SHIVAMOGGA LIVE NEWS, 15 FEBRUARY 2025
ಶಿವಮೊಗ್ಗ : ಬೆಂಗಳೂರಿನ ಬಳಿಕ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳು (Bike Taxi) ರಾಜ್ಯದ ವಿವಿಧ ನಗರಗಳಿಗೆ ತನ್ನ ಜಾಲ ವಿಸ್ತರಿಸಿದೆ. ಶಿವಮೊಗ್ಗ ಸಿಟಿಯಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಚಾರ ಶುರುವಾಗಿದೆ. ಇದು ಆಟೋ ಚಾಲಕರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಏನಿದು ರ‍್ಯಾಪಿಡೋ ಬೈಕ್ ಟ್ಯಾಕ್ಸಿ?
ಕಾರು ಟ್ಯಾಕ್ಸಿ ಮಾದರಿಯಲ್ಲಿಯೇ ಬೈಕ್ ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆಯೇ ರ‍್ಯಾಪಿಡೋ. ಬೆಂಗಳೂರು ಮೂಲದ ಈ ಸಂಸ್ಥೆ ದೇಶದ ನಾನಾ ಭಾಗದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಹೊಂದಿದೆ. ಬೈಕ್ ಇರುವವರು ರ‍್ಯಾಪಿಡೋ ಜೊತೆ ಒಪ್ಪಂದ ಮಾಡಿಕೊಂಡು ಈ ಟ್ಯಾಕ್ಸಿ ಸೇವೆ ನೀಡಬಹುದು. ಪ್ರಯಾಣಿಕರು ಮೊಬೈಲ್ ಆ್ಯಪ್‌ನಲ್ಲಿ ಬೈಕ್ ಟ್ಯಾಕ್ಸಿ ಬುಕ್ ಮಾಡಬಹುದು. ಕೆಲವೇ ಹೊತ್ತಿಗೆ ಬೈಕ್ ಟ್ಯಾಕ್ಸಿ ಪ್ರಯಾಣಿಕ ನಿಗದಿಪಡಿಸಿದ ಸ್ಥಳಕ್ಕೆ ಬಂದು ನಿಲ್ಲುತ್ತದೆ. ನಗರ ವ್ಯಾಪ್ತಿಯಲ್ಲಿ ಯಾವುದೇ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೈಕ್ ಟ್ಯಾಕ್ಸಿಯಲ್ಲಿ ಸುಲಭಕ್ಕೆ ತೆರಳಬಹುದಾಗಿದೆ.
ಕಿಲೋ ಮೀಟರ್‌ಗೆ ಇಂತಿಷ್ಟು ಎಂದು ನಿಗದಿಯಾದ ದರವನ್ನು ಪ್ರಯಾಣಿಕ ಪಾವತಿಸಬೇಕು. ಇದರಲ್ಲಿ ರ‍್ಯಾಪಿಡೋ ಸಂಸ್ಥೆಗು ಕಮಿಷನ್ ಸಲ್ಲಲಿದೆ. ಬೈಕ್ ಚಾಲಕನಿಗೆ ಬಾಡಿಗೆ ಹಣ ಸಿಗಲಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ರ‍್ಯಾಪಿಡೋ ಆಟೋ, ಕಾರು ಟ್ಯಾಕ್ಸಿ ಸರ್ವಿಸ್ ಕೂಡ ನೀಡುತ್ತಿದೆ.
ಶಿವಮೊಗ್ಗಕ್ಕೂ ರ‍್ಯಾಪಿಡೋ ಲಗ್ಗೆ
ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ, ಈಗ ಶಿವಮೊಗ್ಗದಲ್ಲಿಯು ಸರ್ವಿಸ್ ಶುರು ಮಾಡಿದೆ. ಈಗಾಗಲೇ ಹಲವು ಬೈಕ್ ಸವಾರರು ರ‍್ಯಾಪಿಡೋಗೆ ನೋಂದಣಿ ಮಾಡಿಕೊಂಡಿದ್ದಾರೆ. ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ.
‘ಪ್ರಸ್ತುತ ನಾಲ್ಕು ಕಿ.ಮೀ.ವರೆಗಿನ ಪ್ರಯಾಣಕ್ಕೆ 20 ರೂ., ನಾಲ್ಕು ಕಿ.ಮೀ ನಂತರದ ಪ್ರಯಾಣಕ್ಕೆ 30 ರೂ. ದರ ವಿಧಿಸಲಾಗುತ್ತಿದೆʼ ಅನ್ನುತ್ತಾರೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯೊಂದರ ಚಾಲಕ.
ಆಟೋ ಚಾಲಕರಿಗೆ ಢವಢವ
ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಿಂದಾಗಿ ಆಟೋ ಚಾಲಕರು ಆತಂಕಕ್ಕೀಡಾಗಿದ್ದಾರೆ. ದಿನಕ್ಕೆ ಸಿಗುತ್ತಿದ್ದ ಒಂದೆರಡು ಬಾಡಿಗೆಯನ್ನೂ ಬೈಕ್ ಟ್ಯಾಕ್ಸಿಗಳು ಕಸಿಯಬಹುದು ಎಂದು ಚಿಂತೆಗೀಡಾಗಿದ್ದಾರೆ. ಶಿವಮೊಗ್ಗದಲ್ಲಿ ಸುಮಾರು ಆರು ಸಾವಿರ ಆಟೋಗಳಿವೆ. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಆಟೋಗಳ ಮೇಲೆ ಅವಲಂಬಿತವಾಗಿದ್ದಾರೆ.
ಆಟೋ ಚಾಲಕರು ಇಡೀ ದಿನ ದುಡಿದರು ದಿನಕ್ಕೆ 400 ರಿಂದ 500 ರೂ. ಸಂಪಾದಿಸಿದರೆ ಹೆಚ್ಚು. ಇದರಲ್ಲಿಯೇ ಆಟೋದ ಸಾಲದ ಕಂತು, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಪೆಟ್ರೋಲ್ ಸೇರಿದಂತೆ ನಾನಾ ಖರ್ಚು ನಿಭಾಯಿಸಬೇಕು. ಕೆಲವು ಆಟೋ ಚಾಲಕರು ಬೆಳಗಿನ ಜಾವದಿಂದ ರಾತ್ರಿವರೆಗು ನಿರಂತರ ಕೆಲಸ ಮಾಡುತ್ತಾರೆ. ಊಟ, ತಿಂಡಿ ಮಾಡಿದರೆ ಹಣ ಖರ್ಚು ಅಂತಾ ಹಸಿವಿನಲ್ಲಿ ದಿನ ದೂಡುತ್ತಾರೆ.
• ಹೆಚ್.ಸತೀಶ್, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ
ಆಟೋಗಳಿಗೆ ಆರ್‌ಟಿಒ ಅನುಮತಿ ಬೇಕು, ಎಸ್‌ಎಂಜಿ ನಂಬರ್ ಇರಬೇಕು. ಮೀಟರ್ ಕಡ್ಡಾಯವಾಗಿ ಹಾಕಬೇಕು. ಚಾಲಕರು ಯುನಿಫಾರಂ ಧರಿಸಬೇಕು. ಅಪ್ಪಿತಪ್ಪಿ ಆಟೋ ನಿಲ್ದಾಣದಿಂದ ಬೇರೆಡೆ ಆಟೋ ನಿಲ್ಲಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ ರ‍್ಯಾಪಿಡೋಗೆ ಇದ್ಯಾವುದು ಅನ್ವಯವಾಗುವುದಿಲ್ಲ. ಖಾಸಗಿ ವಾಹನದಲ್ಲಿ ನಿಯಮಬಾಹಿರವಾಗಿ ಬಾಡಿಗೆಗೆ ಓಡಿಸಿದರು ಪೊಲೀಸರು, ಆರ್‌ಟಿಒ ಅಧಿಕಾರಿಗಳು ಕೇಳುವುದೇ ಇಲ್ಲ.
• ಮಂಜುನಾಥ್, ಆಟೋ ಚಾಲಕ
ರ‍್ಯಾಪಿಡೋ ಮೇಲೆ ಮುಗಿಬಿದ್ದ ಚಾಲಕರು
ಬೈಕುಗಳು ಖಾಸಗಿ ವಾಹನ. ಇದರಲ್ಲಿ ಪ್ರಯಾಣಿಕರನ್ನು ಬಾಡಿಗೆಗೆ ಕರೆದೊಯ್ಯವಂತಿಲ್ಲ. ಹಾಗಿದ್ದೂ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳು ಶಿವಮೊಗ್ಗದಲ್ಲಿ ಕಾರ್ಯಾಚರಿಸುತ್ತಿರುವುದು ಆಟೋ ಚಾಲಕರ ನಿದ್ದೆಗೆಡಿಸಿದೆ. ಹಾಗಾಗಿ ಆಟೋ ಚಾಲಕರೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ವಿರುದ್ಧ ಮುಗಿಬಿದ್ದಿದ್ದಾರೆ. ಕಳೆದ ಎರಡ್ಮೂರು ದಿನದಿಂದ ಆಟೋ ಚಾಲಕರೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕರನ್ನು ಪತ್ತೆ ಮಾಡಿ, ಬೈಕುಗಳನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದಾರೆ.
ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಪತ್ತೆ ಮಾಡಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸುತ್ತಿದ್ದೇವೆ. ಹೊರ ರಾಜ್ಯದ ಬೈಕುಗಳು, ಸರಿಯಾದ ದಾಖಲೆ ಹೊಂದಿರದ ವಾಹನಗಳು ಇವುಗಳಲ್ಲಿ ಇದ್ದಾವೆ. ಈ ಸೇವೆಯಿಂದ ಸ್ಥಳೀಯ ಆಟೋ ಚಾಲಕರು, ಕ್ಯಾಬ್‌ಗಳಿಗೆ ಸಮಸ್ಯೆಯಾಗುತ್ತಿದೆ. ರ‍್ಯಾಪಿಡೋಗೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸದ್ದೇವೆ.
• ಹೆಚ್.ಸತೀಶ್, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ
ರ‍್ಯಾಪಿಡೋ ಪರ, ವಿರುದ್ಧ ಚರ್ಚೆ
ಶಿವಮೊಗ್ಗದಲ್ಲಿ ಸದ್ದಿಲ್ಲದೆ ರ‍್ಯಾಪಿಡೋ ಸೇವೆ ಆರಂಭವಾಗಿದ್ದರು, ಸಾರ್ವಜನಿಕರು ಇದರ ಉಪಯೋಗ ಪಡೆಯಲು ಆರಂಭಿಸಿದ್ದಾರೆ. ಹಾಗಾಗಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಲ್ಲಿ ಓಡಾಡಿದ್ದೆ. ಶಿವಮೊಗ್ಗದಲ್ಲಿಯು ಸರ್ವಿಸ್ ಶುರುವಾಗಿದೆ ಅಂತಾ ಗೊತ್ತಾಯಿತು. ಮನೆ ಬಾಗಿಲಿಗೆ ಬೈಕ್ ಬರುತ್ತೆ. ಅವರೆ ಕರೆದೊಯ್ದು ನಿಗದಿತ ಸ್ಥಳಕ್ಕೆ ಬಿಡುತ್ತಾರೆ. ಸೇವೆ ಚನ್ನಾಗಿದೆ. ಆದರೆ ಇದು ಕಾನೂನು ಬಾಹಿರ ಅನ್ನುವುದರ ಕುರಿತು ನಮಗೆ ಮಾಹಿತಿ ಇಲ್ಲ. ರ‍್ಯಾಪಿಡೋದವರು ಆಟೋಗಳನ್ನು ತಮ್ಮ ಆ್ಯಪ್ ವ್ಯಾಪ್ತಿಗೆ ತಂದರೆ ಒಳ್ಳೆಯದು.
• ವಿನೀತ್, ವಿದ್ಯಾರ್ಥಿ
ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳಲ್ಲಿ ತೆರಳುವಾಗ ಅಪಘಾತ ಸಂಭವಿಸಿದರೆ ಹೊಣೆ ಯಾರು? ಇನ್ಷುರೆನ್ಸ್ ಕ್ಲೇಮ್ ಆಗಲಿದೆಯೇ ಅನ್ನುವುದು ಆಟೋ ಚಾಲಕರ ಪ್ರಶ್ನೆ. ಇತ್ತ ನಿರುದ್ಯೋಗಿ ಯುವಕರಿಗೆ, ಬೈಕ್ ಇದ್ದು ಪಾರ್ಟ್ ಟೈಮ್ ಉದ್ಯೋಗ ಮಾಡ ಬಯಸುವವರಿಗೆ ರ‍್ಯಾಪಿಡೋ ಉತ್ತಮ ವೇದಿಕೆ ಎಂಬ ವಾದವು ಇದೆ. ಹಾಗಾಗಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಪರ ಮತ್ತು ವಿರುದ್ಧ ಚರ್ಚೆಗಳಿವೆ. ಆದರೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಆಟೋ ಚಾಲಕರು ಮತ್ತು ಅವಲಂಬಿತ ವರ್ಗಕ್ಕೆ ದೊಡ್ಡ ಪೆಟ್ಟು ನೀಡಲಿದೆ.
ಸರ್ಕಾರವೆ ಆಟೋಗಳಿಗೆ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಬೇಕು. ಇದರಿಂದ ಆಟೋ ಚಾಲಕರಿಗೆ ಅನುಕೂಲವಾಗಲಿದೆ. ಅಲ್ಲದೆ ಖಾಸಗಿ ವಾಹನದಲ್ಲಿ ಬಾಡಿಗೆಗೆ ಅನುಮತಿ ನೀಡಬಾರದು ಎಂಬ ಆಗ್ರಹವಿದೆ.
ಇದನ್ನೂ ಓದಿ » ಮಹಿಳೆಯರೆ ಭೀಮರಾಜ್ ಬಗ್ಗೆ ಹುಷಾರ್, ಈತನ ಮೇಲಿದೆ ಒಂದು ಡಜನ್ ಕೇಸ್, ಏನಿದು ಪ್ರಕರಣ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200