ಶಿವಮೊಗ್ಗ : ಈದ್ಗಾ ಮೈದಾನಕ್ಕೆ ಬೇಲಿ (fencing) ಹಾಕಿದ್ದ ವಿವಾದ ಹೊಸ ಸ್ವರೂಪ ಪಡೆದುಕೊಂಡಿದೆ. ಇವತ್ತು ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದ್ದು, ಮೈದಾನವು ವಕ್ಫ್ ಆಸ್ತಿ ಎಂದು ಜಿಲ್ಲಾಧಿಕಾರಿಗೆ ದಾಖಲೆ ಒದಗಿಸಿದೆ. ಇನ್ನೊಂದೆಡೆ ಈದ್ಗಾ ಮೈದಾನದಲ್ಲಿ ವಾಹನ ನಿಲುಗಡೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಇವತ್ತು ಇಡೀ ದಿನ ಏನೇನಾಯ್ತು?
ಬೆಳಗ್ಗೆಯು ಮುಂದುವರೆದ ಬಂದೋಬಸ್ತ್
ಬೇಲಿ ಹಾಕಿರುವುದಕ್ಕೆ ವಿರೋಧ, ಬೇಲಿ ತೆರವು ಕಾರ್ಯಾಚರಣೆ ಹಿನ್ನೆಲೆ ಈದ್ಗಾ ಮೈದಾನಕ್ಕೆ ಬಿಗಿ ಬಂದೋಬಸ್ತ್ ಹಾಕಲಾಗಿತ್ತು. ಇವತ್ತೂ ಬಂದೋಬಸ್ತ್ ಮುಂದುವರೆದಿತ್ತು. ಮೈದಾನದ ಸುತ್ತಲು ಕೆಎಸ್‌ಆರ್‌ಪಿ, ಡಿ.ಎ.ಆರ್ ಪೊಲೀಸರನ್ನು ನಿಯೋಜಿಸಲಾಗಿತ್ತು.

ಮೈದಾನದ ಸುತ್ತಲು ಇರುವ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿತ್ತು. ಆದರೆ ಬ್ಯಾಂಕ್, ಎ.ಟಿ.ಎಂ, ಮೆಡಿಕಲ್ ಶಾಪ್, ಕೆಲವು ಕಚೇರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ತಿಲಕನಗರ ಮುಖ್ಯರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ಇದನ್ನೂ ಓದಿ » ಭದ್ರಾವತಿಯಲ್ಲಿ ರಾತ್ರೋರಾತ್ರಿ ದಿಢೀರ್ ರಸ್ತೆ ತಡೆ, ಶಾರದಾ ಅಪ್ಪಾಜಿ ನೇತೃತ್ವದಲ್ಲಿ ಪ್ರತಿಭಟನೆ, ಕಾರಣವೇನು?
![]() |
ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ
ಇನ್ನು, ಬೇಲಿ (fencing) ವಿವಾದದ ಬೆನ್ನಿಗೆ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯದವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿದ್ದ ಪ್ರಮುಖಾಂಶ ಇಲ್ಲಿದೆ.

» ಪ್ರಮುಖಾಂಶ 1 : ತಿಲಕನಗರದ ಸುನ್ನಿ ಈದ್ಗಾ ಮೈದಾನ ವಕ್ಫ್ ಆಸ್ತಿ. ಮುನ್ಸಿಪಲ್ ಖಾತೆಯನ್ನು ಹೊಂದಿದೆ. ಈ ಮೈದಾನವು ಗಾಂಧಿ ಬಜಾರ್‌ನ ಮರ್ಕಜಿ ಸುನ್ನಿ ಜಾಮಿಯಾ ಮಸೀದಿ ಅಧೀನದಲ್ಲಿದೆ.

ಇದನ್ನೂ ಓದಿ » ಸ್ನೇಹಿತರೊಂದಿಗೆ ತೆರಳಿದ್ದ ಬಾಲಕ, ನೀರಿನಲ್ಲಿ ಮುಳುಗಿ ಸಾವು
» ಪ್ರಮುಖಾಂಶ 2 : ಈದ್ಗಾ ಮೈದಾನ ಮುಸ್ಲಿಂ ಸಮುದಾಯಕ್ಕೆ ಪವಿತ್ರ ಸ್ಥಳ. ಇಲ್ಲಿ ಅನಧಿಕೃತವಾಗಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿತ್ತು. ರಾತ್ರಿ ವೇಳೆ ಮತ್ತು ರಜಾ ದಿನಗಳಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು. ಈ ಸ್ಥಳದ ಸ್ವಚ್ಛತೆಗೆ ಲಕ್ಷಾಂತರ ರೂ. ಖರ್ಚಾಗುತ್ತಿದೆ.

» ಪ್ರಮುಖಾಂಶ 3 : ಮೈದಾನದ ಅಭಿವೃದ್ಧಿ ಕಾರ್ಯ ಮಾಡಿ, ಸಿಸಿಟಿವಿ ಅಳವಡಿಸಲು ತೀರ್ಮಾನಿಸಲಾಗಿದೆ. ಆದರೆ ಏ.1ರಂದು ಕೆಲವು ಕಿಡಿಗೇಡಿಗಳು ಅತಿಕ್ರಮವಾಗಿ ಪ್ರವೇಶಿಸಿ, ವಕ್ಫ್ ಆಸ್ತಿಯನ್ನು ಸಾರ್ವಜನಿಕ ಆಸ್ತಿ ಎಂದು ತಪ್ಪು ಮಾಹಿತಿ ಒದಗಿಸಿ ಪ್ರಚೋದನಕಾರಿ ಹೇಳಿಕೆ ನೀಡಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿದರು. ಈ ಸಂದರ್ಭ ಈದ್ಗಾ ಮೈದಾನ ವಕ್ಫ್ ಆಸ್ತಿ ಎಂಬ ದಾಖಲೆಗಳನ್ನು ಒದಗಿಸಿದರು. ಸಭೆ ನಂತರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಮೈದಾನವು ವಕ್ಫ್ ಆಸ್ತಿ ಎಂದು ನಮುದಾಗಿರುವ ದಾಖಲೆ ಒದಗಿಸಿದ್ದಾರೆ. ಈ ಕುರಿತು ಪಾಲಿಕೆಯ ದಾಖಲೆಗಳು, ಮೂಲ ದಾಖಲೆಳನ್ನು ಕೂಡ ಪರಿಶೀಲಿಸಬೇಕು. ಆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಈ ಮೈದಾನಕ್ಕೆ ಬ್ಯಾರಿಕೇಡ್ ಹಾಕಲಾಗಿರುತ್ತದೆ. ಇಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.
– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ಬ್ಯಾರಿಕೇಡ್ ತೆರವು, ವಾಹಿವಾಟು ಶುರು
ಸಭೆ ಬಳಿಕ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಈದ್ಗಾ ಮೈದಾನದ ಬಳಿ ತೆರಳಿ ಪರಿಶೀಲಿಸಿದರು. ರಸ್ತೆಗೆ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವು ಮಾಡುವಂತೆ ಸೂಚಿಸಿದರು.

ನಂತರ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇನ್ನು, ಈ ಭಾಗದಲ್ಲಿ ಕೆಲವು ಮಳಿಗೆಗಳ ಬಾಗಿಲು ತೆರದು ವಹಿವಾಟು ಆರಂಭಿಸಲಾಯಿತು.

ಶಿವಮೊಗ್ಗ ನಗರದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಮೈದಾನದಲ್ಲಿ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ. ಮುಂದಿನ ತೀರ್ಮಾನದ ಬಳಿಕ ತಿಳಿಸಲಾಗುತ್ತದೆ.
– ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ
ಈದ್ಗಾ ಮೈದಾನದ ಸುತ್ತಲು ಪೊಲೀಸ್ ಬಂದೊಬಸ್ತ್ ಮುಂದುವರೆದಿದೆ. ಬೇಲಿ ತೆರವು ಮಾಡಿ ಅಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200