SHIVAMOGGA LIVE NEWS | 2 FEBRUARY 2024
SHIMOGA : ಸರ್ವೆ ಕಾರ್ಯಕ್ಕೆ ಆಗಮಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಮಲವಗೊಪ್ಪದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದೇಕೆ?
ತುಂಗಭದ್ರ ಸಕ್ಕರೆ ಕಾರ್ಖನೆ ಜಾಗದ ವಿವಾದ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದರು. ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗರು ಸರ್ವೆ ಕಾರ್ಯ ಆರಂಭಿಸಿದ್ದರು. ಈ ವೇಳೆ ಸರ್ವೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾರೆ.
ಜನರ ವಿರೋಧ ಏಕೆ?
ನಾಲ್ಕೈದು ದಶಕದಿಂದ ವಾಸಿಸುತ್ತ, ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಜಾಗ ಈಗ ಸಕ್ಕರೆ ಕಾರ್ಖಾನೆಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಇದರ ಸರ್ವೆ ಕಾರ್ಯದ ಬಳಿಕ ತಮ್ಮನ್ನು ಒಕ್ಕಲೆಬ್ಬಿಸುವ ಸಾಧ್ಯತೆ ಇದೆ. ಆದ್ದರಿಂದ ಸರ್ವೆ ಕಾರ್ಯ ನಡೆಸಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಜಾವಳ್ಳಿ, ಹಕ್ಕಿಪಿಕ್ಕಿ ಕ್ಯಾಂಪ್, ಬಸಾಪುರ, ಹಸೂಡಿ ಸೇರಿದಂತೆ ವಿವಿಧೆಡೆಯ ಗ್ರಾಮಸ್ಥರು, ರೈತರು ಸರ್ವೆ ಕಾರ್ಯಕ್ಕೆ ವಿರೋಧ ಮಾಡಿದ್ದಾರೆ.
ಸದ್ಯಕ್ಕೆ ಪರಿಸ್ಥಿತಿ ಶಾಂತ
ಸರ್ವೆ ಕಾರ್ಯಕ್ಕೆ ಸ್ಥಳೀಯರ ವಿರೋಧದ ಹಿನ್ನೆಲೆ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರು ಸ್ಥಳಕ್ಕೆ ಭೇಟಿ ನೀಡಿ, ಜನರನ್ನು ಸಮಾಧಾನಿಸಲು ಪ್ರಯತ್ನಿಸಿದರು. ಆದರೆ ಸರ್ವೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು. ಈ ಕುರಿತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸತ್ಯನಾರಾಯಣ ಅವರು ತಿಳಿಸಿದರು. ಅಲ್ಲದೆ ಸರ್ವೆ ಕಾರ್ಯ ಸ್ಥಗಿತಗೊಳಿಸಿದರು.
ಇದನ್ನೂ ಓದಿ – ವಾಹನ ಸವಾರರೆ ಹುಷಾರ್, ಮುಖ್ಯರಸ್ತೆಯ ಮಧ್ಯದಲ್ಲೇ ಬಾಯ್ತೆರೆದಿದೆ ಮ್ಯಾನ್ ಹೋಲ್
ತುಂಗಭದ್ರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸುಮಾರು 2 ಸಾವಿರ ಎಕರೆ ಜಾಗ ಸ್ವಾದೀನಕ್ಕೆ ಮುಂದಾಗಿದೆ. ಆದರೆ ಈ ಜಾಗದಲ್ಲಿ ಜನ ವಾಸವಾಗಿದ್ದು, ಕೃಷಿ ಚಟುವಟಿಕೆಯಲ್ಲಿಯು ತೊಡಗಿದ್ದಾರೆ. ವಿದ್ಯುತ್, ನೀರಿನ ಸಂಪರ್ಕ ಪಡೆಯಲಾಗಿದೆ. ಆದ್ದರಿಂದ ಈ ಜಾಗ ತಮ್ಮದು ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಫೆ.12ರ ಒಳಗೆ ಸರ್ವೆ ಕಾರ್ಯ ನಡೆಸುವಂತೆ ಹೈಕೋರ್ಟ್ ಸೂಚಿಸಿತ್ತು.
ಇದನ್ನೂ ಓದಿ – ನೀರಿನ ಸಂಪರ್ಕ ಕಡಿತದ ಎಚ್ಚರಿಕೆ, ಕಂದಾಯ ಪಾವತಿಗೆ ವಿವಿಧೆಡೆ ವಿಶೇಷ ಕೌಂಟರ್ ಸ್ಥಾಪನೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200