ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಜನವರಿ 2022
ನಂದಿತ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಜ.30ರಂದು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಸಚಿವರಾಗಿದ್ದಾಗ ಅರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿಯ ಮುಖಂಡರುಗಳು ನಂದಿತ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಅರಗ ಜ್ಞಾನೇಂದ್ರ ಎಂಬ ಕೋಮುವಾದಿ ಗೃಹಮಂತ್ರಿ ನನ್ನನ್ನು ಸೋಲಿಸಲು ಯಾವುದೇ ರಾಜಕೀಯ ಆಯುಧ ಸಿಗದೆ ಹತಾಶರಾಗಿ ನಂದಿತ ಆತ್ಮಹತ್ಯೆ ಪ್ರಕರಣವನ್ನೇ ಮುಂದಿಟ್ಟುಕೊಂಡು ಕೊಲೆ ಅತ್ಯಾಚಾರವೆಂದು ಬಿಂಬಿಸಿ ಕೋಮುಗಲಭೆ ಸೃಷ್ಠಿಸಿ ರಾಜಕೀಯ ಲಾಭಕ್ಕಾಗಿ ಕೃಷ್ಣ ಪೂಜಾರಿ ಕುಟುಂಬವನ್ನು ರಸ್ತೆಗೆ ತಂದು ನಿಲ್ಲಿಸಿ ನನ್ನ ಮೇಲೆ ಆಪಾದನೆ ಹೊರಿಸಿದ್ದರು. ಈ ಆರೋಪದ ಹಿಂದೆ ಅನೇಕ ಬ್ರಹ್ಮಾಂಡ ಭ್ರಷ್ಟರು, ನಂಬಿಕೆ ದ್ರೋಹಿಗಳು ಕೂಡ ಸೇರಿಕೊಂಡು ನನ್ನನ್ನು ಸೋಲಿಸಲು ಕಳ್ಳದಾರಿ ಮಾಡಿಕೊಂಡರು ಎಂದು ಆರೋಪಿಸಿದರು.
ಈಗ ಅರಗ ಜ್ಞಾನೇಂದ್ರ ಅವರೇ ಗೃಹ ಮಂತ್ರಿಯಾಗಿದ್ದಾರೆ. ಅವರು ನಿರ್ಭಿತಿಯಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬಹುದಾಗಿದೆ. ನಾನು ಹಸ್ತಕ್ಷೇಪ ಮಾಡಿದೆ ಎಂಬ ಆರೋಪವನ್ನು ಕೂಡ ಅವರು ಹೊರಿಸುತ್ತಿದ್ದಾರೆ. 2014ರಿಂದ ನಂದಿತಾ ಸಾವಿನ ನಂತರ ಇದೇ ಅರಗ ಜ್ಞಾನೇಂದ್ರ ಅವರು 3 ವರ್ಷಗಳ ಕಾಲ ವೈಕುಂಠ ಸಮಾರಾಧನೆ ಮಾಡಿದ್ದರು. ಗೆದ್ದ ಮೇಲೆ ವೈಕುಂಠ ಸಮಾರಾಧನೆ ಮಾಡಲಿಲ್ಲ. 2018ರ ಚುನಾವಣೆ ಸಂದರ್ಭದಲ್ಲಿ ನಂದಿತಾ ಮನೆಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮೀತ್ ಶಾ ಕೂಡ ಸಿಬಿಐ ತನಿಖೆಗೆ ಒಳಪಡಿಲಾಗುವುದು ಎಂದಿದ್ದರು. ಈಗ ಸಿಬಿಐ ತನಿಖೆ ನಡೆಸಲಿ ಎಂದು ಕಿಮ್ಮನೆ ರತ್ನಾಕರ್ ಸವಾಲು ಹಾಕಿದರು.
ಸಿಬಿಐ ತನಿಖೆಯಲ್ಲಿ ಒಂದು ವೇಳೆ ತಾವು ತಪ್ಪಿತಸ್ಥರು ಎಂದು ಸಾಕ್ಷಿ ಸಮೇತ ಸಾಬೀತಾದರೆ ನಾನು ರಾಜಕೀಯ ಕ್ಷೇತ್ರದಿಂದ ನಿವೃತ್ತಿ ಘೋಷಿಸುತ್ತೇನೆ. 6 ತಿಂಗಳೊಳಗೆ ಸಿಬಿಐ ತನಿಖಾ ವರದಿ ಕೊಡಿ ಇಲ್ಲವೇ ಶಾಸಕ ಸ್ಥಾನಕ್ಕೆ ನೀವು ರಾಜೀನಾಮೆ ನೀಡಿ. ಇಂತಹ ಸುಳ್ಳು ಆರೋಪಗಳಿಂದ ಜನರ ಭಾವನೆಗಳನ್ನು ದಿಕ್ಕು ತಪ್ಪಿಸಿದ್ದಿರಿ. ಮಾನ್ಯ ಮುಖ್ಯಮಂತ್ರಿಗಳು ಈ ಎಲ್ಲಾ ಘಟನೆಗಳ ಹಿನ್ನಲೆಯಲ್ಲಿ ಅಗರ ಜ್ಞಾನೇಂದ್ರ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಹಾಗೆಯೇ ತೀರ್ಥಹಳ್ಳಿಯ ಅರಣ್ಯಾಧಿಕಾರಿಗಳು ಗೃಹ ಸಚಿವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ದೌರ್ಜನ್ಯ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಫೆ.3ರಂದು ಗುಡ್ಡೆಕೊಪ್ಪದಿಂದ ತೀರ್ಥಹಳ್ಳಿ ಅರಣ್ಯ ಸಂರಕ್ಷಾಧಿಕಾರಿಗಳ ಕಚೇರಿಯವೆರಗೆ ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳುವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಕೆ.ಬಿ.ಪ್ರಸನ್ನಕುಮಾರ್, ಎನ್.ರಮೇಶ್, ಯಮುನಾ ರಂಗೇಗೌಡ, ವಿಜಯಕುಮಾರ್, ದೇವಿಕುಮಾರ್, ರಾಘವೇಂದ್ರ, ಆದರ್ಶನ ಹುಂಚದಕಟ್ಟೆ, ಗಾಜನೂರು ಗಣೇಶ್ ಮುಂತಾದವರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422