ಲಗೇಜನ್ನು ಟರ್ಮಿನಲ್ (Terminal) ಹೊರ ಭಾಗದವರೆಗೆ ಕೊಂಡೊಯ್ಯಲು ಕಾರ್ಟ್ ಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಲವು ಕಾರ್ಟ್ ಗಳನ್ನು ಸಿದ್ಧಪಡಿಸಿ ಇಡಲಾಗಿದೆ.
ಚೆಕ್ ಔಟ್ ವಿಭಾಗದಲ್ಲಿಯು ಮೆಟಲ್ ಡಿಟೆಕ್ಟರ್ ಸೇರಿದಂತೆ ವಿವಿಧ ಸುರಕ್ಷಿತ ಕ್ರಮಗಳನ್ನು ಅನುಸರಿಸಲಾಗಿದೆ.
ಇನ್ನು ಏನೇನಿದೆ ಟರ್ಮಿನಲ್ ಒಳಗೆ?
ಟರ್ಮಿನಲ್ ಒಳಾಂಗಣದಲ್ಲಿ ವಿಐಪಿ ಲಾಂಜ್ ಇದೆ. ಪ್ರಮುಖ ವ್ಯಕ್ತಿಗಳು, ರಾಜಕಾರಣಿಗಳು ನಿಲ್ದಾಣಕ್ಕೆ ಬಂದರೆ ಅವರು ಕೆಲ ಹೊತ್ತು ವಿರಮಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಚೆಕ್ ಇನ್ ಮತ್ತು ಚೆಕ್ ಔಟ್ ವಿಭಾಗಕ್ಕೆ ಪ್ರತ್ಯೇಕ ಬಾಗಿಲುಗಳಿವೆ.
ಉಳಿದಂತೆ ಏರ್ ಪೋರ್ಟ್ ಮ್ಯಾನೇಜರ್, ನಿರ್ವಾಹಕ ಸಿಬ್ಬಂದಿಯ ಕೊಠಡಿಗಳನ್ನು ಕೂಡ ಸ್ಥಾಪಿಸಲಾಗಿದೆ.
ಚೆಕ್ ಇನ್, ಚೆಕ್ ಔಟ್ ವಿಭಾಗಗಳಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರು, ಪುರುಷರಿಗೆ ಶೌಚಾಲಯಗಳಿವೆ. ವಿಶೇಷ ಚೇತನರ ಬಳಕೆಗೆ ಅನುಕೂಲವಾಗುವ ಹಾಗೆ ಶೌಚಾಲಯ ಸಿದ್ಧಪಡಿಸಲಾಗಿದೆ.
ಕುಡಿಯುವ ನೀರು, ಟರ್ಮಿನಲ್ ಒಳಾಂಗಣದಲ್ಲಿ ಎಟಿಎಂ ಕೇಂದ್ರಕ್ಕೆ ಸ್ಥಳ ಕಾಯ್ದಿರಿಸಲಾಗಿದೆ. ಟರ್ಮಿನಲ್ ಗೆ ಗಾಜಿನ ಬಾಗಿಲುಗಳನ್ನು ಅಳವಡಿಸಲಾಗಿದೆ. ಎಲ್ಲವೂ ಸೆನ್ಸರ್ ಬಾಗಿಲುಗಳಾಗಿದ್ದು ಜನರು ಹತ್ತಿರ ಬರುತ್ತಿದ್ದಂತೆ ತನ್ನಿಂತಾನೆ ತೆರೆದುಕೊಳ್ಳುತ್ತವೆ.
ಇದನ್ನೂ ಓದಿ – ವಿಮಾನ ನಿಲ್ದಾಣಕ್ಕೆ ಹೈ ಸೆಕ್ಯೂರಿಟಿ, ಪ್ರಧಾನಿ ಕಾರ್ಯಕ್ರಮದ ವೇದಿಕೆಗೆ ಶಂಕುಸ್ಥಾಪನೆ, ಹೇಗಿರುತ್ತೆ ಸ್ಟೇಜ್?
ಟರ್ಮಿನಲ್ ಒಳಾಂಗಣದಲ್ಲಿ ಗಾಳಿ, ಬೆಳಕಿಗೆ ಕೊರತೆ ಇಲ್ಲ. ಆಕರ್ಷಕ ಇಂಟೀರಿಯರ್ ಡಿಸೈನಿಂಗ್ ಇದೆ. ಪ್ರಯಾಣಿಕರು ಮತ್ತು ಅವರ ಲಗೇಜ್ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸದ್ಯ ಜಿಲ್ಲಾ ಕೇಂದ್ರವೊಂದರಲ್ಲಿ ಇರುವ ವಿಮಾನ ನಿಲ್ದಾಣದ ಟರ್ಮಿನಲ್ ಗಳ ಪೈಕಿ ಶಿವಮೊಗ್ಗದ್ದು ಅತ್ಯಂತ ಹೈಟೆಕ್ ಎಂದು ಹೇಳಲಾಗುತ್ತಿದೆ. ಸದ್ಯ ಟರ್ಮಿನಲ್ ನ ಕೊನೆಯ ಹಂತದ ಕೆಲಸಗಳು ನಡೆಯುತ್ತ್ತಿವೆ.