ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 FEBRUARY 2024
SHIMOGA : ಅಗ್ನಿಶಾಮಕ ಸಿಬ್ಬಂದಿಯ ಸತತ ಕಾರ್ಯಾಚರಣೆ ಬಳಿಕ ಹುಂಡೈ ಶೋ ರೂಂನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನಂದಿದೆ. ಅವಘಡದಿಂದಾದ ನಷ್ಟದ ಲೆಕ್ಕಾಚಾರ ಇನ್ನಷ್ಟೆ ಆರಂಭವಾಗಬೇಕಿದೆ. ಮೇಲ್ನೋಟಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವ ಅಂದಾಜು ಇದೆ.
ಏನೇನೆಲ್ಲ ನಷ್ಟವಾಗಿದೆ?
ರಾಹುಲ್ ಹುಂಡೈ ಶೋ ರೂಂನಲ್ಲಿದ್ದ ಎರಡು ಕಾರುಗಳು, ಟಾಟಾ ಶೋ ರೂಂಗೆ ಸೇರಿದ ನಾಲ್ಕು ಕಾರುಗಳು ಬೆಂಕಿಯಿಂದ ಹಾನಿಯಾಗಿವೆ ಎಂದು ಹೇಳಲಾಗುತ್ತಿದೆ. ಹುಂಡೈ ಶೋಂನ ಒಳಗಿದ್ದ ಕಂಪ್ಯೂಟರ್ ಉಪಕರಣಗಳು, ಕಾರುಗಳ ಬಿಡಿ ಭಾಗಗಳು, ಶೋ ರೂಂನ ಒಂದು ಭಾಗ ಸಂಪೂರ್ಣ ಸುಟ್ಟು ಹೋಗಿದೆ. ಇನ್ನು, ಹುಂಡೈ ಶೋ ರೂಂನ ಕಾಂಪೌಂಡ್ ಪಕ್ಕದಲ್ಲೇ ಟಾಟಾ ಶೋಂನ ಆವರಣದೊಳಗೆ ನಿಲ್ಲಿಸಿದ್ದ ಟಾಟಾ ಕಾರುಗಳಿಗೆ ಬೆಂಕಿ ತಗುಲಿದ್ದು ಭಾಗಶಃ ಸುಟ್ಟು ಹೋಗಿವೆ.
ರಾತ್ರಿ ಹೇಗಿತ್ತು ಕಾರ್ಯಾಚರಣೆ?
ಕಳೆದ ರಾತ್ರಿ ಹುಂಡೈ ಶೋ ರೂಂ ಕಟ್ಟಡದ ಬಲಭಾಗದಲ್ಲಿ ಬೆಂಕಿ ಕಾಣಿಸಿತ್ತು. ಕೂಡಲೆ ಸೆಕ್ಯೂರಿಟಿಗಳು, ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೆಲವೆ ನಿಮಿಷದಲ್ಲಿ ಬೆಂಕಿಯ ಕೆನ್ನಾಲಗೆಗೆ ಶೋರೂಂನ ಬಲ ಭಾಗದಲ್ಲಿ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಒಂದರ ಹಿಂದೆ ಒಂದು ವಾಹನ ತಂದು ನೀರು ಹಾಯಿಸಿದರು. ಸ್ಥಳೀಯರು, ಕಾರು ಶೋ ರೂಂನ ಸಿಬ್ಬಂದಿಗಳು ಕೂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಇನ್ನು, ಶೂ ರೂಂನ ಕೆಳಗಿರುವ ಸರ್ವಿಸ್ ಸೆಂಟರ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಈ ಹಿನ್ನೆಲೆ ಆಗ್ನಿಶಾಮಕ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಮತ್ತು ಮಾಸ್ಕ್ ಧರಸಿ ಅಂಡರ್‌ಗ್ರೌಂಡ್‌ಗೆ ಇಳಿದು ಕಾರ್ಯಾಚರಣೆ ನಡೆಸಿದರು. ಪೆಟ್ರೋಲ್, ಡಿಸೇಲ್ ಅಥವಾ ಸಿಎನ್‌ಜಿ ಇರುವ ಸಾಧ್ಯತೆ ಇದ್ದಿದ್ದರಿಂದ ಕಾರ್ಯಾಚರಣೆ ವೇಳೆ ಎಚ್ಚರ ವಹಿಸಲಾಗಿತ್ತು. ಸುತ್ತಮುತ್ತಲ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.
ಶೋ ರೂಂ ಮುಂದೆ ಜನವೋ ಜನ
ಕಾರು ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡ ವಿಚಾರ ಕಾಡ್ಗಿಚ್ಚಿನಂತೆ ಹರಡಿತ್ತು. ಸುತ್ತಮುತ್ತಲ ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಶೋ ರೂಂ ಮುಂಭಾಗ ಜಮಾಯಿಸಿದ್ದರು. ಮಕ್ಕಳು, ಮಹಿಳೆಯರು, ವೃದ್ಧರು ಕೂಡ ಬೆಂಕಿ ಹೊತ್ತಿ ಉರಿಯುತ್ತಿರುವುದು, ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ ವೀಕ್ಷಿಸಿದರು. ಈ ಹಿನ್ನೆಲೆ ಶಂಕರಮಠ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇನ್ನು, ಜನರು ಶೋ ರೂಂ ಸಮೀಪ ಬಾರದಂತೆ ತಡೆಯಲು ಪೊಲೀಸರು ಆಗಾಗ ಲಾಠಿ ಬೀಸುವಂತೆ ಮಾಡಿ ಗುಂಪು ಚದುರಿಸುತ್ತಿದ್ದರು.
ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾದಲ್ಲೂ ಧಗಧಗ
ಕಾರು ಶೋ ರೂಂಗೆ ಬೆಂಕಿ ಬಿದ್ದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡಿತು. ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ವಿಡಿಯೋಗಳು ಹರಿದಾಡಿದವು. ವಿವಿಧ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಾಚರಣೆಯ ಲೈವ್ ವಿಡಿಯೋ ಮಾಡಿ ಪ್ರಕಟಿಸಲಾಗುತ್ತಿತ್ತು. ಇದರ ಜೊತೆಗೆ ‘ನೂರಾರು ಕಾರು ಭಸ್ಮ’, ‘40 ಕಾರು ಸುಟ್ಟು ಹೋಗಿವೆ’ ಎಂಬ ಸುಳ್ಳು ಸುದ್ದಿಗಳು ರಾರಾಜಿಸಿದವು.
ತಡರಾತ್ರಿವರೆಗೂ ನಡೆಯಿತು ಕಾರ್ಯಾಚರಣೆ
ತಡರಾತ್ರಿವರೆಗೂ ನೀರು ಹಾಯಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸದ್ಯ ಕಾರು ಶೋಂ ಸುಟ್ಟು ಕರಕಲಾಗಿ ನಿಂತಿದೆ. ಬೆಳಗ್ಗೆಯಿಂದಲೆ ಜನರು ಶೋ ರೂಂ ಬಳಿ ಆಗಮಿಸಿ ಫೋಟೊ, ವಿಡಿಯೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕೋಟೆ ಠಾಣೆ ಪೊಲೀಸರನ್ನು ಬಂದೋಬಸ್ತ್ ಮತ್ತು ಸಂಚಾರ ದಟ್ಟಣೆ ತಡೆಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ – ರಥೋತ್ಸವ ಹಿನ್ನೆಲೆ, ಮೈಸೂರು – ತಾಳಗುಪ್ಪ ರೈಲು ಒಂದು ನಿಮಿಷ ನಿಲುಗಡೆ
ಇನ್ನಷ್ಟೆ ನಷ್ಟದ ಅಂದಾಜು
ಕಾರು ಶೋ ರೂಂಗೆ ಬೆಂಕಿ ಹೊತ್ತಿದ್ದೇಕೆ ಎಂಬುದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಶಾರ್ಟ್ ಸರ್ಕಿಟ್ ಅಥವಾ ಪೆಟ್ರೋಲ್, ಡಿಸೇಲ್ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆಯ ಅನ್ನುವುದು ಇನ್ನಷ್ಟೆ ಗೊತ್ತಾಗಬೇಕಿದೆ. ಇನ್ನು, ಅಗ್ನಿ ಅವಘಡದಿಂದ ಉಂಟಾದ ನಷ್ಟದ ಅಂದಾಜು ಮಾಡಬೇಕಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಇಲಾಖೆ, ಶೋ ರೂಂ ಆಡಳಿತ ಈ ಕುರಿತು ಪರಿಶೀಲಿಸಿ ನಷ್ಟದ ಅಂದಾಜು ಮಾಡಬೇಕಿದೆ.
ಇದನ್ನೂ ಓದಿ – BREAKING NEWS – ಶಿವಮೊಗ್ಗದ ಕಾರು ಶೋ ರೂಂನಲ್ಲಿ ಅಗ್ನಿ ಅವಘಡ, ಧಗಧಗ ಹೊತ್ತಿ ಉರಿದ ಮೇಲ್ಛಾವಣಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422