ಶಿವಮೊಗ್ಗ : ಆಕಸ್ಮಿಕವಾದ ಒಂದೇ ಒಂದು ಬೆಂಕಿ ಕಿಡಿ ಸಾಕು, ಧಗಧಗ ಹೊತ್ತಿ ಉರಿಯಲಿದೆ ಇಡೀ ಪಾರ್ಕ್! ಕಂಡ ಕಂಡಲ್ಲಿ ಸಿಗುತ್ತೆ ಬಿಯರ್ ಬಾಟಲ್! ರಾಶಿ ರಾಶಿ ಕಸ, ಅಲ್ಲಲ್ಲಿ ಉಪಕರಣಗಳು ಧ್ವಂಸ! ಅಹ್ಲಾದಕರ ವಾತಾವರಣ ಸೃಷ್ಟಿಸಬೇಕಿದ್ದ ಉದ್ಯಾನವನ (Park) ಈಗ ಅನೈತಿಕ ಚಟುವಟಿಕೆಯ ತಾಣ!
ಇದಷ್ಟು ನಗರದ ಹೃದಯ ಭಾಗದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಗಾಂಧಿ ಪಾರ್ಕ್ (Gandhi Park) ವಾಸ್ತವ ಸ್ಥಿತಿ. ಈ ಉದ್ಯಾನದಿಂದ ಕೆಲವೇ ಮೀಟರ್ ಅಂತರದಲ್ಲಿ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಆಡಳಿತ ಕಚೇರಿ, ಮಹಾನಗರ ಪಾಲಿಕೆ ಕಚೇರಿಗಳಿವೆ. ಜಿಲ್ಲೆ ಮತ್ತು ಸಿಟಿಯ ಅಭಿವೃದ್ಧಿಯ ಹೊಣೆ ಹೊತ್ತ ಕಚೇರಿಗಳೆಲ್ಲ ಸುತ್ತಲು ಇದ್ದರು ಗಾಂಧಿ ಪಾರ್ಕ್ ಮಾತ್ರ ಕಸದ ಕೊಂಪೆಯಾಗಿದೆ. ಅನೈತಿಕ ಚಟುವಟಿಕೆಯ ತಾಣವಾಗಿದೆ.
ಕಸದ ರಾಶಿಯ ಸ್ವಾಗತ
ಗಾಂಧಿ ಪಾರ್ಕ್‌ಗೆ ಪ್ರವೇಶಕ್ಕೆ ವಯಸ್ಕರಿಗೆ 10 ರೂ., ಮಕ್ಕಳಿಗೆ 5 ರೂ. ಟಿಕೆಟ್ ಖರೀದಿಸಬೇಕು. ಒಳಗೆ ಕಾಲಿಡುತ್ತಲೆ ಕಸದ ರಾಶಿ, ಧೂಳು ಹಿಡಿದ ಕಾರಂಜಿ ಸ್ವಾಗತ ಕೋರುತ್ತವೆ.
ಒಣಗಿದ ಗಿಡ, ಮರಗಳು
ನಾನಾ ಬಗೆ ಗಿಡಮರಗಳು, ಚಿವುಗುಡುವ ಹಕ್ಕಿಗಳು ಗಾಂಧಿ ಪಾರ್ಕ್‌ನ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಸದ್ಯ ಗಿಡ, ಮರಗಳು ಒಣಗಿವೆ. ಒಣಗಿದ ಎಲೆ ರಾಶಿರಾಶಿಯಾಗಿ ಬಿದ್ದಿವೆ. ಆಕಸ್ಮಿಕವಾಗಿ ಬೆಂಕಿ ಕಿಡಿ ಬಿದ್ದರೆ ಇಡೀ ಗಾಂಧಿ ಪಾರ್ಕ್ ಧಗಧಗ ಹೊತ್ತಿ ಉರಿಯುವ ಅಪಾಯವಿದೆ.
ತುಕ್ಕು ಹಿಡಿದ ಮಕ್ಕಳ ಆಟಿಕೆಗಳು
ಮಕ್ಕಳ ಅಚ್ಚುಮೆಚ್ಚಿನ ತಾಣವಾಗಬೇಕಿದ್ದ ಗಾಂಧಿ ಪಾರ್ಕ್‌ಗೆ ಮಕ್ಕಳನ್ನು ಕರೆತಂದರೆ ಜೀವಕ್ಕೆ ಅಪಾಯವಾಗುವ ಸ್ಥಿತಿ ಇದೆ. ಆಟಿಕೆಗಳು ತುಕ್ಕು ಹಿಡಿದಿವೆ. ಮುರಿದು ಮೂಲೆಗುಂಪಾಗಿವೆ. ಟಾಯ್ ಟ್ರೈನ್ ಕೂಡ ತುಕ್ಕು ಹಿಡಿದು ಹಳಿ ಮೇಲೆ ನಿಂತಿದೆ.
ಕಂಡ ಕಂಡಲ್ಲೆಲ್ಲ ರಾಶಿ ರಾಶಿ ಕಸ
ಗಾಂಧಿ ಪಾರ್ಕ್‌ನಲ್ಲಿ ಎಲ್ಲೆ ನೋಡಿದರು ರಾಶಿ ರಾಶಿಯಾಗಿ ಕಸ ಒಟ್ಟುಗೂಡಿಸಲಾಗಿದೆ. ಪ್ಲಾಸ್ಟಿಕ್ ಬಾಟಲಿಗಳು, ಕವರ್, ಪೇಪರ್ ಸೇರಿ ಎಲ್ಲೆಲ್ಲು ಕಸ ಕಾಣಿಸುತ್ತದೆ.
ಕುಡಿಯೋಕೆ ನೀರು ಸಿಗಲ್ಲ
ಗಾಂಧಿ ಪಾರ್ಕ್‌ನಲ್ಲಿ ಕುಡಿಯೋಕೆ ನೀರು ಸಿಗಲ್ಲ. ಇಲ್ಲಿರುವ ಟ್ಯಾಂಕುಗಳು ನೀರು ಕಂಡು ವರ್ಷಗಳೇ ಕಳೆದಂತಿದೆ. ಸಿಂಕ್‌ಗಳು ತುಕ್ಕು ಹಿಡಿದಿವೆ. ಮುರಿದು ಬಿದ್ದಿವೆ. ಇದೇ ಕಾರಣಕ್ಕೆ ಸಾರ್ವಜನಿಕರು ಹಣ ಕೊಟ್ಟು ನೀರು ತರುತ್ತಾರೆ. ಕೆಲವರಂತು ಕೊನೆಗೆ ಪ್ಲಾಸ್ಟಿಕ್ ಬಾಟಲಿಯನ್ನು ಅಲ್ಲೆ ಬಿಸಾಡಿ ಹೋಗುತ್ತಿದ್ದಾರೆ.
ರಾರಾಜಿಸುತ್ತವೆ ಬಿಯರ್ ಬಾಟಲಿಗಳು
ಈ ಹಿಂದೆ ಯುವತಿಯೊಬ್ಬಳು ಇದೇ ಪಾರ್ಕ್‌ನಲ್ಲಿ ಬಿಯರ್ ಕುಡಿಯುವ ವಿಡಿಯೋ ವೈರಲ್ ಆಗಿತ್ತು. ಈಗಲು ಪರಿಸ್ಥಿತಿ ಭಿನ್ನವಾಗಿಲ್ಲ. ಕೆಲವರು ಗಾಂಧಿ ಪಾರ್ಕನ್ನು ಓಪನ್ ಬಾರ್ ಮಾಡಿಕೊಂಡಂತೆ ತೋರುತ್ತದೆ. ಅಲ್ಲಲ್ಲಿ ಖಾಲಿ ಬಿಯರ್ ಬಾಟಲಿಗಳು, ಟಿನ್‌ಗಳು ಕಾಣಿಸುತ್ತವೆ.
ಕರೆಂಟ್ ಶಾಕ್ ನಿಶ್ಚಿತ
ಮಕ್ಕಳು, ಹಿರಿಯ ನಾಗರಿಕರು ಹೆಚ್ಚಾಗಿ ಬರುವ ಜಾಗ ಆಗಿರುವುದರಿಂದ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿತ್ತು. ಆದರೆ ಗಾಂಧಿ ಪಾರ್ಕ್‌ನಲ್ಲಿ ಮಕ್ಕಳ ಕೈಗೆಟಕುವಂತೆ ಸ್ವಿಚ್ ಬೋರ್ಡುಗಳು, ವೈಯರ್‌ಗಳಿವೆ. ಇನ್ನು, ಅಲ್ಲಲ್ಲಿ ನೆಲದ ಮೇಲೆಯೇ ವಯರ್ ಹಾದು ಹೋಗಿವೆ. ಇದರ ಮೇಲೆ ಕಾಲಿಟ್ಟರೆ ಜನರಿಗೆ ಶಾಕ್ ಸಾದ್ಯತೆ ಅಲ್ಲಗಳೆಯುವಂತಿಲ್ಲ.
ಪಾಚಿಗಟ್ಟಿದ ಸ್ವಿಮ್ಮಿಂಗ್ ಪೂಲ್
ಗಾಂಧಿ ಪಾರ್ಕ್‌ನ (Park) ಒಳಗೆ ಮಕ್ಕಳು ಈಜಲು ಸ್ವಿಮ್ಮಿಂಗ್ ಪೂಲ್ ಇದೆ. ನಿರ್ವಹಣೆಯ ಕೊರತೆಯಿಂದ ಸ್ವಿಮ್ಮಿಂಗ್ ಪೂಲ್ ಪಾಚಿಗಟ್ಟಿದೆ. ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಕೊಠಡಿಗಳು ಧೂಳು ಹಿಡಿಯುತ್ತಿವೆ.
ಸೊಳ್ಳೆ ಕಾರ್ಖಾನೆಯಾದ ಕೊಳ
ಪುಟಾಣಿ ಟ್ರೈನ್ ನಿಲ್ದಾಣದ ಪಕ್ಕದಲ್ಲಿ ಕೊಳವಿದೆ. ಇದರಲ್ಲಿರುವ ನೀರನ್ನು ಸ್ವಚ್ಛಗೊಳಿಸಿ ಅದೆಷ್ಟು ಸಮಯವಾಗಿದೆಯೋ ತಿಳಿಯದು. ನೀರಿನಲ್ಲಿ ಕಸ ತೇಲುತ್ತಿದೆ. ಸದ್ಯ ಈ ಕೊಳ ಸೊಳ್ಳೆ ಉತ್ಪಾದನೆಯ ಕಾರ್ಖಾನೆಯಾಗಿದೆ.
ಗಾಂಧಿ ಪಾರ್ಕ್‌ನ ವಾಕಿಂಗ್ ಪಾಥ್‌ನಲ್ಲಿ ಅಲ್ಲಲ್ಲಿ ಸ್ಲ್ಯಾಬ್ ಕಿತ್ತು ಪಕ್ಕಕ್ಕೆ ಜೋಡಿಸಲಾಗಿದೆ. ಶೌಚಾಲಯವಂತು ಬಾಗಿಲು ತೆರೆಯದೆ ವರ್ಷಗಳೆ ಕಳೆದಂತಿದೆ. ಸುರಕ್ಷತೆಗೆ ಸಿಸಿಟಿವಿ ಇಲ್ಲ. ಅಲಂಕಾರಿಕ ದೀಪಗಳು ಒಡೆದು ಹೋಗಿವೆ.
ಟಿಕೆಟ್‌ಗೆ ದರ ವಿಧಿಸೋದ್ಯಾಕೆ?
ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಗಾಂಧಿ ಪಾರ್ಕ್ (Park) ಅಭಿವೃದ್ಧಿಗೆ ವಿಶೇಷ ಕಾಳಜಿ ತೋರಿದ್ದರು. ಅನುದಾನ ಬಿಡುಗಡೆ ಮಾಡಿಸಿ, ಪ್ರತಿ ಬಾರಿ ಶಿವಮೊಗ್ಗ ಪ್ರವಾಸದ ಸಂದರ್ಭ ಗಾಂಧಿ ಪಾರ್ಕ್‌ಗೆ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲಿಸುತ್ತಿದ್ದರು. ಆದರೆ ಈಗ ಗಾಂಧಿ ಪಾರ್ಕ್ ಸ್ಥಿತಿ ಹೇಳತೀರದಾಗಿದೆ. ಹೀಗಿದ್ದೂ, ಪಾರ್ಕ್ ಪ್ರವೇಶಕ್ಕೆ ಟಿಕೆಟ್ ಪಡೆಯಬೇಕು ಎಂಬ ನಿಯಮವಿದೆ.

ಗಾಂಧಿ ಪಾರ್ಕ್ ನಿರ್ವಹಣೆಗೆ ಖಾಸಗಿಯವರಿಗೆ ಟೆಂಡರ್ ನೀಡಲಾಗಿದೆ. ಆದರೆ ಇಲ್ಲಿನ ಅವಸ್ಥೆ ಗಮನಿಸಿದರೆ ಇನ್ನು ಕೆಲವು ತಿಂಗಳು ಇದೇ ಸ್ಥಿತಿ ಮುಂದುವರೆದರೆ ಗಾಂಧಿ ಪಾರ್ಕ್‌ಗೆ ಜನ ಕಾಲಿಡದ ಸ್ಥಿತಿಯಾಗಲಿದೆ. ಪಾಲಿಕೆ ಅಧಿಕಾರಿಗಳು ಕಣ್ತೆರೆದು, ತಕ್ಷಣ ಕ್ರಮ ವಹಿಸಬೇಕಿದೆ.
ಇದನ್ನೂ ಓದಿ » ಸಿಗಂದೂರು ಸೇತುವೆ, ಮತ್ತೊಂದು ಡ್ರೋಣ್ ವಿಡಿಯೋ ರಿಲೀಸ್ ಮಾಡಿದ ಸಂಸದ ರಾಘವೇಂದ್ರ
poor maintenance of gandhi park
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200