ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 3 ಜನವರಿ 2020
ಜಿಲ್ಲಾಧಿಕಾರಿ ಕಚೇರಿ ಮುಂದೆ ಇವತ್ತು ವಿಭಿನ್ನ ಪ್ರತಿಭಟನೆ ನಡೆಯಿತು. ತಮ್ಮನ್ನು ಬಳಕೆ ಮಾಡಿಕೊಳ್ಳದೆ ಹಣ ನುಂಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೆಂಚು, ರಿಪೀಸು, ಮೊಳೆಗಳು ಮೌನ ಪ್ರತಿಭಟನೆ ನಡೆಸಿದವು.
ತಾಳಗುಪ್ಪ ಗ್ರಾಮ ಪಂಚಾಯಿತಿ ಸದಸ್ಯ ಎಸ್.ವಿ.ಓಂಕಾರ, ಹೆಂಚು, ರಿಪೀಸು, ಮೊಳೆಯನ್ನು ಮುಂದಿಟ್ಟುಕೊಂಡು ಇವತ್ತು ಮೌನ ಪ್ರತಿಭಟನೆ ನಡೆಸಿದರು.
ವಿಭಿನ್ನ ಪ್ರತಿಭಟನೆಗೆ ಕಾರಣವೇನು?
ತಾಳಗುಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೊಳಿಸುವ ಕುರಿತು ಸಾಗರ ತಾಲೂಕು ಪಂಚಾಯಿತಿ ನಿರ್ಧರಿಸಿತ್ತು. ಇದಕ್ಕಾಗಿ 1.05 ಲಕ್ಷ ರೂ. ಮಂಜೂರಾಗಿತ್ತು. ಆದರೆ ಮೇಲ್ಛಾವಣಿ ಕಾಮಗಾರಿಯೇ ಆರಂಭವಾಗದೆ 1,04,473 ರೂ. ಬಿಲ್ ಪಾಸ್ ಆಗಿದೆ ಎಂದು ಓಂಕಾರ ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರಿಗೆ ದೂರು ನೀಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿದ ಹಿನ್ನೆಲೆ, ಕಾರ್ಯಪಾಲಕ ಎಂಜಿನಿಯರ್ ಅವರು ಶಾಲೆಗೆ ಭೇಟಿ ನೀಡಿದ್ದರು. ಪರಿಶೀಲನೆ ಬಳಿಕ 25 ಸಾವಿರ ರೂ. ಮೊತ್ತದ ಕೆಲಸವಾಗಿದೆ ಎಂದು ಅವರು ವರದಿಯಲ್ಲಿ ತಿಳಿಸಿದ್ದರು. ಮೇಲ್ಛಾವಣಿಯನ್ನೇ ಮಾಡದೆ ಬಿಲ್ ಪಾಸ್ ಮಾಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರೂ, ಈವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿ ಓಂಕಾರ ಅವರು ಪ್ರತಿಭಟನೆ ನಡೆಸಿದರು.
ವ್ಯಥೆ ಹೇಳಿಕೊಂಡ ಹೆಂಚು, ರಿಪೀಸು, ಮೊಳೆ
ಜಿಲ್ಲಾಧಿಕಾರಿ ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಓಂಕಾರ ಅವರು, ಮೇಲ್ಛಾವಣಿಗೆ ಬಳಕೆಯಾಗುವ ಹೆಂಚು, ರಿಪೀಸು, ಮೊಳೆಯನ್ನು ಮುಂದಿಟ್ಟುಕೊಂಡಿದ್ದರು. ಇವುಗಳ ಎದುರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಂಚು, ರಿಪೀಸು, ಮೊಳೆಯೇ ಮನವಿ ಮಾಡುವ ರೀತಿಯಲ್ಲಿದ್ದ ಫ್ಲೇಕರ್ ಇತ್ತು. ಇದು ಎಲ್ಲರ ಗಮನ ಸೆಳೆಯಿತು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಓಂಕಾರ ಅವರಿಂದ ಮಾಹಿತಿ ಪಡೆದರು. ಅಲ್ಲದೆ ಈ ಕುರಿತು ಸಂಬಂಧಿಸಿದವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422